ಕೋವಿಡ್-19 ಸಾಂಕ್ರಾಮಿಕದ ಎಂಟ್ರಿ ಬಳಿಕ ಕಾರ್ಪೋರೇಟ್ ವಲಯದಲ್ಲಿ ಡಿಜಿಟಲೀಕರಣದ ವೇಗ ಹೆಚ್ಚಾಗಿದ್ದು, ಮುಂದಿನ 3 ವರ್ಷಗಳಲ್ಲಿ 3 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವರದಿಯಾಗಿದೆ.
ಕಂಪನಿಗಳು ತಮ್ಮ ಬಿಜಿನೆಸ್‌ಗೆ ವ್ಯಾಪಕ ಡಿಜಿಟಲೀಕರಣಕ್ಕೆ ಒತ್ತು ನೀಡಿರುವ ಪರಿಣಾಮ ಮುಂಬರುವ ವರ್ಷಗಳಲ್ಲಿ ಭಾರೀ ಸಂಖ್ಯೆಗಳಲ್ಲಿ ನುರಿತ ಹಾಗೂ ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳಲಿದೆ. ಕೇವಲ ಉದ್ಯೋಗಿಗಳ ನೇಮಕ ಅಷ್ಟೇ ಅಲ್ಲದೆ ಹೊರ ಗುತ್ತಿಗೆಗಿಂತಲೂ ಒಳಗುತ್ತಿಗೆಗೆ ಆದ್ಯತೆ ನೀಡತೊಡಗಿವೆ ಎಂದು ಕನ್ಸಲ್ಟಿಂಗ್ ತಜ್ಞರು ತಿಳಿಸಿದ್ದಾರೆ.
ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದಾಗಿ ಪಾಠ ಕಲಿತಿರುವ ಕಂಪನಿಗಳು ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ನೀಡುತ್ತಿದ್ದು ಡಿಜಿಟಲೀಕರಣಕ್ಕೆ ಮತ್ತಷ್ಟು ವೇಗ ನೀಡಿದೆ ಎಂದು ಎಎನ್‌ಎಸ್‌ಆರ್ ಕನ್ಸಲ್ಟಿಂಗ್‌ನ ಸಿಇಒ ಲಲಿತ್ ಅಹುಜಾ ತಿಳಿಸಿದ್ದಾರೆ.

ಭಾರತದಲ್ಲಿ 2019ರಲ್ಲಿ ಸುಮಾರು 7 ಲಕ್ಷ ಡಿಜಿಟಲ್ ತಂತ್ರಜ್ಞರು ಇದ್ದರು. ಈ ಸಂಖ್ಯೆಯಲ್ಲಿ ಪ್ರತಿ ವರ್ಷ ಶೇ.30ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳ ಸೇರ್ಪಡೆಯಾಗಿದೆ. ಮುಂದಿನ 3 ವರ್ಷಗಳಲ್ಲಿ ಕನಿಷ್ಠ 150 ರಿಂದ 200 ಹೊಸ ಕಂಪನಿಗಳು ತಮ್ಮ ಗ್ಲೋಬಲ್ ಕಾಪ್ಟಿವ್ ಸೆಂಟರ್‌ಗಳನ್ನು (ಜಿಸಿಸಿ) ತೆರೆಯಲಿವೆ. ಇದರಿಂದ ಹೆಚ್ಚುವರಿ 3 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಲಲಿತ್ ಅಹುಜಾ ತಿಳಿಸಿದ್ದಾರೆ.
ಜೆಪಿ ಮೋರ್ಗಾನ್, ಸಿಟಿ, ಎಚ್‌ಎಸ್‌ಬಿಸಿ, ಆರ್‌ಬಿಎಸ್, ಎಸ್‌ಆ್ಯಂಡ್‌ಪಿ ಇತ್ಯಾದಿ ಜಾಗತಿಕ ಬ್ಯಾಂಕ್‌ಗಳು ಕೂಡ ಭಾರತದಲ್ಲಿ ನೇಮಕಾತಿಯನ್ನು ಹೆಚ್ಚಿಸಿವೆ.
ಆದರೆ ಐಟಿ ಸೇವಾ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್, ಎಚ್‌ಸಿಎಲ್ ಟೆಕ್ ಮತ್ತು ವಿಪ್ರೊಗಳಿಗೆ ಡಿಜಿಟಲೀಕರಣವು ಸ್ವಲ್ಪ ಅಪಾಯವನ್ನುಂಟುಮಾಡುತ್ತದೆ. ಏಕೆಂದರೆ ಹೆಚ್ಚಿನ ಗ್ರಾಹಕರು ಈಗ ಹೊರಗುತ್ತಿಗೆಗಿಂತ ಹೆಚ್ಚಾಗಿ ತಮ್ಮಲ್ಲಿಯೇ (Insource)ಪರಿಹಾರದ ಸಂಪನ್ಮೂಲಗಳನ್ನು ಎದುರು ನೋಡುತ್ತಾರೆ.


Click it and Unblock the Notifications