ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕೇಂದ್ರ ಸರ್ಕಾರವು ಕಂಪೆನಿಗಳ ಮೇಲಿನ ತೆರಿಗೆಯನ್ನು (ಕಾರ್ಪೊರೇಟ್ ತೆರಿಗೆ) ಕಡಿಮೆ ಮಾಡಿತು. ಆ ವರೆಗೆ ಇದ್ದ 22% ಅನ್ನು 15% ಇಳಿಸಿತು. ಇದರಿಂದ ಉಳಿತಾಯ ಆಗುವ ಹಣದಿಂದ ಹೂಡಿಕೆ ಹೆಚ್ಚಾಗುತ್ತದೆ ಎಂಬುದು ಸರ್ಕಾರದ ಉದ್ದೇಶ ಹಾಗೂ ನಿರೀಕ್ಷೆ ಆಗಿತ್ತು.
ಆದರೆ, ಆ ಉಳಿತಾಯದ ಹಣವನ್ನು ಕಂಪೆನಿಗಳ ಸಾಲ ಕಡಿಮೆ ಮಾಡಿಕೊಳ್ಳುವುದಕ್ಕೆ, ನಗದು ಹೆಚ್ಚಿಸಿಕೊಳ್ಳುವುದಕ್ಕೆ ಬಳಸಿಕೊಂಡಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 2019- 20ರ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಆರ್ಥಿಕತೆಯಲ್ಲಿ ಹೂಡಿಕೆ ಚಟುವಟಿಕೆ ಇನ್ನಷ್ಟು ಕಡಿಮೆ ಆಗಿದೆ. ಆದ್ದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಲಹೆಯೊಂದನ್ನು ನೀಡಿದೆ.
ನಿರ್ದಿಷ್ಟ ಸಾರ್ವಜನಿಕ ಹೂಡಿಕೆ ಮೂಲಕ ಹಣ ಸಂಗ್ರಹಿಸಬಹುದು. ಆಸ್ತಿ ಮಾರಾಟ ಹಾಗೂ ಪ್ರಮುಖ ಬಂದರುಗಳ ಖಾಸಗೀಕರಣದ ಮೂಲಕ ಆರ್ಥಿಕತೆ ಚೇತರಿಸಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟಿದೆ.
ವಾರ್ಷಿಕವಾಗಿ 1.45 ಲಕ್ಷ ಕೋಟಿ ರುಪಾಯಿ ಹೊರೆ
ಆರ್ಥಿಕತೆಯ ಬೆನ್ನೆಲುಬಾದ ಹೂಡಿಕೆಯಲ್ಲಿನ ಬೇಡಿಕೆ ಹಾಗೂ ಕ್ಯಾಪಿಟಲ್ ಎಕ್ಸ್ ಪೆಂಡಿಚರ್ (ಬಂಡವಾಳ ಖರ್ಚು) ದುರ್ಬಲವಾಗಿದೆ. ಇಂಥ ಸನ್ನಿವೇಶದಲ್ಲಿ ಹೂಡಿಕೆ ಪುನಶ್ಚೇತನಕ್ಕೆ ಸರ್ಕಾರದ ನೇತೃತ್ವದಲ್ಲಿ ಮಧ್ಯಪ್ರವೇಶ ಮಾಡಬೇಕು. "2019ರ ಸೆಪ್ಟೆಂಬರ್ ನಲ್ಲಿ ಕಾರ್ಪೊರೇಟ್ ತೆರಿಗೆ ಕಡಿತ ಮಾಡಿದ್ದನ್ನು ಸಾಲ ತೀರಿಸುವುದಕ್ಕೆ, ನಗದು ಮೊತ್ತವನ್ನು ಹೆಚ್ಚಿಸಿಕೊಳ್ಳಲು ಮತ್ತು ಚರಾಸ್ತಿಗಳಿಗಾಗಿ ಬಳಸಿಕೊಂಡರೇ ವಿನಾ ಬಂಡವಾಳ ಹರಿವು ಪುನರಾರಂಭ ಆಗಲೇ ಇಲ್ಲ" ಎಂದು ಆರ್ ಬಿಐ ಹೇಳಿದೆ. ಮೊದಲೇ ಹೇಳಿದಂತೆ, ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸರ್ಕಾರ ಘೋಷಿಸಿದ ಕ್ರಮಗಳಿಂದಾಗಿ ವಾರ್ಷಿಕ 1.45 ಲಕ್ಷ ಕೋಟಿ ರುಪಾಯಿ ಹೊರೆ ಆಯಿತು, ಅಷ್ಟೇ. 2019- 20ನೇ ಸಾಲಿನಲ್ಲಿ ಹರಿದು ಬಂದ ಬಂಡವಾಳ ಎಷ್ಟು ಎಂಬ ಬಗ್ಗೆ ಅಧಿಕ್ಟತ ಮಾಹಿತಿ ಏನೂ ಸಿಕ್ಕಿಲ್ಲ. ಆದರೆ ಅದು ಇನ್ನಷ್ಟು ದುರ್ಬಲ ಆಗಿರುವುದಂತೂ ಹೌದು.
