ಭಾರತೀಯ ರೈಲ್ವೇಯ ಗತಿ ಶಕ್ತಿ ವಿಶ್ವವಿದ್ಯಾಲಯ ಮತ್ತು ಜಾಗತಿಕ ಏರೋಸ್ಪೇಸ್ ದೈತ್ಯ ಏರ್‌ಬಸ್ ಗುರುವಾರ ಏರೋಸ್ಪೇಸ್ ಕ್ಷೇತ್ರಕ್ಕೆ ಸಂಬಂಧಿಸಿದ ವೈಜ್ಞಾನಿಕ, ತಾಂತ್ರಿಕ ಮತ್ತು ನಿರ್ವಹಣಾ ವಿಷಯಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಲು ವಿದ್ಯಾರ್ಥಿಗಳಿಗೆ ಸಂಶೋಧನೆ, ಬೋಧನೆ ಮತ್ತು ತರಬೇತಿ ಕ್ಷೇತ್ರಗಳಲ್ಲಿ ಸಹಕರಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.
ಏರ್‌ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೆಮಿ ಮಿಲಾರ್ಡ್ ಮತ್ತು ಗತಿ ಶಕ್ತಿ ವಿಶ್ವವಿದ್ಯಾಲಯದ (ಜಿಎಸ್‌ವಿ) ಉಪಕುಲಪತಿ ಮನೋಜ್ ಚೌಧರಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ ಜಯ ವರ್ಮ ಸಿನ್ಹಾ ಸಮ್ಮುಖದಲ್ಲಿ ಮೆಮೊರೆಂಡಮ್‌ಗೆ ಸಹಿ ಹಾಕಿದರು.

"ಗತಿ ಶಕ್ತಿ ವಿಶ್ವವಿದ್ಯಾಲಯ (ಜಿಎಸ್‌ವಿ) ಹೆಚ್ಚಿನ ಉದ್ಯಮ- ಅಕಾಡೆಮಿಯಾ ಪಾಲುದಾರಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ. ಅದರ ಎಲ್ಲಾ ಕೋರ್ಸ್‌ಗಳನ್ನು ಉದ್ಯಮದ ಸಹಯೋಗದಲ್ಲಿ ಆರಂಭಿಸಿಲಾಗುತ್ತದೆ. ಗತಿ ಶಕ್ತಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಉದ್ಯಮಕ್ಕೆ ಸಿದ್ಧರಾಗುತ್ತಾರೆ. ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಉದ್ಯೋಗಕ್ಕಾಗಿ ಈ ವಿದ್ಯಾರ್ಥಿಗಳ ಬೇಡಿಕೆ ಅಧಿಕವಾಗಿರುತ್ತದೆ," ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಏರ್‌ಬಸ್-ಜಿಎಸ್‌ವಿ ಒಪ್ಪಂದ ಗತಿ ಶಕ್ತಿ ವಿಶ್ವವಿದ್ಯಾಲಯದಲ್ಲಿ 'ಏರೋಸ್ಪೇಸ್ ಮೇಜರ್' ಬಿ-ಟೆಕ್ ಕೋರ್ಸ್ ಅನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ನಡೆದಿದೆ. ಇದು ವಿಮಾನಯಾನ ಕ್ಷೇತ್ರಕ್ಕೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೋರ್ಸ್ ಆಗಿದೆ. ಜಿಎಸ್‌ವಿಯಲ್ಲಿ ವಲಯದ ನಿರ್ದಿಷ್ಟ ಕೋರ್ಸ್‌ಗಳನ್ನು ಪ್ರಾರಂಭಿಸಲು ಇದೇ ರೀತಿಯ ಒಪ್ಪಂದಗಳನ್ನು ಸೀಮೆನ್ಸ್, ಅಲ್‌ಸ್ಟಾಮ್, ಡಾಯ್ಚ್ ಬಾನ್‌ನಂತಹ ಉದ್ಯಮದ ಪ್ರಮುಖರೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಮುಂದಿನ ಕೆಲವು ವರ್ಷಗಳಲ್ಲಿ ದೇಶದಲ್ಲಿ ವಿಸ್ತರಣೆಯಾಗುವುದರಿಂದ ವಿಮಾನಯಾನ ಕ್ಷೇತ್ರಕ್ಕೆ ಕನಿಷ್ಠ 15,000 ಎಂಜಿನಿಯರ್‌ಗಳು ಬೇಕಾಗುವ ನಿರೀಕ್ಷೆಯಿದೆ ಎಂದು ವೈಷ್ಣವ್ ಹೇಳಿದರು. ಇನ್ನು ಈ ವೇಳೆ ಮಾತನಾಡಿದ ಮಿಲಾರ್ಡ್, "ಏರ್‌ಬಸ್ ದೇಶದಲ್ಲಿ ಸಂಪೂರ್ಣ ಸಮಗ್ರ ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲಾ ಕಾರ್ಯಗಳನ್ನು ಮಾಡಲು ಸಿದ್ಧವಾಗಿದೆ," ಎಂದು ಹೇಳಿದರು.
"ಗತಿ ಶಕ್ತಿ ವಿಶ್ವವಿದ್ಯಾಲಯದೊಂದಿಗಿನ ಪಾಲುದಾರಿಕೆಯು ದೇಶದಲ್ಲಿ ನುರಿತ ಉದ್ಯೋಗಿಗಳ ಸೃಷ್ಟಿ ಕಾರ್ಯವನ್ನು ಹೆಚ್ಚಿಸುತ್ತದೆ. ವೇಗವಾಗಿ ಬೆಳೆಯುತ್ತಿರುವ ಏರೋಸ್ಪೇಸ್ ವಲಯಕ್ಕೆ ಸೇವೆ ಸಲ್ಲಿಸಲು ಭವಿಷ್ಯದ ನುರಿತರನ್ನು ಸೃಷ್ಟಿ ಮಾಡಲಿದೆ," ಎಂದು ಏರ್‌ಬಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರೆಮಿ ಮಿಲಾರ್ಡ್ ಅಭಿಪ್ರಾಯಿಸಿದರು.


Click it and Unblock the Notifications