ಅಮೆರಿಕದ ಫಾಸ್ಟ್ ಫುಡ್ ವ್ಯವಹಾರಗಳ ದೈತ್ಯ ಕಂಪೆನಿ ಮೆಕ್ ಡೊನಾಲ್ಡ್ ಸಿಇಒ ಸ್ಟೀವ್ ಈಸ್ಟರ್ ಬ್ರೂಕ್ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಕಂಪೆನಿಯ ಸಿಬ್ಬಂದಿ ಜತೆಗೆ ಸಹಮತದ ಸಂಬಂಧ ಹೊಂದಿದ್ದರು ಎಂಬ ಆರೋಪದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. 'ಕಂಪೆನಿ ನಿಯಮಗಳ ಉಲ್ಲಂಘನೆ' ಮತ್ತು 'ಕೆಟ್ಟ ತೀರ್ಮಾನ' ತೋರಿದ ಕಾರಣಕ್ಕೆ ಈ ಕ್ರಮ ಎದುರಿಸಬೇಕಿದೆ.
ಕಂಪೆನಿ ಸಿಬ್ಬಂದಿಗೆ ಬರೆದ ಇ ಮೇಲ್ ನಲ್ಲಿ ಈಸ್ಟರ್ ಬ್ರೂಕ್ ತಮ್ಮ ಸಂಬಂಧವನ್ನು ಒಪ್ಪಿಕೊಂಡು, ಇದು ತಪ್ಪು ಎಂದು ಸಹ ಹೇಳಿದ್ದಾರೆ. "ಕಂಪೆನಿಯ ಮೌಲ್ಯಕ್ಕೆ ಬೆಲೆ ಕೊಟ್ಟು, ಮಂಡಳಿಯ ನಿರ್ಧಾರಕ್ಕೆ ಒಪ್ಪಿಕೊಂಡು ಇಲ್ಲಿಂದ ಹೊರಡುವ ಸಮಯ ಬಂದಿದೆ" ಎಂದು ಹೇಳಿದ್ದಾರೆ.
52 ವರ್ಷದ ಈಸ್ಟರ್ ಬ್ರೂಕ್ ವಿಚ್ಛೇದಿತರು. ಮೊದಲಿಗೆ 1993ರಲ್ಲಿ ಲಂಡನ್ ನಲ್ಲಿ ಮೆಕ್ ಡೊನಾಲ್ಡ್ ನ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲಿಂದ ಹಂತಹಂತವಾಗಿ ಮೇಲೇರಿದ್ದರು. ಪಿಜ್ಜಾ ಎಕ್ಸ್ ಪ್ರೆಸ್ ನ ನೇತೃತ್ವ ವಹಿಸಿ, 2011ರಲ್ಲಿ ಸೇರ್ಪಡೆಯಾದರು. 2013ರಲ್ಲಿ ಮೆಕ್ ಡೊನಾಲ್ಡ್ ಗೆ ಹಿಂತಿರುಗುವ ಮೊದಲು 'ವಾಗಾಮಾಮಾ' ಫುಡ್ ಚೈನ್ ನಲ್ಲಿ ಸಹ ಕಾರ್ಯ ನಿರ್ವಹಿಸಿದ್ದರು.

ಆ ವೇಳೆಗೆ ಯು.ಕೆ. ಮತ್ತು ಉತ್ತರ ಯುರೋಪ್ ನ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಂಡರು. 2015ರಲ್ಲಿ ಮೆಕ್ ಡೊನಾಲ್ಡ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆದರು. ಮೆಕ್ ಡೊನಾಲ್ದ್ ನ ಆಹಾರ ಖಾದ್ಯಗಳು ಮತ್ತು ರೆಸ್ಟೋರೆಂಟ್ ಗಳಲ್ಲಿ ಬದಲಾವಣೆ ತಂದ ಅಗ್ಗಳಿಕೆ ಈಸ್ಟರ್ ಬ್ರೂಕ್ ಅವರದು. ಅಷ್ಟೇ ಅಲ್ಲ, ಆಹಾರಕ್ಕೆ ಬಳಸುವ ಪದಾರ್ಥಗಳನ್ನೂ ಉತ್ತಮಪಡಿಸಿದರು. ಅವರ ಅವಧಿಯಲ್ಲಿ ಕಂಪೆನಿಯ ಷೇರಿನ ಮೌಲ್ಯ ದುಪ್ಪಟ್ಟಿಗಿಂತ ಹೆಚ್ಚಾಯಿತು.
ಈಸ್ಟರ್ ಬ್ರೂಕ್ ಅವಧಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಡೆಲಿವರಿ ಮತ್ತು ಮೊಬೈಲ್ ಪಾವತಿ ಆಯ್ಕೆಗಳನ್ನು ಸಹ ವಿಸ್ತರಿಸಲಾಯಿತು. ಈಸ್ಟರ್ ಬ್ರೂಕ್ ಸಿಇಒ ಆದ ಕೆಲ ಸಮಯಕ್ಕೆ ಸಿಬ್ಬಂದಿ ವೇತನದಲ್ಲಿ ಹೆಚ್ಚಳ, ವಿವಿಧ ಭೌಗೋಳಿಕ ಮಾರುಕಟ್ಟೆಗೆ ತಕ್ಕಂತೆ ಆಹಾರ ಖಾದ್ಯಗಳ ಪರಿಚಯ, ಆಹಾರಕ್ಕೆ ಬಳಸುವ ಪದಾರ್ಥಗಳಲ್ಲಿ ಬದಲಾವಣೆ ಮಾಡಲಾಯಿತು.


Click it and Unblock the Notifications