ಬೆಂಗಳೂರಿನಲ್ಲಿ ಮದ್ಯ ಮಾರಾಟ ಮಾಡುವ ವ್ಯಕ್ತಿ ವಿರುದ್ಧ ಅಬಕಾರಿ ಕಾಯ್ದೆ ಅಡಿ ದೂರು ದಾಖಲಾಗಿದೆ. ಏಕೆ ದೂರು ದಾಖಲಾಯಿತು ಅನ್ನೋದಕ್ಕಿಂತ ಹೇಗೆ ದೂರು ದಾಖಲಾಯಿತು ಎಂಬುದು ಆಸಕ್ತಿಕರ ವಿಚಾರ. ಮೇ 4, 2020ರಿಂದ (ಸೋಮವಾರ) ಮದ್ಯ ಮಾರಾಟ ಶುರು ಮಾಡಬಹುದು ಅಂತ ಹಲವು ರಾಜ್ಯಗಳಲ್ಲಿ ಅನುಮತಿ ನೀಡಲಾಗಿದೆ. ಅದರಲ್ಲಿ ಕರ್ನಾಟಕವೂ ಒಂದು.
ಮದ್ಯ ಮಾರಾಟ ಶುರುವಾದ ಮೊದಲ ದಿನವೇ ಮುಗಿಬಿದ್ದು, ಜನರು ಖರೀದಿ ಮಾಡಿದ್ದಾರೆ. ಹಾಗೆ ಖರೀದಿ ಮಾಡಿದವರ ಪೈಕಿ ಯಾರೋ ಎರಡು ಬಿಲ್ ಗಳ ಫೋಟೋ ತೆಗೆದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಎಷ್ಟು ಮೊತ್ತಕ್ಕೆ ಗೊತ್ತಾ? ಒಂದು ಬಿಲ್ 50 ಸಾವಿರಕ್ಕೂ ಹೆಚ್ಚು, ಮತ್ತೊಂದು 95 ಸಾವಿರ ರುಪಾಯಿ.
52,841 ಹಾಗೂ 95,347 ರುಪಾಯಿ ಬಿಲ್ ವೈರಲ್
ಮೊದಲ ಬಿಲ್ 52,841 ರುಪಾಯಿಯದು. ಅಷ್ಟು ಮೊತ್ತಕ್ಕೆ ಬೆಂಗಳೂರಿನ ವೆನಿಲ್ಲಾ ಸ್ಪಿರಿಟ್ ಝೋನ್ ನಲ್ಲಿ ಖರೀದಿ ಮಾಡಲಾಗಿದೆ. ಮತ್ತೊಂದು ಬಿಲ್ 95,347 ರುಪಾಯಿಗೆ. ಅದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಖರೀದಿ ಮಾಡಲಾಗಿತ್ತು. ಇಷ್ಟು ಮೊತ್ತಕ್ಕೆ ಖರೀದಿ ಮಾಡಿದವರು ತಾವೇನೋ 'ಬಾಹುಬಲಿ' ಸಿನಿಮಾದ ಸೆಟ್ ನಲ್ಲಿ ಇದ್ದೀವೇನೋ ಎಂಬಂತೆ, ಬಿಲ್ ನ ಫೋಟೋ ತೆಗೆದು, ಸೋಷಿಯಲ್ ಮೀಡಿಯಾದಲ್ಲಿ ಹಾಕಿದರು. ಇದೀಗ ಆ ಮಳಿಗೆಗಳ ವಿರುದ್ಧ ಅಬಕಾರಿ ಇಲಾಖೆಯು ಕ್ರಮ ತೆಗೆದುಕೊಳ್ಳುವುದಕ್ಕೆ ಕಾರಣವಾಗಿರುವುದೇ ಆ ಎರಡು ಬಿಲ್ ಗಳು. 52,841 ರುಪಾಯಿಯಷ್ಟು ಮದ್ಯ ಮಾರಾಟ ಮಾಡಿದ ಮಳಿಗೆ ಮಾಲೀಕನ ವಿರುದ್ಧ ದೂರು ದಾಖಲಿಸಕೊಳ್ಳಲಾಗಿದೆ; ಲೈಸೆನ್ಸ್ ನಿಯಮಗಳನ್ನು ಮೀರಿದ್ದಾರೆ ಎಂಬ ಕಾರಣಕ್ಕೆ.
