ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್‌ಮಸ್ ಹಬ್ಬ, ಹೊಸ ವರ್ಷದ ಸಂಭ್ರಮಾಚರಣೆ ಶುರುವಾಗಲಿದೆ. ಈ ಸಂದರ್ಭದಲ್ಲಿ ಬಹುತೇಕರು ಒಂದು ಊರಿಂದ ಮತ್ತೊಂದು ಊರಿಗೆ ಪ್ರಯಾಣ ಬೆಳೆಸುತ್ತಾರೆ. ಅದೇ ಕಾರಣದಿಂದ ಈಗಾಗಲೇ ಭಾರತೀಯ ರೈಲ್ವೇ ಇಲಾಖೆ (Railway Department) ಕೆಲವು ಜಿಲ್ಲೆಗಳಿಗೆ, ಕೆಲವು ರಾಜ್ಯಗಳಿಗೆ ವಿಶೇಷ ರೈಲು ಸೇವೆಯನ್ನು ಘೋಷಣೆ ಮಾಡಿದೆ. ಇದೀಗ ಕರಾವಳಿ ಜನರಿಗೆ ವರ್ಷಾಂತ್ಯದಲ್ಲಿ ಸಿಹಿಸುದ್ದಿ ನೀಡಿದೆ. ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳಿಗೆ (ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶ್ರವಣಬೆಳಗೊಳ) ಹೋಗುವ ಪ್ರಯಾಣಿಕರಿಗೆ ನೈಋತ್ಯ ರೈಲ್ವೇ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ.

ಹೌದು, 6 ತಿಂಗಳ ಹಿಂದಷ್ಟೇ ರದ್ದಾಗಿದ್ದ ಬೆಂಗಳೂರು-ಮಂಗಳೂರು-ಕಾರವಾರ ರೈಲು ಸೇವೆಯನ್ನು ಮತ್ತೆ ಆರಂಭಿಸಲು ರೈಲ್ವೇ ಇಲಾಖೆ ಮುಂದಾಗಿದೆ. ಇದೀಗ ಈ ರೈಲ್ವೇ ಆರಂಭದ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಇದರಿಂದ ಬೆಂಗಳೂರು-ಕರಾವಳಿ ಜಿಲ್ಲೆಗಳಿಗೆ ಹೋಗುವ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಕರಾವಳಿ ಜಿಲ್ಲೆಗೆ ಬಂಪರ್ ಸುದ್ದಿ!
ಇದೀಗ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು (16575/16576) ಮತ್ತೆ ತನ್ನ ಸಂಚಾರ ಆರಂಭಿಸಲು ಸಜ್ಜಾಗಿ ನಿಂತಿದೆ. ನೈಋತ್ಯ ರೈಲ್ವೇ ಇಲಾಖೆ ಈ ಸೂಚನೆಯನ್ನು ಹೊರಡಿಸಿದ್ದು, ಮೊದಲಿನಂತೆಯೇ ಈ ರೈಲು ಬೆಂಗಳೂರು ಯಶವಂತಪುರ ರೈಲ್ವೇ ಸ್ಟೇಷನ್‌ನಿಂದ ಪ್ರಯಾಣ ಆರಂಭಿಸಲಿದೆ ಎನ್ನಲಾಗಿದೆ. ಆದ್ದರಿಂದ ಪ್ರಯಾಣಿಕರು ಈ ರೈಲು ಸೇವೆಯನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು.
6 ತಿಂಗಳ ನಂತರ ಮತ್ತೆ ಆರಂಭ
ಆರು ತಿಂಗಳ ಹಿಂದಷ್ಟೇ ಕೆಲವು ಕಾರಣಾಂತರಗಳಿಂದ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ರದ್ದು ಮಾಡಲಾಗಿತ್ತು. ಆದ್ರೆ ಇದೀಗ ಮತ್ತೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಹಾಸನ, ಸಕಲೇಶಪುರ ಮಾರ್ಗದಲ್ಲಿ ಸದ್ಯ ವಿದ್ಯುದೀಕರಣ ಮತ್ತು ಇತರ ಮಾರ್ಗಗಳ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಈ ರೈಲು ಸೇವೆಯನ್ನು ರದ್ದುಪಡಿಸಲಾಗಿತ್ತು. ಇದೀಗ ಕಾಮಗಾರಿ ಸಂಪೂರ್ಣಗೊಂಡಿದ್ದು, ಮತ್ತೆ ರೈಲು ಸಂಚರಿಸಲಿದೆ ಎಂದು ಹೇಳಲಾಗಿದೆ.
ಪುಣ್ಯ ಕ್ಷೇತ್ರಗಳಿಗೆ ಹೋಗುವವರಿಗೆ ಸಂತಸ!
ಈ ರೈಲು ಭಾನುವಾರ, ಮಂಗಳವಾರ ಮತ್ತು ಗುರುವಾರ ಹೀಗೆ 3 ದಿನ ಸೇವೆ ಸಲ್ಲಿಸುತ್ತದೆ. ಬೆಂಗಳೂರು ಯಶವಂತಪುರದಿಂದ ಈ ರೈಲು ಹೊರಟರೆ ನಂತರ ಚಿಕ್ಕಬಾಣಾವರ, ಹಾಸನ, ಶ್ರವಣಬೆಳಗೊಳ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ-ಪುತ್ತೂರು, ಬಂಟ್ವಾಳ ಮೂಲಕ ಮಂಗಳೂರು ಪ್ರಯಾಣ ಮಾಡುತ್ತದೆ. ಅಲ್ಲದೇ ವಿಶೇಷವಾಗಿ ಶ್ರವಣಬೆಳಗೊಳ, ಹಾಸನ, ಸಕಲೇಶಪುರದಲ್ಲಿ ನಿಲುಗಡೆ ಸಮಯ ಹೆಚ್ಚು. ಆದ್ದರಿಂದ ಗೊಮ್ಮಟೇಶ್ವರ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಪುಣ್ಯ ಕ್ಷೇತ್ರಗಳಿಗೆ ತೆರಳುವವರಿಗೆ ಈ ರೈಲು ಬಹಳಷ್ಟು ಪ್ರಯೋಜನಕಾರಿಯಾಗಿದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಇನ್ನು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಆರಂಭ ಮಾತ್ರ ಅಲ್ಲ, ಟಿಕೆಟ್ ಬುಕಿಂಗ್ ವ್ಯವಸ್ಥೆ ಕೂಡಾ ಆರಂಭವಾಗಲಿದೆ. ಈ ರೈಲಿನ ಕಾರ್ಯಾಚರಣೆ, ಪ್ರಯಾಣ ಸಮಯ, ಹೀಗೆ ಎಲ್ಲವನ್ನೂ ರೈಲ್ವೇ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಮಾಹಿತಿ ಪಡೆಯಬಹುದು. ಅಂತೂ ಕೆಲವು ದಿನಗಳಿಂದ ನಿಂತಿದ್ದ ರೈಲು ಮತ್ತೆ ಪುನಾರಂಭಗೊಂಡಿದೆ. ಕೊನೆಗೂ ಕರಾವಳಿ ಪ್ರಯಾಣಿಕರು ಈ ಮೂಲಕ ಕಡಿಮೆ ಖರ್ಚಿನಲ್ಲಿ, ಆರಾಮದಾಯಕ ಪ್ರಯಾಣ ಮಾಡಬಹುದು.


Click it and Unblock the Notifications