ಕೇಂದ್ರ ಸರ್ಕಾರ ವಿಶೇಷ ಆರ್ಥೀಕ ಪ್ಯಾಕೇಜ್‌ನಲ್ಲಿ ವಲಸೆ ಕಾರ್ಮಿಕರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಮನ್ರೇಗಾ ಯೋಜನೆಯಡಿ ದಿನಗೂಲಿಯನ್ನು ಹೆಚ್ಚಿಸುವುದರ ಜೊತೆಗೆ ದೇಶದಲ್ಲಿ ಏಕರೂಪದ ರೇಷನ್ ಕಾರ್ಡ್ ಯೋಜನೆ ಜಾರಿಗೆ ತರಲಿದ್ದು, ವಲಸೆ ಕಾರ್ಮಿಕರಿಗೆ ಮೂರು ಯೋಜನೆಯನ್ನು ರೂಪಿಸಿದೆ.
ವಲಸಿಗ ಕಾರ್ಮಿಕರಿಗೆ ಎರಡು ತಿಂಗಳ ಕಾಲ ಉಚಿತ ಊಟದ ವ್ಯವಸ್ಥೆ ಜೊತೆಗೆ, ರೇಷನ್ ಕಾರ್ಡ್ ಇಲ್ಲದವರಿಗೂ ಉಚಿತ ಪಡಿತರ ವ್ಯವಸ್ಥೆಗೆ ಯೋಜನೆ ರೂಪಿಸಿದೆ. ಜೊತೆಗೆ ಏಕ ವೇತನ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ವಲಸೆ ಕಾರ್ಮಿಕರಿಗೆ ಎರಡು ತಿಂಗಳು ಮೂರು ಹೊತ್ತು ಊಟ
ಲಾಕ್‌ಡೌನ್‌ದಿಂದಾಗಿ ಭಾರೀ ಆಘಾತ ಅನುಭವಿಸಿರುವ ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಭಾರೀ ಯೋಜನೆಯನ್ನು ರೂಪಿಸಿದೆ. ವಲಸಿಗರಿಗೆ 11 ಸಾವಿರ ಕೋಟಿ ಬಳಸುವ ಯೋಜನೆಯನ್ನು ರೂಪಿಸಿದೆ.
ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ನೇರ ನಗದು ವರ್ಗಾವಣೆ ಮಾಡುವುದರ ಜೊತೆಗೆ ವಲಸೆ ಕಾರ್ಮಿಕರಿಗೆ ಎರಡು ತಿಂಗಳು ಮೂರು ಹೊತ್ತು ಊಟದ ವ್ಯವಸ್ಥೆ ಮಾಡಲು ತಿಳಿಸಿದೆ.
'ಒಂದು ಭಾರತ ಏಕ ವೇತನ' ಪದ್ದತಿ ಜಾರಿ
ವಲಸೆ ಕಾರ್ಮಿಕರನ್ನೂ ಕೂಡ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತ್ರಿ (ಮನ್ರೇಗಾ) ಯೋಜನೆಯಡಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮನ್ರೇಗಾ ಯೋಜನೆಯ ದಿನಗೂಲಿಯನ್ನು 182 ರುಪಾಯಿಯಿಂದ 202 ರುಪಾಯಿಗೆ ಏರಿಕೆ ಮಾಡಲಾಗಿದೆ. ಇದನ್ನು 1.87 ಲಕ್ಷ ಗ್ರಾಮ ಪಂಚಾಯಿತಿ ಮೂಲಕ ವಿತರಣೆ ಮಾಡಲಾಗುವುದು.
ದೇಶದಲ್ಲಿ ಏಕ ವೇತನ ಪದ್ದತಿ ಜಾರಿಗೆ ತರುವುದರ ಮೂಲಕ ಅಂತಾರಾಜ್ಯ ವಲಸೆ ಕಾರ್ಮಿಕರಿಗೆ ಕನಿಷ್ಟ ವೇತನ ಕಾನೂನು ಜಾರಿಗೆ ತರಲಿದ್ದೇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇನ್ನು
ಉದ್ಯೋಗ ಕಳೆದುಕೊಂಡವರಿಗೆ ಮರುಕೌಶಲ್ಯ ತರಬೇತಿ ಹಾಗೂ ಕನಿಷ್ಟ 10 ಕಾರ್ಮಿಕರು ಇರುವವರಿಗೆ ESIC ಸೌಲಭ್ಯ ಜಾರಿಗೆ ಮುಂದಾಗಿದೆ.
