ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳು ಬಿಲ್‌ನಲ್ಲಿ ಸೇವಾ ಶುಲ್ಕವನ್ನು ಸೇರ್ಪಡೆ ಮಾಡುವಂತಿಲ್ಲ ಎಂದು ಕೇಂದ್ರೀಯ ಗ್ರಾಹಕರ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಸೋಮವಾರ ಆದೇಶ ನೀಡಿದೆ. ಹಾಗೆಯೇ ಆದೇಶವನ್ನು ಉಲ್ಲಂಘನೆ ಮಾಡಿದರೆ, ಗ್ರಾಹಕರು ದೂರು ನೀಡುವ ಅವಕಾಶ ಕೂಡಾ ಇದೆ ಎಂದು ಹೇಳಿದೆ. ಈ ಆದೇಶವನ್ನು ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ವಿರೋಧ ಮಾಡಿದೆ.
ಸೇವಾ ಶುಲ್ಕವನ್ನು ವಿಧಿಸುವುದು ಅಕ್ರಮವೇನಲ್ಲ, ಇದು ರೆಸ್ಟೋರೆಂಟ್ ನೀತಿಯ ವಿಚಾರ ಎಂದು ಹೇಳಿರುವ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಇಂತಹ ವಿಚಾರದಲ್ಲಿ ಸರ್ಕಾರವಾಗಲಿ ಅಥವಾ ಯಾವುದೇ ಪ್ರಾಧಿಕಾರ ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸೋಮವಾರ ಕೇಂದ್ರೀಯ ಗ್ರಾಹಕರ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಯಾವುದೇ ರೆಸ್ಟೋರೆಂಟ್‌ಗಳು ಬಿಲ್‌ನಲ್ಲಿ ಅಥವಾ ಬೇರೆ ಮೂಲದಲ್ಲಿ ಸೇವಾ ಶುಲ್ಕವನ್ನು ಪಡೆಯುವಂತಿಲ್ಲ. ಯಾವುದೇ ರೆಸ್ಟೋರೆಂಟ್ ಅಥವಾ ಹೋಟೆಲ್ ಗ್ರಾಹಕರು ಸೇವಾ ಶುಲ್ಕ ಪಾವತಿ ಮಾಡುವಂತೆ ಒತ್ತಾಯ ಮಾಡುವಂತಿಲ್ಲ ಎಂದು ತಿಳಿಸಿದೆ.
ಹಾಗೆಯೇ ಈ ಸಂದರ್ಭದಲ್ಲಿ ಸೇವಾ ಶುಲ್ಕವನ್ನು ನೀಡುವುದು ಗ್ರಾಹಕರಿಗೆ ಬಿಟ್ಟ ವಿಚಾರ. ಗ್ರಾಹಕರು ಹೋಟೆಲ್ ಅಥವಾ ರೆಸ್ಟೋರೆಂಟ್‌ನ ಸೇವೆಯು ಇಷ್ಟವಾದರೆ, ಸೇವಾ ಶುಲ್ಕ ಪಾವತಿ ಮಾಡುವುದಾದರೆ ಮಾತ್ರ ನೀಡಬಹುದು ಎಂದು ಕೂಡಾ ಉಲ್ಲೇಖ ಮಾಡಿದೆ.
ರೆಸ್ಟೋರೆಂಟ್ ಅಸೋಸಿಯೇಷನ್ ಹೇಳುವುದು ಏನು?
