ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (ಎಫ್ ಪಿಐ) ಭಾರತದ ಬಂಡವಾಳ ಮಾರುಕಟ್ಟೆಯಿಂದ ಮಾರ್ಚ್ ತಿಂಗಳಲ್ಲಿ ಈ ವರೆಗೆ (22ನೇ ತಾರೀಕಿನ ತನಕ) 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಹಿಂತೆಗೆದುಕೊಂಡಿದ್ದಾರೆ. ಕೊರೊನಾ ಹರಡುತ್ತಿರುವ ಪರಿಣಾಮವಾಗಿ ಜಾಗತಿಕ ಆರ್ಥಿಕ ಕುಸಿತ ಉಂಟಾಗಬಹುದು ಎಂಬ ಆತಂಕದಿಂದ ಹೀಗೆ ಮಾಡುತ್ತಿದ್ದಾರೆ.
ತಜ್ಞರ ಪ್ರಕಾರ, ವಿದೇಶಿ ಹೂಡಿಕೆದಾರರು ಅಪಾಯ ಹೆಚ್ಚಿರುವ ಆಸ್ತಿಗಳ ಮೇಲಿನ ಹೂಡಿಕೆ ಹಿಂಪಡೆಯುತ್ತಿದ್ದಾರೆ. ಡಾಲರ್ ನಲ್ಲಿ ಮೌಲ್ಯಮಾಪನ ಆಗುವ ಆಸ್ತಿಗಳು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಲಭ್ಯ ಇರುವ ದತ್ತಾಂಶದ ಪ್ರಕಾರ, ಈಕ್ವಿಟೀಸ್ ನಿಂದ 56,247.53 ಕೋಟಿ ರುಪಾಯಿ ಹಾಗೂ ಡೆಟ್ ಸೆಗ್ಮೆಂಟ್ ನಿಂದ 52,449.48 ಕೋಟಿ ರುಪಾಯಿ ಸೇರಿ ಒಟ್ಟು 1,08,697.01 ಕೋಟಿ ರುಪಾಯಿಯನ್ನು ಮಾರ್ಚ್ 2ರಿಂದ 20ನೇ ತಾರೀಕಿನ ಮಧ್ಯೆ ಹಿಂಪಡೆಯಲಾಗಿದೆ.
ಜಾಗತಿಕ ಪಿಡುಗಾಗಿ ಕಾಡುತ್ತಿರುವ ಕೊರೊನಾದಿಂದ ಮಾರ್ಕೆಟ್ ನಲ್ಲಿ ತಲ್ಲಣ ಉಂಟಾಗಿದೆ. ಭಾರತದಂಥ ಮಾರ್ಕೆಟ್ ಗಳಿಂದ ಹಣ ಹಿಂತೆಗೆದುಕೊಳ್ಳುತ್ತಿರುವ ಹೂಡಿಕೆದಾರರು, ಸುರಕ್ಷಿತ ಮಾರ್ಕೆಟ್ ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇನ್ನು ಸರ್ಕಾರದ ಹಣವು ಆರ್ಥಿಕ ಚಟುವಟಿಕೆಗಿಂತ ಹೆಚ್ಚಾಗಿ ಕೊರೊನಾ ನಿಯಂತ್ರಣಕ್ಕೆ ಖರ್ಚಾಗುತ್ತಿರುವುದರಿಂದ ಹಿಂಜರಿತದ ಪರಿಣಾಮ ಮತ್ತಷ್ಟೂ ಭೀಕರವಾಗಿದೆ.

ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವುದು ಗಮನಕ್ಕೆ ಬಂದ ಮೇಲೆ ಪರಿಸ್ಥಿತಿ ಸುಧಾರಿಸಬಹುದು ಎಂಬುದು ತಜ್ಞರ ಅಭಿಪ್ರಾಯ. ಇನ್ನು ಮಾರುಕಟ್ಟೆಯಲ್ಲಿ ಏರಿಳಿತ ಹೀಗೇ ಕೆಲ ಕಾಲ ಮುಂದುವರಿಯಬಹುದು ಎಂದು ಕೂಡ ಹೇಳಲಾಗುತ್ತಿದೆ. ಮಾರ್ಚ್ 20ಕ್ಕೆ ಕೊನೆಯಾದ ವಾರದಲ್ಲಿ, ಒಂದೇ ವಾರದಲ್ಲಿ ಸೆನ್ಸೆಕ್ಸ್ 4187.52 ಪಾಯಿಂಟ್ ಹಾಗೂ ನಿಫ್ಟಿ 1209.75 ಪಾಯಿಂಟ್ ಕುಸಿದಿವೆ.


Click it and Unblock the Notifications