ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಈ-ಶ್ರಮ ಎಂಬ ಪೋರ್ಟಲ್ ಅನ್ನು ಇಂದು, 2021 ರ ಆಗಸ್ಟ್ 26 ರಂದು ಆರಂಭ ಮಾಡಿದೆ. ಈ e-SHRAM ಪೋರ್ಟಲ್ ಮೂಲಕ ದೇಶದ ಕಾರ್ಮಿಕರ ಡೇಟಾಬೇಸ್ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಸಂಗ್ರಹ ಮಾಡಲಾಗುತ್ತದೆ. ಈ ಈ-ಶ್ರಮ ಎಂಬ ಪೋರ್ಟಲ್ ಮೂಲಕ ಕಾರ್ಮಿಕರು ಅಸಂಘಟಿತ ಕಾರ್ಮಿಕರು ತಮ್ಮಗೆ ಇರುವ ಸುರಕ್ಷತಾ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಕಾರ್ಮಿಕರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜನೆಯಲ್ಲಿ ಭಾಗೀದಾರರಾಗಬಹುದು.
ಇಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಈ-ಶ್ರಮ ಪೋರ್ಟಲ್ ಅನ್ನು ಔಪಚಾರಿಕವಾಗಿ ಬಿಡುಗಡೆ ಮಾಡಿದರು. ಬಳಿಕ ರಾಜ್ಯ ಕಾರ್ಮಿಕ ಮತ್ತು ಉದ್ಯೋಗ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ ಅವರ ಸಮ್ಮುಖದಲ್ಲಿ ಈ ಪೋರ್ಟಲ್ ಅನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಹಸ್ತಾಂತರ ಮಾಡಿದರು. ಇದಕ್ಕೂ ಮುನ್ನ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ನಿನ್ನೆ e-shram Portal ಲಾಂಛನವನ್ನು ಬಿಡುಗಡೆ ಮಾಡಿದ್ದಾರೆ.
ಈ-ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಿದ ಬಳಿಕ, ಅಸಂಘಟಿತ ಕಾರ್ಮಿಕರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಇನ್ನು ಮುಂದೆ 12-ಅಂಕಿಯ ಯುಎಎನ್ ಹೊಂದಿರುವ ಈ-ಶ್ರಮ ಕಾರ್ಡ್ ದೇಶಾದ್ಯಂತ ಮಾನ್ಯವಾಗಿರುತ್ತದೆ. ಈ ಪೋರ್ಟಲ್ ಅಸಂಘಟಿತ ವಲಯಕ್ಕೆ ಅಗತ್ಯ ಸೇವೆ ಸಲ್ಲಸುವ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.
ಪ್ರಧಾನಿಗೆ ಧನ್ಯವಾದ ತಿಳಿಸಿದ ಕಾರ್ಮಿಕ ಸಚಿವ
ಇನ್ನು ಈ ಬಗ್ಗೆ ಮಾತನಾಡಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್, "ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, 38 ಕೋಟಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತಿರುವ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ತಲುಪಿಸುವಲ್ಲಿ ಸಹಕಾರಿಯಾಗುತ್ತದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಮುಂದುವರಿಸುವ ಇನ್ನೊಂದು ಪ್ರಮುಖ ಮೈಲಿಗಲ್ಲು," ಎಂದು ತಿಳಿಸಿದ್ದಾರೆ. ಯಾದವ್ ಈ ಸಂದರ್ಭದಲ್ಲೇ ಈ-ಶ್ರಮ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳುವ ಪ್ರತಿಯೊಬ್ಬ ಅಸಂಘಟಿತ ವಲಯದ ಕಾರ್ಮಿಕರಿಗೆ ರೂ 2.0 ಲಕ್ಷ ಅಪಘಾತ ವಿಮಾ ರಕ್ಷಣೆಯನ್ನು ಮಂಜೂರು ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರು ಇನ್ನು ಮುಂದೆ ಈ-ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡರೆ, ಆತನಿಗೆ ಅಪಘಾತವಾದಲ್ಲಿ ಆತನ ಸಾವು ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ರೂ 2.0 ಲಕ್ಷ ಮತ್ತು ಭಾಗಶಃ ಅಂಗವೈಕಲ್ಯವಾದರೆ ರೂ 1.0 ಲಕ್ಷ ರೂಪಾಯಿ ಪಡೆಯಲು ಅರ್ಹರಾಗಿರುತ್ತಾರೆ.
ಯಾವೆಲ್ಲಾ ಅಸಂಘಟಿತ ಕಾರ್ಮಿಕರು ಈ-ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು?