"ಮತ್ತೆ ನೀಡಲಾಗಿರುವ ಈ ಮಾರ್ಗಸೂಚಿಯು ರೆಸ್ಟೋರೆಂಟ್ ಉದ್ಯಮದ ವಿರುದ್ಧ ಅಭಿಯಾನ ಸೃಷ್ಟಿ ಮಾಡುವ ಪ್ರಯತ್ನವಾಗಿದೆ. ಇದಕ್ಕೆ ಯಾವುದೇ ಕಾನೂನು ಆಧಾರವಿಲ್ಲ. ಈ ಸಂದರ್ಭದಲ್ಲಿ ನಾವು ಕೆಲವು ಸರ್ಕಾರಿ ಏಜೆನ್ಸಿಗಳು ಮತ್ತು ಇತರೆ ಕೈಗಾರಿಕೆಗಳು ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತದೆ ಎಂಬುವುದನ್ನು ಕೂಡಾ ನೆನಪಿಸುತ್ತೇವೆ. ಆದರೆ ಮಾರ್ಗಸೂಚಿಯನ್ನು ಕೇವಲ ರೆಸ್ಟೋರೆಂಟ್‌ಗಳನ್ನು ಗುರಿಯಾಗಿಸಿಕೊಂಡು ನೀಡಲಾಗುತ್ತಿದೆ," ಎಂದು ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಆರೋಪ ಮಾಡಿದೆ.
ಸೇವಾ ಶುಲ್ಕ ಹೋಟೆಲ್ ಮಾಲೀಕರಿಗೆ ಬಿಟ್ಟ ವಿಚಾರ
"ಸೇವಾ ಶುಲ್ಕ ಎಂಬುವುದು ಹೋಟೆಲ್ ಮಾಲೀಕರಿಗೆ ಬಿಟ್ಟ ವಿಚಾರ. ಒಟ್ಟು ಬೆಲೆಯಲ್ಲಿ ಒಂದು ಅಂಶ ಇದಾಗಿದೆ. ಈ ನಿಟ್ಟಿನಲ್ಲಿ ಹೋಟೆಲ್ ಮಾಲೀಕರು ನಿರ್ಧಾರ ಕೈಗೊಳ್ಳಬಹುದು. ಅದಕ್ಕೆ ಸರ್ಕಾರ ಅಥವಾ ಯಾವುದೇ ಪ್ರಾಧಿಕಾರವು ಮಧ್ಯಪ್ರವೇಶಿಸುವುದಿಲ್ಲ. ಇದು ಸಾರ್ವತ್ರಿಕವಾಗಿ ಒಪ್ಪಲಾಗುವ ವ್ಯಾಪಾರ ಪದ್ಧತಿಯಾಗಿದೆ," ಎಂದು ಕೂಡಾ ರೆಸ್ಟೋರೆಂಟ್ ಅಸೋಸಿಯೇಷನ್ ಪ್ರತಿಪಾದಿಸಿದೆ.
ನ್ಯಾಯಾಂಗ ಸೇವಾ ಶುಲ್ಕವನ್ನು ಎತ್ತಿ ಹಿಡಿದಿದೆ?
ಗ್ರಾಹಕರು ಆರ್ಡರ್ ನೀಡುವ ಮುನ್ನವೇ ಬೆಲೆ, ನಿಯಮ, ಷರತ್ತು ಬಗ್ಗೆ ಅರಿವು ನೀಡಲಾಗಿರುತ್ತದೆ. ಹೀಗಿರುವಾಗ ಸೇವಾ ಶುಲ್ಕ ವಿಚಾರದಲ್ಲಿ ಮಧ್ಯ ಪ್ರವೇಶ ಕಾನೂನು ಬಾಹಿರವಾಗಿದೆ. ಸುಪ್ರೀಂ ಕೋರ್ಟ್, ಹೈಕೋರ್ಟ್, ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಆದಾಯ ತೆರಿಗೆ ಅಧಿಕಾರಿಗಳು (ITAT) ಈ ಸೇವಾ ಶುಲ್ಕವನ್ನು ವಿಧಿಸುವುದನ್ನು ಪರಿಗಣಿಸಿದ್ದಾರೆ. ವಿವಿಧ ನ್ಯಾಯಾಂಗ ಘೋಷಣೆ ಸಂದರ್ಭದಲ್ಲಿ ಸೇವಾ ಶುಲ್ಕವನ್ನು ಎತ್ತಿ ಹಿಡಿಯಲಾಗಿದೆ ಎಂದು ಕೂಡಾ ವಿವರಿಸಲಾಗಿದೆ.


Click it and Unblock the Notifications