ಕೊರೊನಾ ಬಿಕ್ಕಟ್ಟಿನಿಂದಾಗಿ ಐದು ತಿಂಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆಗಿರುವ ನಷ್ಟ ಎಷ್ಟು ಗೊತ್ತಾ? 32 ಸಾವಿರ ಕೋಟಿ ಅಮೆರಿಕ ಡಾಲರ್. ಅಂದರೆ ಭಾರತೀಯ ರುಪಾಯಿಗಳಲ್ಲಿ 24 ಲಕ್ಷ ಕೋಟಿ. ಇದರಿಂದ ಹನ್ನೆರಡು ಕೋಟಿ ಉದ್ಯೋಗಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ ಎಂದು ಮಂಗಳವಾರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್ ಹೇಳಿದ್ದಾರೆ.
ನೀತಿ ನಿರೂಪಣೆ ವಿಚಾರವಾಗಿ ವಿಡಿಯೋ ಮೂಲಕ ಮಾತನಾಡಿದ ಅವರು, ಜಾಗತಿಕ ಆರ್ಥಿಕತೆಯಲ್ಲಿ ಮೂರನೇ ಅತಿ ದೊಡ್ಡ ರಫ್ತು ವಲಯ ಪ್ರವಾಸೋದ್ಯಮ. ಮೊದಲ ಎರಡು ಸ್ಥಾನದಲ್ಲಿ ತೈಲ ಹಾಗೂ ರಾಸಾಯನಿಕ ಇವೆ. 2019ರಲ್ಲಿನ ಒಟ್ಟು ಜಾಗತಿಕ ವ್ಯವಹಾರದಲ್ಲಿ ಪ್ರವಾಸೋದ್ಯಮದ ಪಾಲು 7% ಇದೆ ಎಂದಿದ್ದಾರೆ.
ಹತ್ತು ಜನರಲ್ಲಿ ಒಬ್ಬರಿಗೆ ಪ್ರವಾಸೋದ್ಯಮದಿಂದ ಉದ್ಯೋಗ
"ಈ ಭೂಮಿ ಮೇಲೆ ಪ್ರತಿ ಹತ್ತು ಜನರಲ್ಲಿ ಒಬ್ಬರಿಗೆ ಪ್ರವಾಸೋದ್ಯಮವು ಉದ್ಯೋಗ ನೀಡುತ್ತದೆ. ಕೋಟ್ಯಂತರ ಜನರಿಗೆ ಇದರಿಂದ ಜೀವನ ನಡೆಯುತ್ತಿದೆ" ಎಂದಿದ್ದಾರೆ. ಪ್ರವಾಸೋದ್ಯಮದಿಂದ ಆರ್ಥಿಕತೆಗೆ ಉತ್ತೇಜನ ಅಷ್ಟೇ ಅಲ್ಲ. ಜನರನ್ನು ಹತ್ತಿರ ತರುತ್ತದೆ. ಈ ವಿಶ್ವದ ಸಂಸ್ಕೃತಿಗಳನ್ನು ಪರಿಚಯಿಸುತ್ತದೆ. ನಮ್ಮೆಲ್ಲರಲ್ಲಿನ ಸಾಮಾನ್ಯ ಮಾನವೀಯತೆಯನ್ನು ಎತ್ತಿ ತೋರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆಫ್ರಿಕನ್ ರಾಷ್ಟ್ರಗಳು, ಸಣ್ಣ ದ್ವೀಪಗಳಿಗೆ ತುರ್ತು ಸ್ಥಿತಿ
2020ರ ಮೊದಲ ಐದು ತಿಂಗಳಲ್ಲಿ ಕೊರೊನಾ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯ ಪ್ರವಾಸಿಗಳ ಆಗಮನ ಅರ್ಧಕ್ಕಿಂತ ಹೆಚ್ಚು ಕುಸಿದಿದೆ. ಆದಾಯ ಪಾತಾಳ ತಲುಪಿದೆ. ಶ್ರೀಮಂತ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದು ಅತಿ ದೊಡ್ಡ ಹೊಡೆತ. ಇನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ, ಅದರಲ್ಲೂ ಆಫ್ರಿಕನ್ ದೇಶಗಳಿಗೆ ಹಾಗೂ ಸಣ್ಣ ದ್ವೀಪಗಳಿಗೆ ಇದು ತುರ್ತು ಎಂದಿದ್ದಾರೆ.
ಜಾಗತಿಕ ಜಿಡಿಪಿ 1.5% ಕುಸಿತ
ಕೆಲವು ದೇಶಗಳ ಜಿಡಿಪಿಗೆ 20%ಗಿಂತ ಹೆಚ್ಚು ಪ್ರವಾಸೋದ್ಯಮದಿಂದಲೇ ಬರುತ್ತದೆ. ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮದಿಂದ ಬರುವ ಆದಾಯ 2020ರಲ್ಲಿ 910 ಕೋಟಿ ಅಮೆರಿಕನ್ ಡಾಲರ್ ಕುಸಿದು, 1.2 ಲಕ್ಷ ಕೋಟಿ ತಲುಪಬಹುದು ಎನ್ನಲಾಗಿದೆ. ಇನ್ನು ಇದರಿಂದ ಜಾಗತಿಕ ಜಿಡಿಪಿ 1.5% ಕುಸಿದು, 2.8% ತಲುಪಲಿದೆ. ಇದರ ಜತೆಗೆ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರುವ ವಿಶ್ವದಾದ್ಯಂತದ 14.4 ಕೋಟಿ ಉದ್ಯೋಗಿಗಳು ಸಹ ಅಪಾಯಕ್ಕೆ ಸಿಲುಕಿಕೊಂಡಿದ್ದಾರೆ.


Click it and Unblock the Notifications