ರೇಷನ್ ಕಾರ್ಡ್ ಇಲ್ಲದವರಿಗೂ ಆಹಾರ ಧಾನ್ಯ ವಿತರಣೆ
ಲಕ್ಷಾಂತರ ವಲಸೆ ಕಾರ್ಮಿಕರಲ್ಲಿ ಬಹುತೇಕರಲ್ಲಿ ರೇಷನ್ ಕಾರ್ಡ್ ಇರುವುದಿಲ್ಲ. ಹೀಗಾಗಿ ಇವರು ದೇಶದಲ್ಲಿ ಎಲ್ಲೇ ಹೋದರೂ ಪಡಿತರ ಪಡೆಯುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಎಲ್ಲಾ ವಲಸಿಗ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ವಿತರಣೆಗೆ ಆದೇಶ ಮಾಡಿದ್ದು, ರೇಷನ್ ಕಾರ್ಡ್ ಇಲ್ಲದಿದ್ದರೂ ಉಚಿತವಾಗಿ ಐದು ಕೆಜಿ ಅಕ್ಕಿ/ಗೋಧಿ, 1 ಕೆಜಿ ಧಾನ್ಯ(ಬೇಳೆ) ಪಡೆಯಬಹುದು. ಈ ಪಡಿತರ ಯೋಜನೆಗೆ 3,500 ಕೋಟಿ ರುಪಾಯಿ ಮೀಸಲು ಇಡಲಾಗಿದೆ.
'ಒಂದು ದೇಶ ಒಂದು ಪಡಿತರ ಕಾರ್ಡ್' ಯೋಜನೆ ಜಾರಿ
ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್‌ನಲ್ಲಿ ಕಾರ್ಮಿಕರಿಗೆ ನೀಡಲಾಗಿರುವ ಅತಿ ವಿಶೇಷ ಯೋಜನೆ 'ಒಂದು ದೇಶ ಒಂದು ಪಡಿತರ ಕಾರ್ಡ್' ಯೋಜನೆ. ದೇಶದಲ್ಲಿ ಎಲ್ಲಾ ಜನರಿಗೆ ಒಂದೇ ರೀತಿಯ ಪಡಿತರ ಕಾರ್ಡ್ ಜಾರಿಗೆ ತರಲು ಮುಂದಾಗಿದ್ದು, ಉಚಿತ ಪಡಿತರ ಪಡೆಯಬಹುದಾಗಿದೆ.
ರಾಜ್ಯ ಸರ್ಕಾರಗಳೇ ಈ ಪಡಿತರ ನೀಡಲು ವ್ಯವಸ್ಥೆ ಮಾಡಬೇಕು ಎಂದ ಕೇಂದ್ರ ಸರ್ಕಾರ ತಿಳಿಸಿದ್ದು, ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಈ ಯೋಜನೆ ಅನ್ವಯವಾಗಲಿದೆ.
ರಾಷ್ಟ್ರೀಯ ಪೋರ್ಟಬಿಲಿಟಿ ಕಾರ್ಡ್ ಮೂಲಕ ದೇಶದ ಯಾವುದೇ ಮೂಲೆಯಲ್ಲಿ ಪಡಿತರ ಪಡೆಯಬಹುದಾಗಿದ್ದು, ಆಗಸ್ಟ್ 22ರಂದು ಈ ಯೋಜನೆ ಜಾರಿಗೆ ಬರಲಿದ್ದು, 66 ಕೋಟಿ ಜನರಿಗೆ ಇದರಿಂದ ಅನುಕೂಲವಾಗುವುದು.
ವಲಸೆ ಕಾರ್ಮಿಕರಿಗೆ ಬಾಡಿಗೆ ಮನೆಗೆ ನಿರ್ದಿಷ್ಟ ಬಾಡಿಗೆ ಫಿಕ್ಸ್
ವಲಸೆ ಕಾರ್ಮಿಕರಿಗೆ ತೊಂದರೆಯಾಗಬಾರದೆಂದು ಮನೆಯ ಬಾಡಿಗೆಗೆ ನಿರ್ದಿಷ್ಟ ಬಾಡಿಗೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಲಿದೆ. ನಗರದ ಪ್ರದೇಶದಲ್ಲಿ ವಲಸಿಗರಿಗೆ ಅಗ್ಗದ ದರದಲ್ಲಿ ಬಾಡಿಗೆ ಮನೆ ದೊರೆಯಲಿದ್ದು, ಕೈಗಾರಿಕೆಗಳೇ ತಮ್ಮ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಬೇಕು ಎಂದು ತಿಳಿಸಿದೆ. ಈ ಮನೆಗಳನ್ನು ಕಟ್ಟಲು ಸರ್ಕಾರದಿಂದ ನೆರವು ನೀಡಲಾಗುವುದು ಎಂದು ಹೇಳಲಾಗಿದೆ.
ಈ ಬಾಡಿಗೆ ಮನೆ ನಿರ್ಮಾಣದಿಂದ ವಲಸೆ ಕಾರ್ಮಿಕರಿಗೆ ಯಾವುದೇ ರಾಜ್ಯಕ್ಕೆ ತೆರಳಿದರೂ ನಿರ್ದಿಷ್ಟ ಬಾಡಿಗೆ ದರದಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡಲು ನೆರವಾಗುವುದು ಎಂದು ಯೋಜನೆ ರೂಪಿಸಿದಂತಿದೆ.
ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಕಾನೂನು
ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡಲು ಅಭದ್ರತೆ ಎದುರಿಸುತ್ತಿರುವ ಕಾರಣ ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡಲು ವಿಶೇಷ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಜೊತೆಗೆ ಭದ್ರತೆ ನೀಡಲಾಗುವುದು ಎಂದು ತಿಳಿಸಿದೆ.


Click it and Unblock the Notifications