ಬೆಂಗಳೂರು, ನವೆಂಬರ್ 5: OYO ಹೋಟೆಲ್ಸ್ ಮತ್ತು ಹೋಮ್ಸ್ ಸ್ಥಾಪಕ ರಿತೇಶ್ ಅಗರ್ ವಾಲ್ ಮತ್ತು ಇತರ ಆರು ಮಂದಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಕಳೆದ ಐದು ತಿಂಗಳಿಂದ ರೂಮ್ ಬಾಡಿಗೆ ಪಾವತಿ ಮಾಡಿಲ್ಲ ಎಂದು ಹೋಟೆಲ್ ನವರೊಬ್ಬರು ಆರೋಪಿಸಿ, ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.
ಬೆಂಗಳೂರಿನ ದೊಮಲೂರಿನಲ್ಲಿ ರಾಕ್ಸೆಲ್ ಇನ್ ಹೆಸರಿನ ಹೋಟೆಲ್ ಮಾಲೀಕ ಬೆಟ್ಜ್ ಫರ್ನಾಂಡಿಜ್ ದೂರು ನೀಡಿದ್ದಾರೆ. OYOದಿಂದ ರೂಮ್ ಬುಕ್ ಮಾಡಿ, ತಿಂಗಳಿಗೆ ಏಳು ಲಕ್ಷ ರುಪಾಯಿ ಪಾವತಿಸುವುದಾಗಿ ಹೇಳಿದ್ದರು. ಆದರೆ ಮೇ ತಿಂಗಳಿನಿಂದ ಈಚೆಗೆ OYOದಿಂದ ಬಾಡಿಗೆ ಪಾವತಿಸಿಲ್ಲ. ಅವೆಲ್ಲ ಸೇರಿ ಮೂವತ್ತೈದು ಲಕ್ಷ ರುಪಾಯಿ ಬಾಕಿ ಉಳಿದಿದೆ ಎಂದು ಆರೋಪಿಸಿದ್ದಾರೆ.
ರಿತೇಶ್ ಅಗರ್ ವಾಲ್ ಹೊರತುಪಡಿಸಿ ರೋಹಿತ್ ಶ್ರೀವಾಸ್ತವ, ಮಧ್ವೇಂದ್ರ ಕುಮಾರ್, ಗೌರಬ್ ಡೇ, ಪ್ರತೀಕ್ ಅಗರ್ ವಾಲ್, ಮಂಜೀತ್ ಸಿಂಗ್ ಮತ್ತು ಮೃಮೋನಿ ಚಕ್ರಬರ್ತಿ ಎಂಬುವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಗುರುವಾರದಂದು ತನಿಖಾಧಿಕಾರಿ ಎದುರು ಹಾಜರಾಗುವಂತೆ ತಿಳಿಸಲಾಗಿದೆ.

ಇನ್ನು ಹೋಟೆಲ್ ಮಾಲೀಕನ ದೂರಿಗೆ ಪ್ರತಿಯಾಗಿ OYOದಿಂದ ದೂರು ದಾಖಲಿಸುವುದಾಗಿ ಹೇಳಿದೆ. ಅಪ್ರಸ್ತುತ ಕಾನೂನು ವಿಚಾರಗಳನ್ನು ಬಳಸಿಕೊಂಡು ಸಿವಿಲ್ ವ್ಯಾಜ್ಯವನ್ನು ವೈಭವೀಕರಿಸಿ, ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ನಮ್ಮ ವಕೀಲರು ಈ ವಿಚಾರದ ಬಗ್ಗೆ ಕಾನೂನು ಕ್ರಮದ ಸಾಧ್ಯತೆ ಪರಿಶೀಲಿಸುತ್ತಿದ್ದು, ಹೋಟೆಲ್ ಅವರು ಮಾಡಿದ ಆರೋಪ ಸರಿಯಲ್ಲ. ಇದು ಮಾನಹಾನಿ ಮಾಡಿದಂತೆ ಎಂದಿದೆ.


Click it and Unblock the Notifications