ಫಾಕ್ಸ್‌ಕಾನ್ ಎಂದೇ ಪ್ರಸಿದ್ಧವಾದ ತೈವಾನ್ ಮೂಲದ ಹೊನ್ ಹೈ ಟೆಕ್ನಾಲಜಿ ಗ್ರೂಪ್ ಎರಡು ಉತ್ಪಾದನಾ ಯೋಜನೆಗಳಿಗಾಗಿ ಕರ್ನಾಟಕದಲ್ಲಿ 600 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಈ ಪೈಕಿ ಒಂದು ಯೋಜನೆಯು ಯುಎಸ್ ಮೂಲದ ಉತ್ಪಾದನಾ ಕಂಪನಿಯಾದ ಅಪ್ಲೈಡ್ ಮೆಟೀರಿಯಲ್ಸ್ ಸಹಭಾಗಿತ್ವದಲ್ಲಿ ಮಾಡಲಾಗುತ್ತದೆ.
ಆಪಲ್‌ನ ಐಫೋನ್‌ಗಳು ಸೇರಿದಂತೆ ಸ್ಮಾರ್ಟ್‌ಫೋನ್‌ಗಳಿಗೆ ಕೇಸಿಂಗ್ ಘಟಕಗಳನ್ನು ತಯಾರಿಸಲು ಫಾಕ್ಸ್‌ಕಾನ್ 350 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತದೆ. ಈ ಘಟಕವು 12,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಕಂಪನಿಯು ಈಗಾಗಲೇ ತಮಿಳುನಾಡಿನಲ್ಲಿ ಐಫೋನ್ ತಯಾರಿಗೆ ಒಂದು ಘಟಕವನ್ನು ಆರಂಭ ಮಾಡುವ ನಿರ್ಧಾರವನ್ನು ಮಾಡಿದೆ. ಹೂಡಿಕೆಗೆ ಮುಂದಾಗಿದೆ. ಹಾಗೆಯೇ ಘಟಕವನ್ನು ಹೊಂದಿದೆ.

ಕಂಪನಿಯು ಎರಡನೇ ಸ್ಥಾವರದಲ್ಲಿ 250 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತದೆ ಮತ್ತು ಪ್ರಸಿದ್ಧ ಸೆಮಿಕಂಡಕ್ಟರ್ ಉಪಕರಣ ತಯಾರಕರಾದ ಅಪ್ಲೈಡ್ ಮೆಟೀರಿಯಲ್ಸ್ ಸಹಭಾಗಿತ್ವದಲ್ಲಿ ಚಿಪ್ ತಯಾರಿಕೆ ಉಪಕರಣಗಳನ್ನು ಉತ್ಪಾದಿಸುತ್ತದೆ. ಫಾಕ್ಸ್‌ಕಾನ್ ಅಧ್ಯಕ್ಷ ಯಂಗ್ ಲಿಯು, ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನಡುವಿನ ಸಭೆಯ ನಂತರ ಹೂಡಿಕೆ ನಿರ್ಧಾರಗಳ ಮಾಹಿತಿ ಲಭ್ಯವಾಗಿದೆ.
ತಮಿಳುನಾಡಿನಲ್ಲೂ ಹೂಡಿಕೆ
ಇನ್ನು ತಮಿಳುನಾಡಿನಲ್ಲಿ ಫಾಕ್ಸ್‌ಕಾನ್ ಹೂಡಿಕೆ ಮಾಡಿದ ಸುದ್ದಿಯ ಒಂದು ದಿನದ ಬಳಿಕ ಈಗ ಕರ್ನಾಟಕದಲ್ಲಿ ಫಾಕ್ಸ್‌ಕಾನ್ ಹೂಡಿಕೆ ಮಾಡುವ ಸುದ್ದಿ ಬಂದಿದೆ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಫಾಕ್ಸ್‌ಕಾನ್ 1600 ಕೋಟಿ ರೂಪಾಯಿ ವೆಚ್ಚದಲ್ಲಿ ಮೊಬೈಲ್ ಘಟಕಗಳ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲಿದೆ ಎಂದು ತಮಿಳುನಾಡು ಸರ್ಕಾರ ಸೋಮವಾರ ಘೋಷಿಸಿದೆ. ಈ ಸ್ಥಾವರವು 6,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಕರ್ನಾಟಕ ಸರ್ಕಾರದಿಂದ ಮಹತ್ವದ ಒಪ್ಪಂದಕ್ಕೆ ಸಹಿ
ಇನ್ನು ಮಂಗಳವಾರ ಕರ್ನಾಟಕ ಸರ್ಕಾರವು ಇನ್ನೊಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿ (ಐಬಿಸಿ)ಯೊಂದಿಗಿನ ಬ್ಯಾಟರಿ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸುವ ಒಪ್ಪಂದ ಇದಾಗಿದೆ. 8,000 ಕೋಟಿ ರೂಪಾಯಿ ಅಥವಾ 971.89 ಮಿಲಿಯನ್ ಡಾಲರ್ ಹೂಡಿಕೆಯ ಒಪ್ಪಂದಕ್ಕೆ ಸರ್ಕಾರ ಸಹಿ ಮಾಡಿದ್ದು, ಈ ಘಟಕವು 100 ಎಕರೆ ಪ್ರದೇಶದಲ್ಲಿ ಇರಲಿದೆ ಎಂದು ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆಗಳು, ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಖಚಿತಪಡಿಸಿದ್ದಾರೆ.
ವೇದಾಂತ ಜೊತೆಗಿನ ಡೀಲ್ ರದ್ದು ಮಾಡಿದ್ದ ಫಾಕ್ಸ್‌ಕಾನ್!
ಈ ಹಿಂದೆ ಜುಲೈ 10 ರಂದು ವೇದಾಂತ ಗ್ರೂಪ್‌ನೊಂದಿಗಿನ ತನ್ನ ಜಂಟಿ ಉದ್ಯಮದಿಂದ ಹಿಂದೆ ಸರಿದಿದೆ ಎಂದು ಸಂಸ್ಥೆಯು ಹೇಳಿಕೆಯಲ್ಲಿ ಮಾಹಿತಿ ನೀಡಿದೆ. "ಅಧಿಕ ವೈವಿಧ್ಯಮಯ ಅಭಿವೃದ್ಧಿ ಅವಕಾಶಗಳನ್ನು ಹುಡುಕುವ ನಿಟ್ಟಿನಲ್ಲಿ ವೇದಾಂತದೊಂದಿಗೆ ಜಂಟಿ ಉದ್ಯಮದಲ್ಲಿ ಮುಂದುವರಿಯುವುದಿಲ್ಲ ಎಂದು ಫಾಕ್ಸ್‌ಕಾನ್ ನಿರ್ಧಾರ ಮಾಡಿದೆ," ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.


Click it and Unblock the Notifications