ಖರೀದಿ ಮಾಡಿದವರಿಗಾಗಿಯೂ ಹುಡುಕಾಟ
ನಿಯಮದ ಅನುಸಾರ ರೀಟೇಲ್ ಔಟ್ ಲೆಟ್ ನಲ್ಲಿ 2.3 ಲೀಟರ್ ಗಿಂತ ಭಾರತದ ತಯಾರಾದ ವಿದೇಶಿ ಮದ್ಯ ಅಥವಾ 18.2 ಲೀಟರ್ ಬಿಯರ್ ಅನ್ನು ಒಬ್ಬ ವ್ಯಕ್ತಿಗೆ ಒಂದು ದಿನದಲ್ಲಿ ಮಾರುವಂತಿಲ್ಲ. ಬೆಂಗಳೂರು ದಕ್ಷಿಣದ ಅಬಕಾರಿ ಡೆಪ್ಯೂಟಿ ಕಮಿಷನರ್ ಮಾತನಾಡಿ, ವೆನಿಲ್ಲಾ ಸ್ಪಿರಿಟ್ ಝೋನ್ ವಿರುದ್ಧ ಎಫ್ ಐಆರ್ ಆಗಿದೆ ಎಂದು ತಿಳಿಸಿದ್ದಾರೆ. ಈ ಮಳಿಗೆಯು ತಾವರೆಕೆರೆ ಮುಖ್ಯರಸ್ತೆಯಲ್ಲಿ ಇದೆ. ಒಬ್ಬ ಗ್ರಾಹಕರಿಗೆ ಅಬಕಾರಿ ಕಾಯ್ದೆ ಅಡಿ ವಿಧಿಸಿದ ಮಿತಿಯನ್ನು ಮೀರಿ ಮದ್ಯ ವಿತರಿಸಲಾಗಿದೆ ಎಂದು ಎಫ್ ಐಆರ್ ಸಾರಾಂಶ. ಈಗ ಮದ್ಯವನ್ನು ಖರೀದಿ ಮಾಡಿದವರಿಗಾಗಿ ಹುಡುಕಾಟ ನಡೆಯುತ್ತಿದೆ. "ತನಿಖೆಯ ಭಾಗವಾಗಿ ಖರೀದಿದಾರರನ್ನು ಹುಡುತ್ತಿದ್ದೇವೆ ಮತ್ತು ಈ ಖರೀದಿ ಬಗ್ಗೆ ಪ್ರಶ್ನೆ ಮಾಡುತ್ತೇವೆ" ಎಂದು ಅಧಿಕಾರಿ ಹೇಳಿದ್ದಾರೆ.
8.5 ಲಕ್ಷ ಲೀಟರ್ ಮದ್ಯ ಮಾರಾಟ
ಅಬಕಾರಿ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಇಂಥ ಎಲ್ಲ ಪ್ರಕರಣಗಳ ವಿಚಾರಣೆ ಮಾಡಲಾಗುತ್ತದೆ. ಲೈಸೆನ್ಸ್ ನಿಯಮ ಮೀರಿದವರಿಗೆ ದಂಡ ವಿಧಿಸಲಾಗುತ್ತದೆ. ಲಾಕ್ ಡೌನ್ ನಿಯಮ ಸಡಿಲಿಕೆ ಆದ ಮೊದಲ ದಿನವೇ ಕರ್ನಾಟಕದಲ್ಲಿ 45 ಕೋಟಿ ರುಪಾಯಿ ಮೌಲ್ಯದ ಮದ್ಯ ಮಾರಾಟ ಆಗಿದೆ. ಇದರಲ್ಲಿ ಭಾರತದಲ್ಲಿ ತಯಾರಾದ ವಿದೇಶಿ ಮದ್ಯ 8.5 ಲಕ್ಷ ಲೀಟರ್ ಹಾಗೂ ಬಿಯರ್ ಪ್ರಮಾಣ 3.9 ಲಕ್ಷ ಲೀಟರ್ ಎಂದು ಅಬಕಾರಿ ಇಲಾಖೆಯಿಂದ ಮಾಹಿತಿಯನ್ನು ನೀಡಲಾಗಿದೆ. ಕರ್ನಾಟಕ ಸರ್ಕಾರವು ಬೆಳಗ್ಗೆ 9ರಿಂದ ರಾತ್ರಿ 7ರ ತನಕ ಹಸಿರು, ಆರೇಂಜ್ ಹಾಗೂ ರೆಡ್ ಝೋನ್ ಗಳಲ್ಲಿ ಎಲ್ಲ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೆ ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಅಂದಹಾಗೆ ಕೊರೊನಾ ಮಧ್ಯೆಯೂ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಮದ್ಯ ಖರೀದಿಗೆ ಎರಡನೇ ದಿನವಾದ ಮಂಗಳವಾರವೂ ಭಾರೀ ಸಂಖ್ಯೆಯಲ್ಲಿ ಜನರು ಕಂಡುಬಂದಿದ್ದಾರೆ.


Click it and Unblock the Notifications