ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಮೇಲಿನ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಬುಧವಾರ ತೆಗೆದುಹಾಕಿದೆ. "ಕ್ರಿಪ್ಟೋಕರೆನ್ಸಿ ವ್ಯವಹಾರದ ಮೇಲೆ ನಿರ್ಬಂಧ ಹೇರುವುದು ಕಾನೂನುಬಾಹಿರ" ಎಂದು ಸುಪ್ರೀಂಕೋರ್ಟ್ ಆದೇಶಿಸಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಈ ಆದೇಶದ ಮೂಲಕ ಕ್ರಿಪ್ಟೋಕರೆನ್ಸಿ ಮತ್ತು ಬಿಟ್ ಕಾಯಿನ್ ವ್ಯವಹಾರಗಳಿಗೆ ನಿರ್ಬಂಧ ತೆರವು ಆಗಲಿದೆ.
2018ರಲ್ಲಿ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಂಸ್ಥೆಗಳಿಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶನ ನೀಡಿತ್ತು. ಯಾವುದೇ ವರ್ಚುವಲ್ ಕರೆನ್ಸಿ ವ್ಯವಹಾರ ಮಾಡಬಾರದು ಮತ್ತು ಅಂಥ ವ್ಯವಹಾರ ಮಾಡುವ ವ್ಯಕ್ತಿ ಅಥವಾ ಸಂಸ್ಥೆಗೆ ಸೇವೆಯನ್ನು ಒದಗಿಸಬಾರದು ಎಂದು ತಿಳಿಸಿತ್ತು. ಆ ಕಾರಣಕ್ಕೆ ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರದ ಮೇಲೆ ನಿರ್ಬಂಧ ಬಿತ್ತು.
ಇದಕ್ಕೆ ಸಂಬಂಧಿಸಿದ ಎಲ್ಲ ಸೇವೆಗಳನ್ನು, ಅಂದರೆ ಹಣ ಸ್ವೀಕೃತಿ, ವರ್ಗಾವಣೆ ಹಾಗೂ ವರ್ಚುವಲ್ ಕರೆನ್ಸಿಗಳ ಖರೀದಿ ಅಥವಾ ಮಾರಾಟ ಎಲ್ಲವನ್ನೂ ಮೂರು ತಿಂಗಳ ಒಳಗಾಗಿ ಕೊನೆಗೊಳಿಸುವಂತೆ ಸೂಚಿಸಲಾಗಿತ್ತು. ಇದೀಗ 2018ರ ರಿಸರ್ವ್ ಬ್ಯಾಂಕ್ ಆದೇಶವನ್ನು ಮೂವರು ನ್ಯಾಯಮೂರ್ತಿಗಳ ಪೀಠವು ಅಸಂಬದ್ಧ ಎಂದು ತಳ್ಳಿ ಹಾಕಿದೆ. ಯಾವುದನ್ನೇ ಆಗಲಿ ಸಂಪೂರ್ಣ ನಿಷೇಧಿಸುವುದು ಕಾನೂನು ಪ್ರಕಾರ ಕೆಟ್ಟದ್ದು ಎನ್ನಲಾಗಿದೆ.

ಕಾನೂನು ರೂಪಿಸುವ ಹಾಗೂ ನಿಯಂತ್ರಿಸಬೇಕಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಧಿಸಲು ಹೊರಟಿರುವ ಗುರಿಯು ಸಮರ್ಪಕವಾಗಿಲ್ಲ ಎಂದು ಪೀಠವು ಹೇಳಿದೆ. ಈ ಕಾರಣಕ್ಕೆ ಕ್ರಿಪ್ಟೋಕರೆನ್ಸಿಯನ್ನು ಭಾರತದಲ್ಲಿ ಸಂಪೂರ್ಣ ನಿರ್ಬಂಧಿಸುವ ಬದಲು ಕೆಲವು ನಿಯಮಾವಳಿಗಳು ರೂಪಿಸುವ ಸಾಧ್ಯತೆ ಇದೆ.
2018ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶನ ಬಂದ ನಂತರ, ವಿವಿಧ ಕ್ರಿಪ್ಟೋಕರೆನ್ಸಿ ಎಕ್ಸ್ ಚೇಂಜ್ ಗಳನ್ನು ಪ್ರತಿನಿಧಿಸುವ ಭಾರತದ ಇಂಟರ್ ನೆಟ್ ಮತ್ತು ಮೊಬೈಲ್ ಒಕ್ಕೂಟವು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿಕೊಂಡಿತ್ತು. ಕ್ರಿಪ್ಟೋಕರೆನ್ಸಿಗಳ ವ್ಯವಹಾರ ನಡೆಸುವುದಕ್ಕೆ ಯಾವುದೇ ಕಾನೂನಿಲ್ಲ. ಸಂವಿಧಾನದ ಅಡಿಯಲ್ಲಿ ಸಕ್ರಮ ವ್ಯವಹಾರಗಳನ್ನು ನಿಷೇಧಿಸಲು ಅವಕಾಶ ಇಲ್ಲ ಎಂದು ವಾದಿಸಲಾಗಿತ್ತು.
ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸುವುದಕ್ಕೆ, ಅಕ್ರಮ ಹಣ ವರ್ಗಾವಣೆ ದಂಧೆಗೆ ಇದನ್ನು ಬಳಸುವ ಸಾಧ್ಯತೆ ಇದ್ದು, ನ್ಯಾಯಬದ್ಧವಾದ ಕಾರ್ಯಚಟುವಟಿಕೆ ನಡೆಸಲು ಅಪಾಯ ಇದೆ. ಇದರಿಂದ ಹಣಕಾಸು ಸಂಸ್ಥೆಗಳ ಪ್ರತಿಷ್ಠೆಗೆ ಕುಂದು ಬರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿತ್ತು.


Click it and Unblock the Notifications