ಸುಮಾರು 56 ವರ್ಷದ ವ್ಯಕ್ತಿಯೊಬ್ಬರು ಹಳೆಯ 2 ಮತ್ತು 5 ರೂಪಾಯಿಗಳ ನಾಣ್ಯಗಳಿಗೆ ಬದಲಾಗಿ 31 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿದ ವಿಡಿಯೋವನ್ನು ನಂಬಿದ ಬೆಂಗಳೂರಿನ ವ್ಯಕ್ತಿಯೊಬ್ಬರು ಸೈಬರ್ ಅಪರಾಧಿಗಳ ಜಾಲಕ್ಕೆ ಬಲಿಯಾಗಿದ್ದಾರೆ.
ವಂಚಕರಿಂದ ಸುಮಾರು 2.3 ಲಕ್ಷ ರೂಪಾಯಿ ಕಳೆದುಕೊಂಡ ನಂತರ, ಹೆಚ್ಚಿನ ಹಣವನ್ನು ಪಾವತಿಸಲು ವ್ಯಕ್ತಿ ನಿರಾಕರಿಸಿದ್ದಾರೆ. ಆದರೆ ದುಷ್ಕರ್ಮಿಗಳು ಹಿರಿಯ ಪೊಲೀಸರಂತೆ ಪೋಸ್ ನೀಡಿ ಹಣ ವಸೂಲಿ ಮಾಡಿದ್ದಕ್ಕಾಗಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಹಲಸೂರು ನಿವಾಸಿ ಮತ್ತು ತಂಬಾಕು ಉತ್ಪನ್ನಗಳ ವಿತರಕ ರಾಹುಲ್ (ಹೆಸರು ಬದಲಾಯಿಸಲಾಗಿದೆ) ಪೊಲೀಸರಿಗೆ ನೀಡಿದ ದೂರಿನಲ್ಲಿ, ಇಂಟರ್‌ನೆಟ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುವಾಗ, 2 ರೂ ಮತ್ತು 5 ರೂಪಾಯಿಗಳಿಗೆ ಬದಲಾಗಿ ಬಹಳಷ್ಟು ಹಣವನ್ನು ನೀಡುವ ಕ್ಲಿಪ್ ಒಂದು ಸಿಕ್ಕಿದೆ ಎಂದು ಹೇಳಿದ್ದಾರೆ.
1980 ಮತ್ತು 1990 ರ ದಶಕದಲ್ಲಿ ಮುದ್ರಿಸಲಾದ ನಾಣ್ಯಗಳು ಮತ್ತು ಇಂದಿರಾ ಗಾಂಧಿಯವರ ಭಾವಚಿತ್ರ ಮತ್ತು ಭಾರತೀಯ ನಕ್ಷೆಯನ್ನು ಹೊಂದಿರಬೇಕು ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಅವರ ಬಳಿ ಕೆಲವು ಹಳೆಯ ನಾಣ್ಯಗಳು ಇದ್ದ ಕಾರಣ, ಅವರು ವೀಡಿಯೊದಲ್ಲಿ ಪ್ರದರ್ಶಿಸಲಾದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದರು.
ಪರಿಶೀಲನೆ ಮತ್ತು ಬೆಲೆ ಅಂದಾಜಿಸಲು ನಾಣ್ಯಗಳ ಛಾಯಾಚಿತ್ರಗಳನ್ನು ಕಳುಹಿಸಲು ರಾಹುಲ್‌ಗೆ ತಿಳಿಸಲಾಗಿದೆ. "ನಾನು ಒಂದು 5 ರೂಪಾಯಿ ನಾಣ್ಯ ಮತ್ತು ಐದು ರೂಪಾಯಿ 2 ನಾಣ್ಯಗಳ ಫೋಟೋಗಳನ್ನು ಕಳುಹಿಸಿದ ನಂತರ, ದುಷ್ಕರ್ಮಿಯು ಆರು ನಾಣ್ಯಗಳಿಗೆ 31 ಲಕ್ಷ ರೂಪಾಯಿ ನೀಡುವುದಾಗಿ ಕರೆಯಲ್ಲಿ ತಿಳಿಸಿದರು. ಹಿನ್ನೆಲೆಯಲ್ಲಿ ನಾಣ್ಯಗಳನ್ನು ಎಣಿಸುವ ಜನರ ಗುಂಪನ್ನು ನನಗೆ ತೋರಿಸಿದರು," ಎಂದು ರಾಹುಲ್ ತಿಳಿಸಿದರು.
ರಾಹುಲ್ ದುಷ್ಕರ್ಮಿಗೆ ತನ್ನ ಆಧಾರ್ ಕಾರ್ಡ್ ನಕಲು ಮತ್ತು ಸೆಲ್ಫಿ ಕಳುಹಿಸಿದ್ದಾನೆ. ದುಷ್ಕರ್ಮಿ ಹೇಳಿದಂತೆ ಸೇವೆ ಮತ್ತು ವಿತರಣಾ ಶುಲ್ಕ, ವಿಮಾ ಶುಲ್ಕ, ಟಿಡಿಎಸ್ ಮತ್ತು ಜಿಎಸ್‌ಟಿ ಸೇರಿದಂತೆ ವಿವಿಧ ಶುಲ್ಕವಾಗಿ 2.3 ಲಕ್ಷ ರೂಪಾಯಿ ಪಾವತಿ ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ರಾಹುಲ್ ಹೆಚ್ಚಿನ ಹಣ ನೀಡಲು ನಿರಾಕರಿಸಿದರು.
