ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ತೆರೆಯಲಾಗುತ್ತದೆ. ಈ ನಡುವೆ ಈಗಾಗಲೇ ವಿವಿಧ ನಗರಗಳಿಂದ ಅಯೋಧ್ಯೆಗೆ ವಿಮಾನದ ವ್ಯವಸ್ಥೆಯನ್ನು ವಿಮಾನಯಾನ ಸಂಸ್ಥೆಗಳು ಮಾಡುತ್ತಿದೆ. ಈಗಾಗಲೇ ಇರುವ ವಿಮಾನದ ಪ್ರಮಾಣದಲ್ಲಿ ಹೆಚ್ಚಳವನ್ನು ಕೂಡಾ ವಿಮಾನಯಾನ ಸಂಸ್ಥೆಗಳು ಮಾಡುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಅಯೋಧ್ಯೆಯ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜನವರಿ 17 ರಿಂದ ಬೆಂಗಳೂರು ಮತ್ತು ಕೋಲ್ಕತ್ತಾದಿಂದ ಈ ನೂತನ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮಕ್ಕೆ ಪ್ರತಿ ದಿನ ವಿಮಾನವನ್ನು ಹೊಂದಿದೆ.

ಬೆಂಗಳೂರು ಮತ್ತು ಕೋಲ್ಕತ್ತಾ ವಿಮಾನಗಳನ್ನು ಘೋಷಿಸುವಾಗ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮುಖ್ಯ ವಾಣಿಜ್ಯ ಅಧಿಕಾರಿ ಅಂಕುರ್ ಗಾರ್ಗ್, "ಭಾರತದಾದ್ಯಂತ ಸಂಪರ್ಕವನ್ನು ವಿಸ್ತರಿಸುವ ನಮ್ಮ ಸಮರ್ಪಣೆಯು ನಮ್ಮ ಈ ವಿಮಾನ ವಿಸ್ತರಣೆಯಿಂದ ಅಚಲವಾಗಿ ಉಳಿದಿದೆ ಎಂಬ ಸ್ಪಷ್ಟತೆಯನ್ನು ಮೂಡಿಸಿದೆ," ಎಂದು ಹೇಳಿದ್ದಾರೆ.
ಅಯೋಧ್ಯೆಯನ್ನು ದೆಹಲಿ, ಬೆಂಗಳೂರು ಮತ್ತು ಕೋಲ್ಕತ್ತಾಗೆ ಸಂಪರ್ಕಿಸುವ ತಡೆರಹಿತ ಸೇವೆಗಳ ಪರಿಚಯವು ಈ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಕೂಡಾ ಅಂಕುರ್ ಗಾರ್ಗ್ ಹೇಳಿದ್ದಾರೆ. "ಬೆಂಗಳೂರು ಮತ್ತು ಕೋಲ್ಕತ್ತಾವು ಅಯೋಧ್ಯೆಗೆ ಗೇಟ್‌ವೇಗಳಾಗಿ ಕಾರ್ಯನಿರ್ವಹಿಸುತ್ತದೆ. ದಕ್ಷಿಣ ಮತ್ತು ಪೂರ್ವ ಭಾರತದ ಯಾತ್ರಾರ್ಥಿಗಳಿಗೆ ಅನುಕೂಲಕರ ಏಕ-ನಿಲುಗಡೆ ಪ್ರವಾಸವನ್ನು ಒದಗಿಸುತ್ತದೆ," ಎಂದು ತಿಳಿಸಿದರು.
ಅಯೋಧ್ಯೆಗೆ 1000 ವಿಶೇಷ ರೈಲು ಆರಂಭಿಸಲಿದೆ ರೈಲ್ವೆ
ಜನವರಿ 22 ರಂದು ಬಹು ನಿರೀಕ್ಷಿತ ಮಹಾಮಸ್ತಕಾಭಿಷೇಕ ನಡೆಯಲಿದೆ. ಅದಕ್ಕೂ ಮುನ್ನ ಭಾರತೀಯ ರೈಲ್ವೇ ವ್ಯಾಪಕ ಕಾರ್ಯಾಚರಣೆಗೆ ಸಜ್ಜಾಗಿದೆ. ಭಕ್ತರಿಗೆ ತೀರ್ಥಯಾತ್ರೆಗೆ ಅನುಕೂಲವಾಗುವಂತೆ ದೇಶದ ವಿವಿಧ ಭಾಗಗಳಿಂದ 1,000 ವಿಶೇಷ ರೈಲುಗಳನ್ನು ಆರಂಭಿಸಲು ಸಜ್ಜಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಈ ರೈಲುಗಳ ಕಾರ್ಯಾಚರಣೆಯು ಜನವರಿ 19 ರಂದು ಪ್ರಾರಂಭವಾಗಲಿದೆ.
ವಿಶೇಷ ರೈಲುಗಳು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತ್ತಾ, ನಾಗ್ಪುರ, ಲಕ್ನೋ ಮತ್ತು ಜಮ್ಮು ಸೇರಿದಂತೆ ಪ್ರಮುಖ ನಗರಗಳನ್ನು ಅಯೋಧ್ಯೆಗೆ ಸಂಪರ್ಕಿಸಲಿವೆ. "ಈ ಉದ್ದೇಶಿತ ರೈಲುಗಳ ಸಂಖ್ಯೆಯನ್ನು ಬೇಡಿಕೆಯನ್ನು ಪರಿಗಣಿಸಿ ನಿಯೋಜಿಸಬಹುದು. ಹೆಚ್ಚಿನ ಸಂಖ್ಯೆಯ ಜನರಿಗೆ ಸೌಲಭ್ಯ ಕಲ್ಪಿಸಲು ಅಯೋಧ್ಯೆಯಲ್ಲಿ ನಿಲ್ದಾಣವನ್ನು ನವೀಕರಿಸಲಾಗಿದೆ," ಎಂದು ಪತ್ರಿಕೆಯು ಮೂಲಗಳನ್ನು ಉಲ್ಲೇಖಿಸಿದೆ.
ಪುನರಾಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣವು ಪ್ರತಿದಿನ ಸುಮಾರು 50,000 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಜನವರಿ 15 ರ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.


Click it and Unblock the Notifications