ಕರ್ನಾಟಕ ರಾಜ್ಯದಲ್ಲಿನ ಗಾರ್ಮೆಂಟ್ಸ್, ರೇಷ್ಮೆಬಟ್ಟೆ, ಸ್ಪಿನ್ನಿಂಗ್ ಮಿಲ್ (ನೂಲುವ ಗಿರಣಿ), ಬಟ್ಟೆಗೆ ಬಣ್ಣ ಹಾಕುವ ಡೈ ಕಾರ್ಖಾನೆಗಳ ಉದ್ಯೋಗಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು, ಈ ಉದ್ಯೋಗಿಗಳ ವೇತನವನ್ನು ಶೇಕಡ 14ರಷ್ಟು ಏರಿಕೆ ಮಾಡಲಾಗುತ್ತದೆ.
ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯು ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಆದೇಶವನ್ನು ಹೊರಡಿಸಿದೆ. ಈ ಪರಿಷ್ಕರಣೆಯ ಪ್ರಕಾರ ಗಾರ್ಮೆಂಟ್ಸ್ ಕೆಲಸಗಾರರ ವೇತನವು ಸುಮಾರು ಶೇಕಡ 14ರಷ್ಟು ಏರಿಕೆಯಾಗಲಿದೆ. ಅಂದರೆ ಈ ಉದ್ಯೋಗಿಗಳು ಇನ್ಮುಂದೆ ಈಗಿನ ವೇತನದಿಂದ ಸುಮಾರು ಶೇಕಡ 14ರಷ್ಟು ಹೆಚ್ಚಳ ವೇತನವನ್ನು ಪಡೆಯಲಿದ್ದಾರೆ.
ಹಾಗಾದರೆ ಗಾರ್ಮೆಟ್ಸ್ ಕೆಲಸಗಾರರ ವೇತನ ಎಷ್ಟಾಗುತ್ತದೆ, ಯಾರಿಗೆ ಎಷ್ಟು ವೇತನ ಲಭ್ಯವಾಗಲಿದೆ, ಏನಿದು ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಎಂದು ತಿಳಿಯೋಣ ಮುಂದೆ ಓದಿ.....

ಯಾರಿಗೆ ಎಷ್ಟು ವೇತನ?
ಸ್ಪಿನ್ನಿಂಗ್ ಮಿಲ್ಸ್ ಉದ್ದಿಮೆಗಳಲ್ಲಿ ಕಾರ್ಯನಿರ್ವಹಣೆ ಮಾಡುವ ಅತಿ ಕುಶಲ ಕಾರ್ಮಿಕರಿಗೆ ತಿಂಗಳಿಗೆ 9,679 ರು, ಕುಶಲ ಕಾರ್ಮಿಕರಿಗೆ 9,434 ರು, ಅರೆ ಕುಶಲ ಕಾರ್ಮಿಕರಿಗೆ 8,962 ರು, ಬಟ್ಟೆಗಳ ತಯಾರಿಕೆ (ಗಾರ್ಮೆಂಟ್ಸ್), ವಿನ್ಯಾಸ ಮತ್ತು ಟೈಲರಿಂಗ್ ಉದ್ದಿಮೆಗಳಲ್ಲಿನ ಅತಿ ಕುಶಲ ಕಾರ್ಮಿಕರಿಗೆ (ಡಿಸೈನರ್ಸ್, ಮಾರ್ಕರ್ಸ್ ಅಂಡ್ ಕಟರ್ಸ್, ದರ್ಜಿ ಹಾಗೂ ಇತರೆ) 10,990 ರು, ಕುಶಲ ಕಾರ್ಮಿಕರಿಗೆ 10,659 ರು, ಅರೆ ಕುಶಲ ಕಾರ್ಮಿಕರು 10,397 ರು, ಕೌಶಲ್ಯವಿಲ್ಲದ ಸಿಬ್ಬಂದಿಗೆ 10,130 ರು ನಿಗದಿ ಮಾಡಲಾಗಿದೆ.
ಸ್ಪಿನ್ನಿಂಗ್ ಮಿಲ್ಸ್ ಉದ್ದಿಮೆಗಳಲ್ಲಿ ದುಡಿಯುವ ಕೌಶಲ್ಯವಿಲ್ಲದ ಕಾರ್ಮಿಕರಿಗೆ 8,715 ರು, ಕಚೇರಿ ಸಿಬ್ಬಂದಿಗಳಿಗೆ ಜವಾಬ್ದಾರಿಗಳ ಆಧಾರದ ಮೇಲೆ 8,883 ರು-11,050 ರುವರೆಗೆ ಕನಿಷ್ಠ ವೇತನ ನಿಗದಿ ಮಾಡಲಾಗಿದೆ. ಬಟ್ಟೆಗಳಿಗೆ ಬಣ್ಣ ಹಾಕುವ (ಡೈ) ಮತ್ತು ಅಚ್ಚು ಹಾಕುವ (ಪ್ರಿಂಟ್) ಉದ್ದಿಮೆಗಳಲ್ಲಿನ ಉದ್ಯೋಗದಲ್ಲಿರುವ ಅತಿ ಕುಶಲ ಕಾರ್ಮಿಕರಿಗೆ ಮಾಸಿಕ 10,997 ರು ನಿಗದಿ ಮಾಡಲಾಗಿದೆ.
