ದೇಶವ್ಯಾಪಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್‌ಬಿಐ ಬ್ಯಾಂಕ್ ಗ್ರಾಹಕರಿಗೆ ಸಮಸ್ಯೆ ಎದುರಾಗಬಾರದು ಎಂದು ಸಾಲದ ಕಂತುಗಳನ್ನು ಕಟ್ಟುವುದನ್ನು ಮೂರು ತಿಂಗಳು ಮುಂದೂಡಿತ್ತು. ಹೀಗಾಗಿ ಕ್ರೆಡಿಟ್ ಕಾರ್ಡ್ ಹೊರತುಪಡಿಸಿ ಸಹಕಾರಿ ಬ್ಯಾಂಕ್‌ನಿಂದ ಹಿಡಿದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದವರು ಪ್ರತಿ ತಿಂಗಳು ಕಟ್ಟುತ್ತಿದ್ದ ಕಂತುಗಳು(ಇಎಂಐ)ಗಳನ್ನು ಮೂರು ತಿಂಗಳವರೆಗೆ ಮುಂದೂಡಿಕೆಯಾಗಿದೆ.
ಆರ್‌ಬಿಐ ಆದೇಶ ಪಾಲಿಸಿದ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬ್ಯಾಂಕುಗಳೆಲ್ಲಾ ಗ್ರಾಹಕರ ಸಾಲ ಹೊಂದಾಣಿಕೆಯ ಆದೇಶ ಪ್ರಕಟಿಸಿವೆ. ಜೂನ್ ತಿಂಗಳವರೆಗೂ ಇಎಂಐ ಪಾವತಿಗಳನ್ನು ಮುಂದೂಡಲಾಗಿದೆ ಎಂದು ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿವೆ. ಸದ್ಯ ಯಾವೆಲ್ಲಾ ಬ್ಯಾಂಕುಗಳು ಆದೇಶವನ್ನು ಹೊರಡಿಸಿವೆ ಎಂಬುದು ಈ ಕೆಳಕಂಡಂತಿದೆ.
ದೇಶದ ಬೃಹತ್ ಬ್ಯಾಂಕ್ SBIನಿಂದ ಇಎಂಐ ವಿನಾಯ್ತಿ
ದೇಶದ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನೆಲ್ಲಾ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಆದೇಶವನ್ನು ಹೊರಡಿಸಿದೆ. ಕೊರೊನಾವೈರಸ್ ಪರಿಣಾಮವಾಗಿ ಎಲ್ಲಾ ಸಾಲದ ಮೇಲಿನ ಕಂತುಗಳು, ಬಡ್ಡಿಯನ್ನು 01.03.2020 ರಿಂದ 31.05.2020ರವರೆಗೆ ಮೂರು ತಿಂಗಳು ಮುಂದೂಡಲಾಗಿದೆ ಎಂದು ಟ್ವೀಟ್ ಮಾಡಿದೆ.
ಕೆನರಾ ಬ್ಯಾಂಕ್‌ನಿಂದ ಇಎಂಐ ವಿನಾಯ್ತಿ
ಕೆನರಾ ಬ್ಯಾಂಕ್ ಆರ್‌ಬಿಐ ಆದೇಶದಂತೆ ತನ್ನ ಗ್ರಾಹಕರಿಗೆ ಸಾಲದ ಕಂತುಗಳನ್ನು (ಇಎಂಐ) ಕಟ್ಟುವುದರಿಂದ ವಿನಾಯ್ತಿ ನೀಡಿದೆ. ಈ ಕುರಿತು ಈಗಾಗಲೇ ಗ್ರಾಹಕರಿಗೆ ಎಸ್‌ಎಂಎಸ್ ಕೂಡ ಕಳುಹಿಸಲಾಗಿದೆ. ಅಲ್ಲದೆ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಕೆನರಾ ಬ್ಯಾಂಕ್ ಟ್ವೀಟ್ ಕೂಡ ಮಾಡಿದೆ.
ಸಿಂಡಿಕೇಟ್ ಬ್ಯಾಂಕ್
ಸಿಂಡಿಕೇಟ್ ಬ್ಯಾಂಕ್ ಕೂಡ ಆರ್‌ಬಿಐ ನಿರ್ದೇಶನವನ್ನು ಪಾಲಿಸಿರುವ ಆದೇಶ ಹೊರಡಿಸಿದೆ. ಎಲ್ಲಾ ರೀತಿಯ ಸಾಲಗಳ ಮೇಲಿನ ಮರುಪಾವತಿಗೆ ಮೂರು ತಿಂಗಳ ಕಾಲಾವಕಾಶ ನೀಡುವುದಾಗಿ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದೆ.