ಆಸ್ತಿ ಮಾರಾಟದಿಂದ ಹಣ ಸಂಗ್ರಹ
ಆದರೆ, ಹಣ ಚಲಾವಣೆ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಉಕ್ಕು, ಕಲ್ಲಿದ್ದಲು, ಇಂಧನ, ಭೂಮಿ, ರೈಲ್ವೆ ಇವುಗಳಿಗೆ ಸಂಬಂಧಿಸಿದ ಆಸ್ತಿ ಮಾರಿ ಹಣ ಸಂಗ್ರಹಿಸಬೇಕು ಹಾಗೂ ಪ್ರಮುಖ ಬಂದರುಗಳನ್ನು ಸರ್ಕಾರಗಳು ಖಾಸಗೀಕರಣ ಮಾಡಬೇಕು ಹಾಗೂ ಆ ಮೂಲಕ ಖಾಸಗಿ ಬಂಡವಾಳವನ್ನು ಆಕರ್ಷಿಸಬೇಕು ಎಂದು ಆರ್ ಬಿಐ ಹೇಳಿದೆ. ಸದ್ಯಕ್ಕೆ ಸರ್ಕಾರದ ಒಡೆತನದಲ್ಲಿ ಇರುವ ಹನ್ನೆರಡು ಪ್ರಮುಖ ಬಂದರುಗಳಿವೆ. ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಮಂಡಿಸುವ ವೇಳೆಯೇ ಸರ್ಕಾರ ಹೇಳಿತ್ತು: ಕನಿಷ್ಠ ಒಂದು ಬಂದರನ್ನು ಕಾರ್ಪೊರೇಟ್ ವ್ಯವಸ್ಥೆಯಂತೆ ರೂಪುಗೊಳಿಸಿ, ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಲಿಸ್ಟ್ ಮಾಡುವುದಾಗಿ ತಿಳಿಸಿತ್ತು.
ಪಿಎಸ್ ಯುಗಳ ಮಾರಾಟಕ್ಕೆ ಚಾಲನೆ
ಕೊರೊನಾ ಬಿಕ್ಕಟ್ಟಿನ ಹೊಡೆತಕ್ಕೆ ತತ್ತರಿಸಿರುವ ಆರ್ಥಿಕತೆಯನ್ನು ಸುಧಾರಿಸುವುದು ಹೇಗೆ ಎಂಬ ಬಗ್ಗೆ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಸರಣಿ ಸಭೆಗಳನ್ನು ನಡೆಸಿದರು. ದೇಶದಾದ್ಯಂತ ಮೂಲಸೌಕರ್ಯದ ಆಸ್ತಿಗಳನ್ನು ಸೃಷ್ಟಿಸುವ ಬಗ್ಗೆ ಆ ವೇಳೆ ಚರ್ಚೆ ನಡೆದಿದೆ. ಇನ್ನು ಈಗಾಗಲೇ ಬಿಪಿಸಿಎಲ್, ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಇವುಗಳ ಖಾಸಗೀಕರಣಕ್ಕೆ ಸರ್ಕಾರ ಚಾಲನೆ ನೀಡಿದೆ. ಐಡಿಬಿಐ ಬ್ಯಾಂಕ್ ನಲ್ಲಿ ಷೇರಿನ ಪಾಲು ಮಾರಲು ಮುಂದಾಗಿದೆ. ಆಸ್ತಿ ಮಾರಾಟ ಹಾಗೂ ಖಾಸಗೀಕರಣದಿಂದ ಸಂಪನ್ಮೂಲ ಸಂಗ್ರಹ ಆಗುತ್ತದೆ. ಇನ್ನು ಭೂಮಿ, ಕಾರ್ಮಿಕರು, ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಎಸ್ ಟಿ ಸಮಿತಿಯಂಥ ಉನ್ನತ ಮಟ್ಟದ ಸಮಿತಿ ರಚಿಸಬೇಕಿದೆ. ಆ ಮೂಲಕ ಮಹತ್ವದ ಬದಲಾವಣೆ ಅಗತ್ಯ ಇದೆ. ಇದರಿಂದ ಮೂಲಸೌಕರ್ಯ ಯೋಜನೆಗಳನ್ನು ವೇಗವಾಗಿ ಜಾರಿಗೆ ತರುವುದಕ್ಕೆ ಸಾಧ್ಯವಾಗುತ್ತದೆ ಎಂದು ಆರ್ ಬಿಐ ಹೇಳಿದೆ.


Click it and Unblock the Notifications