ಕೊರೊನಾ ವೈರಾಣು ಹಬ್ಬುವುದನ್ನು ನಿಯಂತ್ರಿಸುವ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಲಾಕ್ ಡೌನ್ ಅವಧಿಯನ್ನು ಮೇ 3, 2020ರ ತನಕ ವಿಸ್ತರಣೆ ಮಾಡಿದ್ದಾರೆ. ಈ ಅವಧಿಯಲ್ಲಿ ಎಲ್ಲ ದೇಶೀಯ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸರಕು ಸಾಗಣೆ ಹಾಗೂ ವಿಶೇಷ ಪಾರ್ಸೆಲ್ ರೈಲುಗಳನ್ನು ಹೊರತುಪಡಿಸಿದಂತೆ ಎಲ್ಲ ಪ್ರಯಾಣಿಕ ರೈಲುಗಳ ಸಂಚಾರವನ್ನು ಮೇ 3ನೇ ತಾರೀಕಿನ ತನಕ ರದ್ದುಗೊಳಿಸಿ, ಭಾರತೀಯ ರೈಲ್ವೆ ಇಲಾಖೆ ಘೋಷಣೆ ಮಾಡಿದೆ. ಈ ಹಿಂದೆ ವಿಮಾನ ಹಾಗೂ ರೈಲು ಸೇವೆಗಳನ್ನು ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಅವಧಿ ಮುಗಿಯುವ ಏಪ್ರಿಲ್ 14ನೇ ತಾರೀಕಿನ ತನಕ ಸ್ಥಗಿತಗೊಳಿಸಲಾಗಿತ್ತು. ಇದೀಗ ಲಾಕ್ ಡೌನ್ ಅನ್ನು ಮೇ 3ರ ತನಕ ವಿಸ್ತರಿಸಲಾಗಿದೆ.
ಲಾಕ್ ಡೌನ್ ಅವಧಿಯಲ್ಲಿ ಸರಕು ಸಾಗಣೆ ಚಟುವಟಿಕೆ ಮಾಮೂಲಿನಂತೆ ನಡೆಯಲಿದೆ. ಸದ್ಯಕ್ಕೆ ದೆಹಲಿಯಿಂದ 20- 22 ಸರಕು ಸಾಗಣೆ ವಿಮಾನಗಳು ಪ್ರತಿ ದಿನ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಷೆಡ್ಯೂಲ್ ಆಗದಿರುವ ಸರಕು ವಿಮಾನಗಳು ದೋಹಾ, ಪ್ಯಾರಿಸ್, ಹಾಂಕಾಂಗ್, ಶೆಂಜಾನ್, ಶಾಂಘೈ ಇತರೆಡೆಗಳಿಂದ ಬರುತ್ತಿವೆ.

ಪ್ರಯಾಣಿಕರ ವಿಮಾನಗಳ ಹಾರಾಟವನ್ನು ರದ್ದು ಮಾಡಿರುವ ಕಾರಣಕ್ಕೆ ವಿಮಾನಯಾನ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿದ್ದು, ಸಿಬ್ಬಂದಿಯ ವೇತನ ಕಡಿತ ಮಾಡಲಾಗಿದೆ.


Click it and Unblock the Notifications