ರೇಷ್ಮೆ ಬಟ್ಟೆಗಳ ಉದ್ದಿಮೆಗಳಲ್ಲಿ ಕಾರ್ಯನಿರ್ವಹಣೆ ಮಾಡುವ ಅತಿ ಕುಶಲ ಕಾರ್ಮಿಕರಿಗೆ ಮಾಸಿಕ 11,236 ರು, ಅತಿ ಕುಶಲ ಕಾರ್ಮಿಕ ವಿಭಾಗದಲ್ಲಿ ಹೆಡ್ ಡಿಸೈನರ್‌ನಂತಹ ಕಾರ್ಯನಿರ್ವಹಣೆ ಮಾಡುವವರಿಗೆ 13,239 ರು, ಕುಶಲ ಕಾರ್ಮಿಕರಿಗೆ 11,056 ರು, ಅರೆ ಕುಶಲ ಕಾರ್ಮಿಕರಿಗೆ 10,465 ರು ಅನ್ನು ಸರ್ಕಾರ ನಿಗದಿ ಮಾಡಿದೆ.
ಎಲೆಕ್ಟ್ರಿಶಿಯನ್, ವೈಂಡರ್, ಫಿಟ್ಟರ್ ಕಾರ್ಯವನ್ನು ಮಾಡುವ ಕುಶಲ ಕಾರ್ಮಿಕರಿಗೆ 10,504 ರು, ನೂಲು ಬಿಡಿಸುವವರು, ಟೇಪ್‌ಮ್ಯಾನ್ ಮೊದಲಾದ ಕಾರ್ಯ ಮಾಡುವ ಅರೆ ಕುಶಲ ಕಾರ್ಮಿಕರಿಗೆ 9,572 ರು, ಸ್ಪಿನ್ನಿಂಗ್ ಹೆಲ್ಪರ್ಸ್, ಪ್ಯಾಕರ್ಸ್, ಮಿಕ್ಸರ್ಸ್, ಫ್ರೆಂಕೂಲಿಸ್‌ನಂತಹ ಕೌಶಲ್ಯ ಅಗತ್ಯವಿಲ್ಲದ ಕೆಲಸಗಳಿಗೆ 9,216 ರು ನಿಗದಿ ಪಡಿಸಲಾಗಿದೆ. ಇನ್ನು ಚಾಲಕರು 10,340 ರು, ಕ್ಲೀನರ್ಸ್‌ಗೆ 9,023 ರು ಕನಿಷ್ಠ ವೇತನವನ್ನು ನೀಡಬೇಕು ಎಂದು ಸರ್ಕಾರವು ನಿಗದಿಪಡಿಸಿದೆ.
ಏನಿದು ಕಾರ್ಮಿಕರ ಕನಿಷ್ಠ ವೇತನ?
ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡಬೇಕು ಎಂಬುವುದು ಹಲವಾರು ವರ್ಷಗಳ ಆಗ್ರಹವಾಗಿದೆ. ಕಾರ್ಮಿಕ ಇಲಾಖೆಯು 2017ರಲ್ಲಿ ಸಭೆ ನಡೆಸಿ ಪರಿಷ್ಕೃತ ಕನಿಷ್ಠ ವೇತನ ದರ ನಿಗದಿಪಡಿಸಿತ್ತು. 2019ರಲ್ಲಿ ಮಾಲೀಕರ ಒತ್ತಾಯದ ಮೇಲೆ ಕನಿಷ್ಠ ವೇತನ ಪರಿಷ್ಕರಿಸಲಾಗಿತ್ತು. ಆದರೆ ಈ ಎರಡು ಸಭೆಗಳಲ್ಲಿ ನಿಗದಿಯಾಗಿದ್ದ ಕನಿಷ್ಠ ವೇತನದಲ್ಲಿ ಯಾವುದನ್ನು ಜಾರಿ ಮಾಡಬೇಕು ಎಂಬ ಗೊಂದಲ ಉಂಟಾಗಿ ಈ ವಿಚಾರವು ನ್ಯಾಯಾಲಯಕ್ಕೆ ತಲುಪಿತ್ತು. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯವು ಆದೇಶ ಹೊರಡಿಸಿದೆ. ಇದರಿಂದಾಗಿ ಈಗ ಸರ್ಕಾರವು ಶೇಕಡ 14ರಷ್ಟು ವೇತನ ಹೆಚ್ಚಳ ಮಾಡಿ ಆದೇಶಿಸಿದೆ.


Click it and Unblock the Notifications