ಜನಸಾಮಾನ್ಯರಿಗೆ ದಿನಕ್ಕೊಂದು ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ದಿನಸಿ ಪದಾರ್ಥ, ತರಕಾರಿ, ಹಾಲು, ಮೊಸರು, ಕರೆಂಟ್ ಬಿಲ್ ಏರಿಕೆಯಾಯಿತು. ಈಗ ಪಿಜಿ ಹಾಗೂ ಹಾಸ್ಟೆಲ್ ಬಾಡಿಗೆ ಬೆಲೆ ಏರಿಕೆಯಾಗಲಿದ್ದು, ವಿದ್ಯಾರ್ಥಿಗಳು ಅಥವಾ ಬ್ಯಾಚುಲರ್ ಗಳು ಸೇರಿದಂತೆ ಪಿಜಿ (Paying Guest) ನಂಬಿದವರ ಜೇಬಿಗೆ ಕನ್ನ ಹಾಕಲಿದೆ.
ಈ ಬಗ್ಗೆ ಖುದ್ದು ಪಿಜಿ ಮಾಲೀಕರ ಅಸೋಸಿಯೇಶನ್ ಅಧ್ಯಕ್ಷ ಶಾಕಿಂಗ್ ಮಾಹಿತಿ ಕೊಟ್ಟಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರೋ ಜನತೆಗೆ ಮತ್ತೊಂದು ಶಾಕ್ ಕಾದಿದೆ. ಇನ್ಮುಂದೆ, ಪಿಜಿ ಹಾಗೂ ಹಾಸ್ಟೆಲ್ ಗಳಲ್ಲಿ ವಾಸಿಸುವವರು ಸಹ ಜಿಎಸ್‌ಟಿ ಕಟ್ಟಬೇಕು. ಈ ಬಗ್ಗೆ ಕೆಲವು ದಿನಗಳ ಹಿಂದೆಯೇ ಸುದ್ದಿಯಾಗಿತ್ತು, ಈಗ ಅದು ಅಧಿಕೃತವಾಗಿದೆ.

ಇದು ವಿದ್ಯಾರ್ಥಿಗಳು ಹಾಗೂ ಬ್ಯಾಚುಲರ್ ಗಳಿಗೆ, ಒಬ್ಬಂಟಿ ಉದ್ಯೋಗಿಗಳಿಗೆ ಹೊರೆಯಾಗಲಿದೆ. ದಿನದ ಬಾಡಿಗೆ 1,000 ರೂಕ್ಕಿಂತ ಕಡಿಮೆಯಿದ್ದರೆ ಶೇಕಡಾ 12% ಜಿಎಸ್‌ಟಿ ಹಾಗೂ ಸಾವಿರಕ್ಕಿಂತ ಹೆಚ್ಚಿದ್ದರೆ ಶೇಕಡಾ 18% ಜಿಎಸ್‌ಟಿ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜೊತೆಗೆ ಬೆಂಗಳೂರಿನ ಜಿಎಸ್‌ಟಿ ಅಡ್ವಾನ್ಸ್ ರೂಲಿಂಗ್ ಪೀಠ ಈ ಬಗ್ಗೆ ಆದೇಶ ನೀಡಿದೆ.
ಇನ್ನೂ ಈ ಜಿಎಸ್ ಟಿ ವಿಧಿಸುವ ನಿರ್ಧಾರದಿಂದಾಗಿ, ಬೆಂಗಳೂರಲ್ಲಿ ಪಿಜಿಗಳ ದರ ಏರಿಕೆ ಅನಿವಾರ್ಯವೆಂದು ಬೆಂಗಳೂರು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಹೇಳಿದೆ. ಜಿಎಸ್‌ಟಿಯನ್ನು ವಿದ್ಯಾರ್ಥಿಗಳಿಂದ ಪಡೆಯಲಾಗುವುದು ಎಂದು ಮಾಲೀಕರ ಸಂಘ ಸ್ಪಷ್ಟನೆಯನ್ನು ನೀಡಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಬ್ಯಾಚುಲರ್ ಗಳಿಗೆ, ಒಬ್ಬಂಟಿ ಉದ್ಯೋಗಿಗಳಿಗೆ ಸಾಕಷ್ಟು ಹೊಡೆತ ಬೀಳಲಿದೆ.
ಈಗಾಗಲೇ ಬೆಂಗಳೂರಲ್ಲಿ ಪಿಜಿ ಹಾಗೂ ಹಾಸ್ಟೆಲ್ ಗಳ ಬಾಡಿಗೆ ಸಾಕಷ್ಟು ಹೆಚ್ಚಿದೆ. ಈ ಜಿಎಸ್‌ಟಿ ಏರಿಕೆ ನಿರ್ಧಾರ ವಿದ್ಯಾರ್ಥಿಗಳಿಗೆ ಕುಟುಂಬದಿಂದ ಬರೋ ಪಾಕೆಟ್ ಮನಿ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಬೆಂಗಳೂರಲ್ಲಿ ಪಿಜಿ ರೇಟ್ ಕೂಡ ಜಾಸ್ತಿ ಆಗಲಿದ್ದು ಬ್ಯಾಚುಲರ್ಸ್ ಗೆ ಹೊರೆ ಆಗುವುದಂತೂ ಖಂಡಿತ.
"ಪಿಜಿಗಳ ಮೇಲೆ ಜಿಎಸ್‌ಟಿ ವಿಧಿಸುವ ನಿರ್ಧಾರ ಅನ್ಯಾಯ, ಏಕೆಂದರೆ ಬಾಡಿಗೆ ಹೆಚ್ಚಾಗುವುದರಿಂದ ಇದರ ಪರಿಣಾಮ ನಗರದಲ್ಲಿ ವಾಸಿಸುವ ವಿದ್ಯಾರ್ಥಿಗಳು ಮತ್ತು ಇತರ ವಲಸಿಗರ ಮೇಲೆ ಬೀಳುತ್ತದೆ. 12 ಪರ್ಸೆಂಟ್ ಜಿಎಸ್‌ಟಿ ಅಂದು ಕೊಂಡರೂ ಅದು ತಿಂಗಳಿಗೆ 1,000 ರೂಪಾಯಿಯಷ್ಟು ಹೆಚ್ಚಾಗುತ್ತದೆ" ಎಂದು ಪಿಜಿ ಮಾಲೀಕರ ಸಂಘದ ಅಧ್ಯಕ್ಷ ಸಂಪತ್ ಅಲ್ತೂರು ಹೇಳಿದ್ದಾರೆ.


Click it and Unblock the Notifications