· ಕಟ್ಟಡ ಕಾರ್ಮಿಕರು
· ವಲಸೆ ಕಾರ್ಮಿಕರು
· ಉಬರ್, ಜೊಮೆಟೋದಂತಹ ಆನ್‌ಲೈನ್ ಸೇವಾ ಸಂಸ್ಥೆಯಲ್ಲು ಕಾರ್ಯನಿರ್ವಹಿಸುವವರು
· ಬೀದಿ ಬದಿ ವ್ಯಾಪಾರಸ್ಥರು
· ಮನೆ ಕೆಲಸಗಾರರು
· ಕೃಷಿ ಕಾರ್ಮಿಕರು
· ಇತರೆ ಅಸಂಘಟಿತ ವಲಯದ ಕಾರ್ಮಿಕರು
ಅಂಸಘಟಿತ ಕಾರ್ಮಿಕರಿಗೆ ಟೋಲ್ ಫ್ರೀ ನಂಬರ್
38 ಕೋಟಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ವ್ಯವಸ್ಥೆಯನ್ನು ಹೊಂದಿರುವ ಈ e-shram Portal ನಲ್ಲಿ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮತ್ತು ಮನೆಕೆಲಸಗಾರರು ಒಳಗೊಳ್ಳುತ್ತಾರೆ. ಹಾಗೆಯೇ ಈ e-shram Portal ಪ್ರಾರಂಭಿಸಿದ ನಂತರ, ಅಸಂಘಟಿತ ವಲಯದ ಕಾರ್ಮಿಕರು ತಮ್ಮ ನೋಂದಣಿಯನ್ನು ಅದೇ ದಿನದಿಂದ ಆರಂಭ ಮಾಡಬಹುದು. ಇಂದಿನಿಂದಲೇ, ರಾಷ್ಟ್ರೀಯ ಟೋಲ್ ಫ್ರೀ ಸಂಖ್ಯೆ 14434 ಅನ್ನು ಸಹ ನೋಂದಣಿಗಾಗಿ ಕಾರ್ಮಿಕರಿಗೆ ಸಹಾಯ ಮಾಡಲು ಆರಂಭ ಮಾಡಲಾಗಿದೆ.
ಈ-ಶ್ರಮ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಏನೆಲ್ಲಾ ಅಗತ್ಯ?
ಈ-ಶ್ರಮ ಕಾರ್ಡ್‌ಗಾಗಿ ಪೋರ್ಟಲ್‌ನಲ್ಲಿ ಕಾರ್ಮಿಕರ ನೋಂದಣಿಯನ್ನು ಕಾರ್ಮಿಕ ಸಚಿವಾಲಯ, ರಾಜ್ಯ ಸರ್ಕಾರಗಳು, ಕಾರ್ಮಿಕ ಸಂಘಗಳು ಮತ್ತು ಸಿಎಸ್‌ಸಿಗಳು ನಿರ್ವಹಣೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶಾದ್ಯಂತ ಕಾರ್ಮಿಕರ ನೋಂದಣಿಯನ್ನು ಸಕ್ರಿಯಗೊಳಿಸಲು ಹಾಗೂ ಅಧಿಕಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನಗಳನ್ನು ದೇಶಾದ್ಯಂತ ಯೋಜಿಸಲು ಸರ್ಕಾರ ಚಿಂತನೆ ನಡೆಸಿದೆ. ಪೋರ್ಟಲ್‌ನಲ್ಲಿ ನೋಂದಣಿ ಬಯಸುವ ಕಾರ್ಮಿಕರ ಪ್ರಶ್ನೆಗಳಿಗೆ ಉತ್ತರಿಸಲು ರಾಷ್ಟ್ರೀಯ ಟೋಲ್ ಫ್ರೀ ಸಂಖ್ಯೆ - 14434 ಅನ್ನು ಆರಂಭ ಮಾಡಲಾಗಿದೆ. ಈ ರಾಷ್ಟ್ರೀಯ ಟೋಲ್ ಫ್ರೀ ಸಂಖ್ಯೆಯ ಮೂಲಕ ಸಮಸ್ಯೆಯನ್ನು ಅಥವಾ ಗೊಂದಲವನ್ನು ಪರಿಹರಿಸ ಬಹುದಾಗಿದೆ. ಕಾರ್ಮಿಕರು e-shram Portal ಕಾರ್ಡ್‌ಗಾಗಿ ಪೋರ್ಟಲ್‌ನಲ್ಲಿ ನೋಂದಾವಣಿ ಮಾಡಬೇಕಾದರೆ ಆ ಕಾರ್ಮಿಕನ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಬೇಕಾಗುತ್ತದೆ. ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಬಳಸಿಕೊಂಡು ಕಾರ್ಮಿಕ ನೋಂದಾವಣಿ ಮಾಡಿಕೊಳ್ಳಬಹುದು. ಇದರ ಜೊತೆಗೆ ಜನ್ಮದಿನಾಂಕ, ಊರು, ಮೊಬೈಲ್ ಸಂಖ್ಯೆ ಮತ್ತು ಸಾಮಾಜಿಕ ವರ್ಗದಂತಹ ಇತರ ಅಗತ್ಯ ವಿವರಗಳನ್ನು ಕಾರ್ಮಿಕ ಈ ಪೋರ್ಟಲ್‌ನಲ್ಲಿ ನಿಗದಿಪಡಿಸಿದ ಪಟ್ಟಿಯಲ್ಲಿ ತುಂಬಬೇಕಾಗುತ್ತದೆ.


Click it and Unblock the Notifications