"ಒಂದು ಬಾರಿ ನಾನು ಒಪ್ಪಂದಕ್ಕೆ ಬಂದರೆ, ನಾನು ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ದುಷ್ಕರ್ಮಿ ಬೆದರಿಕೆ ಹಾಕಿದ್ದಾನೆ. ಸರ್ಕಾರ ನನ್ನ ವಿರುದ್ಧ ದೆಹಲಿಯಲ್ಲಿ ಕೇಸು ದಾಖಲಿಸಲಿದೆ ಎಂದರು. ಸ್ವಲ್ಪ ಸಮಯದ ನಂತರ, ದೆಹಲಿಯಿಂದ ಹಿರಿಯ ಪೊಲೀಸ್ ಅಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ನನಗೆ ಕರೆ ಬಂದಿತು," ಎಂದು ರಾಹುಲ್ ತಿಳಿಸಿದರು.
"ಅಕ್ರಮ ಹಣ ವರ್ಗಾವಣೆ ಸೇರಿದಂತೆ ನನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇದೆ ಎಂದು ತಿಳಿಸಿದರು. ಹಣ ಕೊಡಲು ತಪ್ಪಿದರೆ ಮನೆಯಿಂದಲೇ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇನ್ನೊಬ್ಬ ವ್ಯಕ್ತಿ ನನಗೆ ಕರೆ ಮಾಡಿ, ತಾನು ಮುಂಬೈ ಪೊಲೀಸ್ ಅಧಿಕಾರಿ ಮತ್ತು ನನ್ನ ವಿರುದ್ಧ ಇನ್ನೊಂದು ಪ್ರಕರಣವಿದೆ ಎಂದು ಹೇಳಿದ್ದಾನೆ. ನನ್ನನ್ನು ಬಂಧಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ," ಎಂದು ರಾಹುಲ್ ದೂರಿನಲ್ಲಿ ಹೇಳಿದ್ದಾರೆ.
"ಅವರು ವೀಡಿಯೊ ಕರೆಗಳನ್ನು ಮಾಡಿದರು ಮತ್ತು ಪೊಲೀಸ್ ಮತ್ತು ಸೇನಾ ಸಮವಸ್ತ್ರದಲ್ಲಿ ಅವರಂತೆಯೇ ಪೋಸ್ ನೀಡಿದರು. ಅವರು ನಿಜವಾದ ಪೊಲೀಸರು ಎಂದು ನಾನು ಆರಂಭದಲ್ಲಿ ನಂಬಿದ್ದೆ, ಆದರೆ ನಾಣ್ಯಗಳನ್ನು ಬದಲಾಯಿಸುವ ಮೂಲಕ ಹಣ ಗಳಿಸುವ ದುರಾಸೆಯನ್ನು ಹೊರತುಪಡಿಸಿ ನಾನು ಯಾವುದೇ ತಪ್ಪು ಮಾಡದ ಕಾರಣ ಅವರಿಗೆ ಅಧಿಕ ಹಣ ಪಾವತಿಸಲು ನಾನು ಸಿದ್ಧವಾಗಿಲ್ಲ," ಎಂದು ರಾಹುಲ್ ತಿಳಿಸಿದರು.
"ನಾನು ಹಲಸೂರು ಠಾಣೆಗೆ ಹೋಗಿ ದೂರು ನೀಡಿದ್ದೇನೆ. ಇನ್ಸ್ ಪೆಕ್ಟರ್ ವಂಚಕನನ್ನು ಕರೆ ಮಾಡಿ ನನಗೆ ಮೋಸ ಮಾಡಿದ್ದಕ್ಕಾಗಿ ಗದರಿಸಿದರು. ಮರುದಿನ ಮತ್ತೆ ದುಷ್ಕರ್ಮಿ ನನಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ನಾನು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದೇನೆ, ಆದರೆ ಅವರು ಕೇಂದ್ರೀಯ ಸಂಸ್ಥೆಗಳಿಂದ ಬಂದವರು ಎಂದು ಅವರು ಹೇಳಿದರು. ತಂಡವೊಂದು ಮುಂಬೈಗೆ ಬಂದಿದೆ ಮತ್ತು ಜನವರಿ 20 ರಂದು ನನ್ನನ್ನು ಬಂಧಿಸುವುದಾಗಿ ಅವರು ನನಗೆ ಎಚ್ಚರಿಕೆ ನೀಡಿದರು," ಎಂದು ರಾಹುಲ್ ತಿಳಿಸಿದರು.


Click it and Unblock the Notifications