ದೇಶದಲ್ಲಿ ಅತೀ ಹೆಚ್ಚು ಟ್ರಾಫಿಕ್ ಸಮಸ್ಯೆ ಕಾಡುವ ನಗರಗಳಲ್ಲಿ ಬೆಂಗಳೂ ಕೂಡಾ ಒಂದಾಗಿದೆ. ವಿಶ್ವದಲ್ಲೇ ಅತೀ ನಿಧಾನವಾದ (ಟ್ರಾಫಿಕ್ ಜಂಜಾಟ) ನಗರಗಳನ್ನು ಒಂದಾಗಿದೆ. ಆದರೆ ಬೆಂಗಳೂರಿನಲ್ಲೇ ಡೊಮಿನೋಸ್ ತನ್ನ ನೂತನ ಡೆಲಿವರಿ ಸೇವೆಯನ್ನು ಆರಂಭಿಸಿದೆ. ಡೆಲಿವರಿ ಸೇವೆ ಆರಂಭಿಸಿದರೆ, ತೊಂದರೆ ಏನಿದೆ ಎಂದು ನೀವಂದುಕೊಳ್ಳಬಹುದು, ಆದರೆ ಇದು ಬರೀ ಡೆಲಿವರಿ ಸೇವೆ ಅಲ್ಲ ಕಂಣ್ರೀ, 20 ನಿಮಿಷದಲ್ಲಿ ನೀವು ಆರ್ಡರ್ ಮಾಡಿದ ಫುಡ್ ಅನ್ನು ನಿಮ್ಮ ಮನೆಗೆ ತಲುಪಿಸುವ ಸೇವೆ.
ಡೊಮಿನೋಸ್ ಇಂಡಿಯಾ ಈಗಾಗಲೇ ಭಾರತದ 14 ನಗರಗಳಲ್ಲಿ 20 ನಿಮಿಷಗಳ ಡೆಲಿವರಿ ಸೇವೆಯನ್ನು ಆರಂಭಿಸಿದೆ. ಈ ಬಗ್ಗೆ ಡಿಸೆಂಬರ್ 2022ರಲ್ಲಿ ಘೋಷಣೆ ಮಾಡಿದೆ. ಈ 14 ನಗರಗಳಲ್ಲಿ ಬೆಂಗಳೂರು ಕೂಡಾ ಒಂದಾಗಿದೆ. ಪ್ರಸ್ತುತ ಡೊಮಿನೋಸ್ ಬೆಂಗಳೂರಿನ ಸುಮಾರು 170 ಔಟ್‌ಲೇಟ್‌ಗಳಲ್ಲಿ 20 ನಿಮಿಷಗಳ ಡೆಲಿವರಿ ಸೇವೆಯನ್ನು ಆರಂಭ ಮಾಡಿದೆ. ಡೊಮಿನೋಸ್ ಅನ್ನು ನಿರ್ಹವಣೆ ಮಾಡುವ ಜ್ಯೂಬಿಲಂಟ್ ಫುಡ್ ವರ್ಕ್ ಈ ಬಗ್ಗೆ ಮಾಹಿತಿ ನೀಡಿದೆ.

ಈ ಹಿಂದೆ ಜೊಮ್ಯಾಟೊವು 10 ನಿಮಿಷಗಳಲ್ಲಿ ಫುಡ್ ಡೆಲಿವರಿ ಮಾಡುವ ಸೇವೆಯನ್ನು ಆರಂಭ ಮಾಡಿತ್ತು. ಆದರೆ ಇದು ಫುಡ್ ಡೆಲಿವರಿ ಬಾಯ್‌ಗಳಿಗೆ ಅಪಾಯಕಾರಿ ಎಂದು ಹಲವಾರು ವಿರೋಧಗಳು ವ್ಯಕ್ತವಾದ ಬಳಿಕ ಈ ಸೇವೆಯನ್ನು ಹಿಂಪಡೆಯಲಾಗಿದೆ. ಈ ಸೇವೆ ಆರಂಭವಾದ ವರ್ಷದೊಳಗೆ ಸ್ಥಗಿತಗೊಳಿಸಲಾಗಿದೆ. ಆದರೆ ಈಗ ಡೊಮಿನೋಸ್ 20 ನಿಮಿಷಗಳ ಫುಡ್ ಡೆಲಿವರಿ ಸೇವೆಯನ್ನು ಆರಂಭ ಮಾಡಿದೆ. ಇದು ಫುಡ್ ಡೆಲಿವರಿ ಬಾಯ್‌ಗಳನ್ನು ಕೊಂಚ ಇಕ್ಕಟ್ಟಿಗೆ ಸಿಲುಕಿಸುವುದು ಖಂಡಿತ.
