ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ H- 1B ಸೇರಿದಂತೆ ಇತರ ಉದ್ಯೋಗ ವೀಸಾಗಳನ್ನು ಅಮಾನತು ಮಾಡುವ ಚಿಂತನೆಯಲ್ಲಿ ಇದ್ದಾರೆ. ಕೊರೊನಾ ಕಾರಣಕ್ಕೆ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ತುಂಬ ಹೆಚ್ಚಾಗಿರುವುದರಿಂದ ಈ ಆಲೋಚನೆ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಈ ಪ್ರಸ್ತಾವಿತ ಅಮಾನತು ಅಕ್ಟೋಬರ್ 1ರ ತನಕ ವಿಸ್ತರಣೆ ಆಗಬಹುದು ಎಂದು ಆಡಳಿತ ಮೂಲಗಳ ಮಾಹಿತಿಯನ್ನು ಆಧರಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಹೀಗೆ ಮಾಡುವುದರಿಂದ ಯಾವುದೇ ಹೊಸ H-1B ವೀಸಾ ಇರುವವರು, ಅಮೆರಿಕದ ಹೊರಗಿನವರು ನಿರ್ಬಂಧ ತೆರವಾಗುವ ತನಕ ಉದ್ಯೋಗದ ಸಲುವಾಗಿ ತೆರಳುವುದು ಸಾಧ್ಯವಾಗುವುದಿಲ್ಲ.
ಭಾರತದ ಐಟಿ ತಂತ್ರಜ್ಞರಿಗೆ ಹಿನ್ನಡೆ
ಭಾರತದ ತಂತ್ರಜ್ಞಾನ ವೃತ್ತಿಪರರಿಗೆ H-1B ಬಹಳ ಬೇಕಾದಂಥ ವಿದೇಶಿ ವೀಸಾ. ಟ್ರಂಪ್ ತೆಗೆದುಕೊಳ್ಳುವ ಈ ನಿರ್ಧಾರದಿಂದ ಭಾರತದ ಸಾವಿರಾರು ಐಟಿ ವೃತ್ತಿಪರರ ಮೇಲೆ ಪರಿಣಾಮ ಆಗಲಿದೆ. ಈಗಾಗಲೇ H-1B ವೀಸಾ ಹೊಂದಿದ್ದ ಸಾವಿರಾರು ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ. ತಾಯ್ನಾಡಿಗೆ ವಾಪಸ್ ಆಗುತ್ತಿದ್ದಾರೆ.
ಎಷ್ಟು ಬಗೆಯ ಉದ್ಯೋಗ ವೀಸಾ?
ಶ್ವೇತಭವನದ ಮೂಲಗಳ ಪ್ರಕಾರ, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ವಿವಿಧ ಪ್ರಸ್ತಾವಗಳನ್ನು ಪರಿಗಣಿಸಲಾಗುತ್ತಿದೆ. ಸದ್ಯಕ್ಕೆ ಅಮೆರಿಕನ್ನರಿಗೆ ಉದ್ಯೋಗ ಸಿಗುವಂತಾಗಲು ಏನು ಮಾಡಬೇಕು ಎಂಬ ಬಗ್ಗೆ ಆಲೋಚನೆ ಶುರುವಾಗಿದೆ. ಇನ್ನು H-1B ವೀಸಾ ಜತೆಗೆ ಅಲ್ಪಾವಧಿಯ ಸೀಸನಲ್ ಕಾರ್ಮಿಕರಿಗೆ H-2B ವೀಸಾ, ಅಲ್ಪಾವಧಿ ಕಾರ್ಮಿಕರಿಗೆ J-1 ವೀಸಾ ಹಾಗೂ ಆಂತರಿಕ ಕಂಪೆನಿ ವರ್ಗಾವಣೆಗೆ L-1 ವೀಸಾ ಇದೆ.
H-1B ವೀಸಾ ಪ್ರಾಮುಖ್ಯತೆ ಏನು?
H-1B ವೀಸಾ ಪ್ರಾಮುಖ್ಯತೆ ಏನೆಂದರೆ, ಇದು ಹಲವು ವರ್ಷಗಳಿಗೆ ಆಗುವ ಉದ್ಯೋಗ ವೀಸಾ. ತಂತ್ರಜ್ಞಾನ, ಅಕೌಂಟಿಂಗ್, ಉತ್ಪಾದನೆ ಇತ್ಯಾದಿ ಕ್ಷೇತ್ರಗಳಲ್ಲಿ ಬೇರೆ ದೇಶಗಳ ಉದ್ಯೋಗಿಗಳಿಗೆ ಇದನ್ನೇ ಬಳಲಾಗುತ್ತದೆ. ಈ ಹೊಸ ನಿಯಮಗಳಿಂದ ಅಮೆರಿಕದಲ್ಲಿ ಪ್ರತಿಭೆಗಳಿಗೆ ಕೊರತೆ ಆಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.


Click it and Unblock the Notifications