ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್ ವಿಚಾರದಲ್ಲಿ ವಿವಾದ ಉಂಟಾಗಿದೆ. ಕಾರ್‌ಪೂಲಿಂಗ್ ಅನ್ನು ಬೆಂಗಳೂರಿನಲ್ಲಿ ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಣೆ ನೀಡಿದ್ದಾರೆ. ಹಾಗೆಯೇ ಅಕ್ಟೋಬರ್ 3 ರಂದು ಕಾರ್‌ಪೂಲಿಂಗ್ ಅಪ್ಲಿಕೇಶನ್ ಕ್ವಿಕ್ ರೈಡ್ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ.
ಕ್ವಿಕ್ ರೈಡ್‌ನ ಸಂಸ್ಥಾಪಕ ಮತ್ತು ಸಿಇಒ ಕೆಎನ್‌ಎಂ ರಾವ್ ವಿದೇಶದ ನಗರಗಳಲ್ಲಿ ಇರುವ ಮಾದರಿಯಲ್ಲಿಯೇ ಬೆಂಗಳೂರಿನಲ್ಲಿಯೂ ಕಾರ್‌ಪೂಲಿಂಗ್‌ಗೆ ಮಾರ್ಗಸೂಚಿಗಳನ್ನು ರಚಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪತ್ರವನ್ನು ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿರುವ ಟ್ರಾಫಿಕ್, ವಾಹನದಿಂದಾಗಿ ಆಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್‌ಪೂಲಿಂಗ್‌ಗೆ ಕರ್ನಾಟಕ ಸರ್ಕಾರದ ಬೆಂಬಲವನ್ನು ಕ್ವಿಕ್ ರೈಡ್ ಕೋರಿದೆ.

ಈ ವಿಚಾರದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಸ್ಟೇಟ್ ಇನ್‌ಸ್ಟಿಟ್ಯೂಟ್ ಫಾರ್ ದಿ ಟ್ರಾನ್ಸ್‌ಫಾರ್ಮೆಷನ್ ಆಫ್ ಕರ್ನಾಟಕ (ರಾಜ್ಯ ಯೋಜನಾ ಮಂಡಳಿ) ಯ ಉಪಾಧ್ಯಕ್ಷ ಎಂ.ವಿ.ರಾಜೇಗೌಡ ಹಾಗೂ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಈ ಉಪಸ್ಥಿತರಿದ್ದರು. ಇನ್ನು ಸರ್ಕಾರವು ಬಳಿಕ ಸ್ಪಷ್ಟಣೆ ನೀಡಿದೆ.
ಕಾರ್‌ಪೂಲಿಂಗ್ ನಿಷೇಧವೇ?
ಕಾರ್‌ಪೂಲಿಂಗ್ ಅನ್ನು ಬೆಂಗಳೂರಿನಲ್ಲಿ ನಿಷೇಧ ಮಾಡಲಾಗುತ್ತಿದೆ ಎಂದು ಭಾನುವಾರ ವರದಿಯಾಗಿದೆ. ಇದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಕಾರ್‌ಪೂಲಿಂಗ್‌ಗೆ ಯಾವುದೇ ನಿಷೇಧವನ್ನು ವಿಧಿಸಿಲ್ಲ ಎಂದು ಕರ್ನಾಟಕ ಸರ್ಕಾರ ಅಕ್ಟೋಬರ್ 2 ರಂದು ಸ್ಪಷ್ಟಪಡಿಸಿದೆ. ಪರವಾನಗಿಗೆ ಅರ್ಜಿಸಲ್ಲಿಸಲು ತಿಳಿಸಿದೆ.
"ಎಲ್ಲರೂ ಕೂಡಾ ಸರ್ಕಾರದ ನಿಯಮ ಪಾಲಿಸಬೇಕು. ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ಖಾಸಗಿ ವಾಹನಗಳನ್ನು ಕಾರ್ ಪೂಲಿಂಗ್‌ಗೆ ಬಳಸುವುದು ಕಾನೂನುಬಾಹಿರವಾಗಿದೆ. ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ಕಾರುಗಳನ್ನು ಸರಿಯಾದ ಮಾರ್ಗಸೂಚಿ ಪಾಲಿಸಿ ಕಾರ್‌ಪೂಲಿಂಗ್‌ಗೆ ಬಳಕೆ ಮಾಡಬಹುದು," ಎಂದು ಸರ್ಕಾರ ಹೇಳಿದೆ.
ಬೆಂಗಳೂರಿನ ಖಾಸಗಿ ಸಾರಿಗೆ ಸಂಸ್ಥೆಗಳು ಸೆಪ್ಟೆಂಬರ್ 11 ರಂದು ಪ್ರತಿಭಟನೆಯನ್ನು ಮಾಡಿದ್ದು ಖಾಸಗಿ ಸಾರಿಗೆ ಸಂಸ್ಥೆಗಳ ಬೇಡಿಕೆಗಳ ಪಟ್ಟಿಯಲ್ಲಿ ಕಾರ್‌ಪೂಲಿಂಗ್ ಅನ್ನು ನಿಷೇಧಿಸುವುದು ಕೂಡಾ ಒಂದಾಗಿದೆ. ಆದರೆ ಬೆಂಗಳೂರು ಸಂಚಾರ ಪೊಲೀಸರು ನಗರದಲ್ಲಿ ಟ್ರಾಫಿಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್‌ಪೂಲಿಂಗ್‌ಗೆ ಅಧಿಕ ಉತ್ತೇಜನ ನೀಡುತ್ತಾರೆ.