ಟ್ರಾಫಿಕ್ ಪೊಲೀಸ್‌ಗಳು ಇಕ್ಕಟ್ಟಿನಲ್ಲಿ
ಈ ಡೆಲಿವರಿ ಸೇವೆಯು ಪ್ರಮುಖವಾಗಿ ಟ್ರಾಫಿಕ್ ಪೊಲೀಸ್ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಫುಡ್ ಡೆಲಿವರಿ ಮಾಡುವ ಸಂದರ್ಭದಲ್ಲಿ ಚಾಲಕರ ಸುರಕ್ಷತೆಯ ಬಗ್ಗೆ ಯಾವುದೇ ಖಾತರಿ ಇಲ್ಲ ಎಂಬುವುದು ಪ್ರಮುಖ ಕಾರಣವಾಗಿದೆ. ಕಳೆದ ಒಂದು ವರ್ಷದಲ್ಲಿ ಸಿಗ್ನಲ್ ಜಂಪ್ ಮಾಡಿ ಹೋದ ಪ್ರಕರಣದಲ್ಲಿ ಚೆನ್ನೈ ಪೊಲೀಸರು 970 ಡೆಲಿವರಿ ಬಾಯ್‌ಗಳ ಮೇಲೆ ದೂರು ದಾಖಲು ಮಾಡಿದ್ದಾರೆ. ಆದರೆ ಡೊಮಿನೋಸ್‌ನ ಈ ಸೇವೆಯು ಯಾವುದೇ ಸುರಕ್ಷತೆಯ ಅಪಾಯವನ್ನು ಹೊಂದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ.
"ಫಾಸ್ಟ್ ಆಗಿ ಡೆಲಿವರಿ ಮಾಡಿದರೆ, ನಾವು ಅಧಿಕವಾಗಿ ಭತ್ಯೆ ನೀಡುತ್ತೇವೆ ಎಂಬ ನಿಯಮ ನಮ್ಮಲ್ಲಿ ಇಲ್ಲ. ಆದ್ದರಿಂದಾಗಿ ಡೆಲಿವರಿ ಬಾಯ್‌ಗಳು ತುಂಬಾ ರಿಸ್ಕ್ ತೆಗೆದುಕೊಳ್ಳಬೇಕಾಗಿಲ್ಲ," ಎಂದು ಜ್ಯೂಬಿಲಂಟ್ ಫುಡ್ ವರ್ಕ್ ಸಿಇಒ ಸಮೀರ್ ಖೇತರ್‌ಪಾಲ್ ತಿಳಿಸಿದ್ದಾರೆ. ತಜ್ಞರ ಸಲಹೆ ಪಡೆದು, ತಂತ್ರಜ್ಞಾನದ ಆಧಾರದಲ್ಲಿ ನಾವು ಈ 20 ನಿಮಿಷಗಳ ಫುಡ್ ಡೆಲಿವರಿ ಸೇವೆಯನ್ನು ಆರಂಭ ಮಾಡಿದ್ದೇವೆ ಎಂದು ಕೂಡಾ ಮಾಹಿತಿ ನೀಡಿದ್ದಾರೆ. ಇನ್ನು ಡೊಮಿನೋಸ್ ಹಲವಾರು ಔಟ್‌ಲೇಟ್‌ಗಳನ್ನು ತೆರೆಯುತ್ತಿದೆ.
ನಿಧಾನವಾಗಿ ವಾಹನ ಚಾಲನೆ
2022ರಲ್ಲಿ ಅತೀ ನಿಧಾನವಾಗಿ ವಾಹನ ಚಾಲನೆ ಮಾಡಬೇಕಾದ ವಿಶ್ವದ ನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಲಂಡನ್ ಇದೆ. ಮುಖ್ಯವಾಗಿ ಇದಕ್ಕೆ ಟ್ರಾಫಿಕ್ ಕಾರಣವಾಗಿದೆ. "ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗಳು ಇದ್ದರೂ ಕೂಡಾ ನಮ್ಮ ಸಂಸ್ಥೆಯ ಹಲವಾರು ಔಟ್‌ಲೇಟ್‌ಗಳು ಇಲ್ಲಿದೆ. ಸಮೀಪದ ಔಟ್‌ಲೇಟ್‌ನಿಂದ ಮಾತ್ರ 20 ನಿಮಿಷಗಳ ಡೆಲಿವರಿ ಸೇವೆ ನೀಡಲಾಗುತ್ತದೆ," ಎಂದು ಜ್ಯೂಬಿಲಂಟ್ ಫುಡ್ ವರ್ಕ್ ಸಿಇಒ ಸಮೀರ್ ಖೇತರ್‌ಪಾಲ್ ಹೇಳಿದ್ದಾರೆ.
ಈ ಹಿಂದೆ ಭಾರತದಲ್ಲಿ ಡೊಮಿನೋಸ್ ಫಿಜ್ಜಾವನ್ನು ನಿರ್ವಹಣೆ ಮಾಡುವ ಜ್ಯುಬಿಲ್ಯಾಂಟ್ ಫುಡ್‌ವರ್ಕ್, ಡಿಸೆಂಬರ್ 20, 2022ರಂದು ಭಾರತದ 14 ಪ್ರಮುಖ ನಗರಗಳಲ್ಲಿ 20 ನಿಮಿಷಗಳ ಡೆಲಿವರಿ ಸೇವೆಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ. ಡೊಮಿನೋಸ್ ಇದಕ್ಕೂ ಮೊದಲು ಭಾರತದಲ್ಲಿ 30 ನಿಮಿಷಗಳ ಫಿಜ್ಜಾ ಡೆಲಿವರಿ ಸೇವೆಯನ್ನು ಆರಂಭ ಮಾಡಿದೆ.


Click it and Unblock the Notifications