ಯುಕೋ ಬ್ಯಾಂಕ್
ಸಾಲದ ಮರುಪಾವತಿ ಕಂತುಗಳನ್ನು ಮುಂದೂಡಲಾಗಿದೆ ಎಂದು ಟ್ವೀಟ್ ಮಾಡಿರುವ ಯುಕೋ ಬ್ಯಾಂಕ್ 'ನಿಮ್ಮ ಮುಂದಿನ ಪಾವತಿ ತಿಂಗಳು ಜೂನ್ 2020' ಎಂದು ಟ್ವೀಟ್ ಮಾಡಿದೆ. ಅಲ್ಲದೆ ನಿಮ್ಮ ಸಾಲದ ಕಂತುಗಳನ್ನು ಮರು ಹೊಂದಾಣಿಕೆ ಮಾಡಲಾಗುವುದು ಎಂದು ತಿಳಿಸಿದೆ.
ಪಂಜಾಬ್ ನ್ಯಾಷ್‌ನಲ್ ಬ್ಯಾಂಕ್
' ಎಲ್ಲಾ ಪಂಜಾಬ್ ನ್ಯಾಷ್‌ನಲ್ ಗ್ರಾಹಕರಿಗೆ ತಿಳಿಸುವುದೇನೆಂದರೆ ಕೋವಿಡ್-19 ಬಿಕ್ಕಟ್ಟಿನ ಸ್ಥಿತಿಯಲ್ಲಿ ಮಾರ್ಚ್, ಏಪ್ರಿಲ್, ಮೇ ತಿಂಗಳ ಎಲ್ಲಾ ಸಾಲದ ಮೇಲಿನ ಮರುಪಾವತಿಯನ್ನು ಮೂರು ತಿಂಗಳು ಮುಂದೂಡಿದ್ದೇವೆ '' ಎಂದು ತಿಳಿಸಿದೆ.
ಇಂಡಿಯನ್ ಬ್ಯಾಂಕ್
ಇಂಡಿಯನ್ ಬ್ಯಾಂಕ್ ಸಾಲ ಪಡೆದವರೂ ಕೂಡ ಸ್ವಲ್ಪ ಮಟ್ಟಿಗೆ ಬಚಾವ್ ಆದಂತೆ. ಇಂಡಿಯನ್ ಬ್ಯಾಂಕ್ ಕೂಡ ಆರ್‌ಬಿಐ ನಿರ್ದೇಶನವನ್ನು ಪಾಲನೆ ಮಾಡಿದ್ದು, ಮಾರ್ಚ್, ಏಪ್ರಿಲ್, ಸೇರಿದಂತೆ ಮೇ ತಿಂಗಳ ಸಾಲಗಳ ಕಂತುಗಳನ್ನು(ಇಎಂಐ)ಗಳನ್ನು ಮುಂದೂಡಲಾಗಿದೆ ಎಂದು ಟ್ವೀಟ್ ಮಾಡಿದೆ.
ಬ್ಯಾಂಕ್ ಆಫ್ ಬರೋಡಾ
ಕೋವಿಡ್-19 ನಿಂದಾಗಿ ಆರ್‌ಬಿಐ ಆದೇಶ ಅನುಸಾರವಾಗಿ ಕಾರ್ಪೊರೇಟ್, ಎಂಎಸ್‌ಎಂಇ, ಕೃಷಿ, ಚಿಲ್ಲರೆ ವ್ಯಾಪಾರ, ವಸತಿ, ಆಟೋ, ವೈಯಕ್ತಿಕ ಸಾಲಗಳು ಸೇರಿದಂತೆ ಎಲ್ಲಾ ಅವಧಿಯ ಸಾಲಗಳಿಗೆ 01.03.20 ಮತ್ತು 31.05.20 ರ ನಡುವೆ ಬಾಕಿ ಇರುವ ಎಲ್ಲಾ ಕಂತುಗಳನ್ನು ಪಾವತಿಸಲು 3 ತಿಂಗಳ ನಿಷೇಧವನ್ನು ಒದಗಿಸುತ್ತಿದೆ ಎಂದು ಬ್ಯಾಂಕ್ ಆಫ್ ಬರೋಡಾ ಟ್ವೀಟ್ ಮಾಡಿದೆ.
ಈ ಮೇಲಿನ ಬ್ಯಾಂಕುಗಳಂತೆ ಬೃಹತ್ ಬ್ಯಾಂಕುಗಳಾದ ಹೆಚ್‌ಡಿಎಫ್‌ಸಿ ಮತ್ತು ಇತರೆ ಬ್ಯಾಂಕುಗಳು ಯಾವಾಗ ಹೊಸ ಆದೇಶ ಪ್ರಕಟಿಸುತ್ತವೆ ಎಂಬುದನ್ನು ಗ್ರಾಹಕರು ಎದುರು ನೋಡುತ್ತಿದ್ದಾರೆ.


Click it and Unblock the Notifications