ಕಾರ್‌ಪೂಲಿಂಗ್ ವಾಣಿಜ್ಯೇತರ ಚಟುವಟಿಕೆಯಾಗಿ ಪರಿಗಣಿಸಿ!
ಕ್ವಿಕ್ ರೈಡ್‌ನ ಪತ್ರದಲ್ಲಿ ನೀತಿ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ಕಾರ್‌ಪೂಲಿಂಗ್ (ವಾಹನ ಶೇರಿಂಗ್ ಮತ್ತು ಲಾಭವಿಲ್ಲದೆ ವೆಚ್ಚಮಾಡುವುದು) ಅನ್ನು ವಾಣಿಜ್ಯೇತರ ಚಟುವಟಿಕೆಯಾಗಿ ಪರಿಗಣಿಸಲು ಮನವಿ ಮಾಡಲಾಗಿದೆ. ಹಾಗೆಯೇ ಬೆಂಗಳೂರಿನಲ್ಲಿ ಈ ಸೇವೆ ನಿಷೇಧ ಮಾಡಬಾರದು ಎಂದು ಉಲ್ಲೇಖಿಸಲಾಗಿದೆ. ಕಾರ್‌ಪೂಲಿಂಗ್ ಅಕ್ರಮ ಎಂಬ ಇತ್ತೀಚಿನ ವರದಿ ಆತಂಕಕಾರಿ ಎಂದಿದೆ.
"ಸಿಂಗಾಪುರ ಮತ್ತು ಇತರ ದೇಶಗಳು ತಮ್ಮ ರಸ್ತೆ ಮತ್ತು ಸಾರಿಗೆ ಕಾಯಿದೆಗಳಲ್ಲಿ ಕಾರ್‌ಪೂಲಿಂಗ್‌ಗೆ ವಿನಾಯಿತಿ ನೀಡುತ್ತದೆ. ನಮ್ಮಲಿಯೂ ಕಾರ್‌ಪೂಲಿಂಗ್‌ಗೆ ಮಾರ್ಗಸೂಚಿ ರಚಿಸಬೇಕು. ಬೆಂಗಳೂರಿನಲ್ಲಿ ಕ್ವಿಕ್ ರೈಡ್ ಮಾತ್ರ 13 ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಕಳೆದ ಎಂಟು ವರ್ಷಗಳಲ್ಲಿ 1.85 ಕೋಟಿ ರೂಪಾಯಿಗೂ ಹೆಚ್ಚು ಕಾರ್‌ಪೂಲ್ ಟ್ರಿಪ್‌ಗಳನ್ನು ಮಾಡಿದೆ," ಎಂದು ಹೇಳಿದೆ.
ಸಾರಿಗೆ ಸಚಿವರು ಹೇಳುವುದೇನು?
"ಕ್ವಿಕ್ ರೈಡ್ ನಾವು ವಾಣಿಜ್ಯ ಉದ್ದೇಶ ಹೊಂದಿಲ್ಲ, ಟ್ರಾಫಿಕ್ ಕಡಿಮೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದೆ. ಆದ್ದರಿಂದ ನಾನು ಲಿಖಿತವಾಗಿ ನೀಡುವಂತೆ ವಿನಂತಿಸಿದೆ. ಕ್ವಿಕ್ ರೈಡ್ ಎನ್‌ಐಟಿಐ ಆಯೋಗ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಕಾರ್‌ಪೂಲಿಂಗ್‌ನ ಮಾರ್ಗಸೂಚಿಗಳನ್ನು ಸಹ ಪ್ರಸ್ತುತಪಡಿಸಿದರು," ಎಂದು ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
"ನಾನು ಸಾರಿಗೆ ಕಾರ್ಯದರ್ಶಿ ಎನ್‌ವಿ ಪ್ರಸಾದ್ ಬಳಿ ಈ ಬಗ್ಗೆ ಪರಿಶೀಲನೆ ನಡೆಸಲು ತಿಳಿಸಿದ್ದೇನೆ. ಅದಕ್ಕೆ ಅನುಗುಣವಾಗಿ ಮಾರ್ಗಸೂಚಿಗಳನ್ನು ರೂಪಿಸಲು ಸೂಚಿಸಿದ್ದೇನೆ. ಬೇಡಿಕೆಗಳನ್ನು ಪರಿಶೀಲಿಸಿ 10 ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ಕಾರ್ ಪೂಲಿಂಗ್ ಆ್ಯಪ್ ಗಳು ಕಾರ್ಯನಿರ್ವಹಿಸಬಹುದು. ಈಗ ಬ್ಯಾನ್ ಮಾಡಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಲಾಗುತ್ತಿದೆ," ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications