ವ್ಯಾಪಾರ ಯುದ್ಧ ಎನ್ನುವುದು ಎರಡು ದೇಶಗಳ ನಡುವೆ ಅಥವಾ ಗುಂಪುಗಳ ನಡುವೆ ಸಂಭವಿಸಬಹುದು. ಅಮೆರಿಕಾ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅಧಿಕಾರವಧಿಯಲ್ಲಿ ಅಮೆರಿಕಾ ವ್ಯಾಪಾರ ಯುದ್ಧವನ್ನು ನಡೆಸಿತು. ಹಾಗಿದ್ದರೆ ಅದನ್ನು ತಿಳಿಯುವುದಕ್ಕೂ ಮೊದಲು ಈ ವ್ಯಾಪಾರ ಯುದ್ಧ ಎಂದರೇನು ಎಂದು ತಿಳಿದುಕೊಳ್ಳಬೇಕು.
ಯಾವುದೇ ಒಂದು ದೇಶವು ಆಮದು ಸುಂಕವನ್ನು ಹೆಚ್ಚಿಸುವ ಮೂಲಕ ಅಥವಾ ಎದುರಾಳಿ ದೇಶದ ಆಮದಿನ ಮೇಲೆ ಇತರೆ ನಿರ್ಬಂಧಗಳನ್ನು ವಿಧಿಸುವ ಮೂಲಕ ಒಂದು ದೇಶ ಮತ್ತೊಂದು ದೇಶದ ಮೇಲೆ ಪ್ರತೀಕಾರ ತೆಗೆದುಕೊಂಡಾಗ ವ್ಯಾಪಾರ ಯುದ್ಧ ಸಂಭವಿಸುತ್ತದೆ.
ಈ ವ್ಯಾಪಾರ ಯುದ್ಧವು ಜಾಗತಿಕ ಆರ್ಥಿಕತೆಯ ವಾತಾವರಣವನ್ನು ಹದಗೆಡುಸುವುದಲ್ಲದೆ, ವ್ಯಾಪಾರ ಯುದ್ಧದ ಎರಡೂ ರಾಷ್ಟಗಳ ಗ್ರಾಹಕರಿಗೆ ಬಹಳ ಹಾನಿಯುಂಟು ಮಾಡುತ್ತದೆ. ಇದೊಂದು ರೀತಿಯಲ್ಲಿ ಸಾಂಕ್ರಾಮಿಕ ರೋಗದ ರೀತಿಯಲ್ಲಿ ಎರಡೂ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು.
ವ್ಯಾಪಾರ ಯುದ್ಧ ಹೇಗೆ ಸಂಭವಿಸುತ್ತದೆ?
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ಯುದ್ಧವನ್ನು ಪ್ರಾರಂಭಿಸಿದ್ರು. ವಿದೇಶದಿಂದ ಆಮದಾಗುವ ಸರಕುಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿದರು. ಉದಾಹರಣೆಗೆ ಸ್ಟೀಲ್ ಮೇಲೆ ಶೇಕಡಾ 25ರಷ್ಟು ಮತ್ತು ಲುಮಿನಿಯಂ ಮೇಲೆ ಶೇ. 10ರಷ್ಟು ತೆರಿಗೆ ವಿಧಿಸಿದರು. ಇದರ ಜೊತೆಗೆ ಯೂರೋಪ್‌ನಿಂದ ಆಮದಾಗುವ ಕಾರುಗಳ ಮೇಲೆ ಶೇಕಡಾ 20ರಷ್ಟು ತೆರಿಗೆ ಹೆಚ್ಚಿಸುವ ಬೆದರಿಕೆ ಕೂಡ ಹಾಕಿದರು.
ಟ್ರಂಪ್‌ನ ಈ ಉದ್ದೇಶದ ಹಿಂದೆ ಅಮೆರಿಕಾದಲ್ಲಿಯೇ ಸ್ಟೀಲ್ ಉತ್ಪಾದನೆ ಹೆಚ್ಚಿಸುವುದು, ಕಾರುಗಳನ್ನು ಉತ್ಪಾದಿಸಿ ರಫ್ತು ಮಾಡುವ ಮೂಲಕ ಅಮೆರಿಕಾದ ದೇಶೀಯ ಕಂಪನಿಗಳನ್ನ ಬಲಿಷ್ಠಗೊಳಿಸುವುದು ಆಗಿತ್ತು.
ತಿರುಗೇಟು ನೀಡಿದ ಯೂರೋಪ್ ಯೂನಿಯನ್
ಯೂರೋಪ್ ಯೂನಿಯನ್ ಕೂಡ ಅಮೆರಿಕಾದ ವ್ಯಾಪಾರ ಯುದ್ಧಕ್ಕೆ ತಿರುಗೇಟು ನೀಡುವ ಮೂಲಕ ಬ್ಯಾಲೆನ್ಸ್ ಮಾಡಿತು. ಅಮೆರಿಕಾದ ಮೋಟಾರ್ ಸೈಕಲ್ ಮತ್ತು ವಿಸ್ಕಿ ಮೇಲೆ ತೆರಿಗೆಯನ್ನು ಹೆಚ್ಚಿಸಿದರ ಪರಿಣಾಮ ಯೂರೋಪ್ ರಾಷ್ಟ್ರಗಳಲ್ಲಿ ಅಮೆರಿಕಾದ ವಸ್ತುಗಳು ದುಬಾರಿಯೆನಿಸಿದವು. ಇದಕ್ಕೆ ಅಮೆರಿಕಾ ಮತ್ತಷ್ಟು ಯೂರೋಪ್ ಸರಕುಗಳ ಮೇಲೆ ತೆರಿಗೆ ವಿಧಿಸುವ ಬೆದರಿಕೆ ಹಾಕಿದರ ಪರಿಣಾಮ ಅಮೆರಿಕಾ ವಸ್ತುಗಳ ಮಾರಾಟ ತಗ್ಗಿತು.
ಚೀನಾಕ್ಕೂ ಸವಾಲು ಹಾಕಿದ ಅಮೆರಿಕಾ!
ಚೀನಾ ಮತ್ತು ಅಮೆರಿಕಾ ನಡುವೆ ವ್ಯಾಪಾರ ಸಮರ ಸರ್ವೇಸಾಮಾನ್ಯ ವಾಗಿ ಕಾಣಬಹುದು. ಈ ಎರಡು ರಾಷ್ಟ್ರಗಳ ಮಹತ್ವಾಕಾಂಕ್ಷೆ ಮತ್ತು ವಿಶ್ವಸಂಸ್ಥೆಯ ಮೇಲೆ ಇರುವ ಮತ್ತು ಏರುವ ಪ್ರಭಾವದ ಕಾರಣ ಇಂತಹ ಯುದ್ಧಗಳು ಈ ರಾಷ್ಟ್ರಗಳ ಮಧ್ಯೆ ಸಾಮಾನ್ಯವಾಗಿ ನೋಡಬಹುದು.
ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ದೊಡ್ಡ ಮಟ್ಟಿಗೆ ಕಂಡು ಬಂದ ವ್ಯಾಪಾರ ಯುದ್ಧ ಅಮೆರಿಕಾ ಮತ್ತು ಚೀನಾ ನಡುವೆ ಸಂಭವಿಸಿತು. ಚೀನಾ ಉತ್ಪನ್ನಗಳಿಗೆ ಅಮೆರಿಕಾ ಹೆಚ್ಚು ತೆರಿಗೆ ವಿಧಿಸುವುದರ ಜೊತೆಗೆ ನಿಷೇಧಿಸಿತು.
ವ್ಯಾಪಾರ ಯುದ್ಧ ಇಂದು ನಿನ್ನೆಯದಲ್ಲ!
ವ್ಯಾಪಾರ ಯುದ್ಧವು ಈ ಹಿಂದೆಯು ಸಂಭವಿಸಿದ ಉದಾಹರಣೆಯನ್ನು ಇತಿಹಾಸ ನೋಡಿದೆ. 18ನೇ ಶತಮಾನದಲ್ಲಿ ಬ್ರಿಟನ್, ಫ್ರಾನ್ಸ್ ಮೇಲೆ ಯುದ್ಧವನ್ನು ಘೋಷಿಸಿದಾಗ, ಸರ್ವಾಧಿಕಾರಿ ನೆಪೋಲಿಯನ್ 18 ಮೇ 1803ರಂದು ವ್ಯಾಪಾರ ಯುದ್ಧ ಪ್ರಾರಂಭಿಸಿದರು ಎಂದು ಪರಿಗಣಿಸಲಾಗಿದೆ. ಈ ಮೂಲಕ ನೆಪೋಲಿಯನ್ ಯೂರೋಪ್ ಸ್ನೇಹಿತ ರಾಷ್ಟ್ರಗಳ ಮೂಲಕ ಬ್ರಿಟನ್ ಮೇಲೆ ವ್ಯಾಪಾರ ಯುದ್ಧವನ್ನು ನಡೆಸಿದಾಗ ಬ್ರಿಟನ್ ಹೊಸ ಮಾರುಕಟ್ಟೆಯನ್ನು ಹುಡುಕಿಕೊಂಡಿತು.
ಡೊನಾಲ್ಡ್ ಟ್ರಂಪ್ ವ್ಯಾಪಾರ ಯುದ್ಧ ಲಾಭವಾಯಿತೇ?
ಹೌದು ಅಮೆರಿಕಾ ಮತ್ತು ಯೂರೋಪ್ ನಡುವಿನ ವ್ಯಾಪಾರ ಯುದ್ಧದಲ್ಲಿ ಹೆಚ್ಚು ನಷ್ಟ ಕಂಡಿದ್ದು ಯೂರೋಪ್ ಯೂನಿಯನ್ ಆಗಿದೆ. ಯೂರೋಪ್‌ನ ಒಂದೊಂದೇ ರಾಷ್ಟ್ರಗಳ ನಡುವೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅಮೆರಿಕಾದ ಸರಕುಗಳ ಮೇಲೆ ತೆರಿಗೆ ತಗ್ಗಿಸಲು ಮತ್ತು ಮಾರುಕಟ್ಟೆ ಪ್ರವೇಶಿಸುವಂತೆ ನೋಡಿಕೊಳ್ಳಲಾಯಿತು. ಈ ಮೂಲಕ ಯೂರೋಪ್ ಯೂನಿಯನ್‌ನಲ್ಲಿ ಬಿರುಕು ಮೂಡಲು ಮತ್ತು ದುರ್ಬಲಗೊಳಿಸುವ ಟ್ರಂಪ್ ಐಡಿಯಾ ಮೇಲ್ನೋಟಕ್ಕೆ ಯಶಸ್ವಿಯಾದಂತಿದೆ.
ವ್ಯಾಪಾರ ಯುದ್ಧದ ಲಾಭ ಮತ್ತು ನಷ್ಟವೇನು?
ವ್ಯಾಪಾರ ಯುದ್ಧದ ಲಾಭ
* ಅನ್ಯಾಯದ ಸ್ಪರ್ಧೆ ಮೂಲಕ ದೇಶೀಯ ಕಂಪನಿಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ಷಿಸುತ್ತದೆ.
* ದೇಶೀಯ ಸರಕುಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ
* ಸ್ಥಳೀಯ ಉದ್ಯೋಗ ಬೆಳವಣಿಗೆಯನ್ನು ಹೆಚ್ಚಿಸುತ್ತದೆ
* ವ್ಯಾಪಾರ ಕೊರತೆಯನ್ನು ಸುಧಾರಿಸುತ್ತದೆ
* ಅನೈತಿಕ ವ್ಯಾಪಾರ ನೀತಿಯಿಂದ ರಾಷ್ಟ್ರವನ್ನು ಶಿಕ್ಷಿಸುತ್ತದೆ
ವ್ಯಾಪಾರ ಯುದ್ಧದ ನಷ್ಟ
* ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ಹಣದುಬ್ಬರವನ್ನು ಪ್ರೇರೇಪಿಸುತ್ತದೆ
* ಮಾರುಕಟ್ಟೆಯ ಕೊರತೆಯನ್ನು ಉಂಟುಮಾಡುತ್ತದೆ ಮತ್ತು ಆಯ್ಕೆಯನ್ನು ಕಡಿಮೆ ಮಾಡುತ್ತದೆ
* ವ್ಯಾಪಾರವನ್ನು ನಿರುತ್ಸಾಹಗೊಳಿಸುವುದು
* ಆರ್ಥಿಕ ಬೆಳವಣಿಗೆಯನ್ನು ನಿಧಾನಗಳಿಸುವುದು
* ರಾಜತಾಂತ್ರಿಕ ಸಂಬಂಧಗಳನ್ನು ಹದಗೆಡೆಸುತ್ತದೆ


Click it and Unblock the Notifications