ನೀವು ಧಾರಾವಾಹಿಗಳನ್ನು ನೋಡುತ್ತೀರಾ? ಅಥವಾ ರಿಯಾಲಿಟಿ ಶೋಗಳನ್ನು ಹೆಚ್ಚಿಗೆ ನೋಡ್ತೀರಾ? ಸಿನಿಮಾ ಹೆಚ್ಚಿಗೆ ನೋಡ್ತೀವಿ, ಧಾರಾವಾಹಿ ಅಥವಾ ರಿಯಾಲಿಟಿ ಷೋ ನೋಡುವುದು ಕಡಿಮೆ ಅಂತೀರಾ? ಅಂದಹಾಗೆ ಹೀಗೆ ಯಾವ ಕ್ಯಾಟಗರಿಯಲ್ಲಿ ನೀವಿದ್ದರೂ ದುಡ್ಡು ಕೊಡುವುದಲ್ಲದೆ ಮತ್ಯಾರಿಗೋ ದುಡ್ಡು ಸಹ ಮಾಡಿಕೊಡುತ್ತಿದ್ದೀರಿ ಅಂತಲೇ ಅರ್ಥ.
ಇದ್ಯಾಕೋ ಅರ್ಥವಾಗುತ್ತಿಲ್ಲ. ನಾವು ಧಾರಾವಾಹಿ, ರಿಯಾಲಿಟಿ ಶೋ ಅಥವಾ ಸಿನಿಮಾ ನೋಡುವುದು ಮನರಂಜನೆಗೆ ಮಾತ್ರ. ಅದಕ್ಕೋಸ್ಕರ ದುಡ್ಡು ಕೊಡ್ತೀವಿ. ಅದನ್ನೂ ಪುಗಸಟ್ಟೆ ಯಾರಾದರೂ ಕೊಡುತ್ತಾರಾ ಅನ್ನೋದು ನಿಮ್ಮ ಪ್ರಶ್ನೆಯಾದರೆ, ಈ ಲೇಖನದ ಕೊನೆಗೆ ನಿಮ್ಮ ಪ್ರಶ್ನೆಗೆ ಉತ್ತರ ದೊರೆಯುತ್ತದೆ.
ಲೊಕೇಷನ್, ಒಡವೆ, ಸೀರೆ ಎಲ್ಲವೂ ಪೂರ್ವ ನಿರ್ಧಾರಿತ
ಧಾರಾವಾಹಿಗಳಲ್ಲಿ ಕಥೆ, ಪಾತ್ರಗಳನ್ನು ಆಯ್ಕೆ ಮಾಡುತ್ತಾರಲ್ಲಾ ಆ ಪೈಕಿ ಬಹುತೇಕ ಪಾತ್ರ, ಲೊಕೇಷನ್, ಉಡುವ ಬಟ್ಟೆ, ತೊಡುವ ಒಡವೆ, ಮಾತನಾಡುವ ಫೋನ್, ಓಡಾಡುವ ಕಾರು ಹೀಗೆ ಪ್ರತಿಯೊಂದನ್ನೂ ಮಧ್ಯಮ ವರ್ಗ ಮತ್ತು ಮೇಲ್ಪಟ್ಟ ವರ್ಗವನ್ನು ಗಮನದಲ್ಲಿ ಇಟ್ಟುಕೊಂಡೇ ಸೃಷ್ಟಿಯಾಗುತ್ತವೆ. ಕೆಳ ಮಧ್ಯಮ ವರ್ಗದ ಪಾತ್ರಕ್ಕೆ ಕಷ್ಟಗಳನ್ನು ನೀಡಲಾಗುತ್ತದೆ. ಮೇಲ್ಮಧ್ಯಮ, ಮಧ್ಯಮ ವರ್ಗದ ಪಾತ್ರಗಳಲ್ಲಿ ಒಳ್ಳೆ ಹಾಗೂ ಅತಿ ಕೆಟ್ಟ ಸ್ವಭಾವದ ಪಾತ್ರಗಳನ್ನು ರೂಪಿಸಲಾಗುತ್ತದೆ. ಈ ಪಾತ್ರಗಳು ಧರಿಸುವ ಒಡವೆ, ಬಟ್ಟೆ ಮತ್ತು ಮಾಡಿಕೊಳ್ಳುವ ಮೇಕಪ್ ಅನ್ನು ಹೆಚ್ಚು ಕಾಳಜಿ ವಹಿಸಿ ನಿರ್ಧರಿಸಲಾಗುತ್ತದೆ. ಯಾಕಾಗಿ ಹೀಗೆ ಮಾಡಲಾಗುತ್ತದೆ ಅಂದರೆ, ಧಾರಾವಾಹಿಗಳನ್ನು ನೋಡುವವರು ಕೆಳ ಮಧ್ಯಮ, ಮಧ್ಯಮವರ್ಗದವರೇ ಹೆಚ್ಚು ಎಂಬುದು ಮನರಂಜನೆ ಲೋಕದ ನಂಬಿಕೆ. ಆ ಕಾರಣಕ್ಕೆ ಕೆಳ ಮಧ್ಯಮ ವರ್ಗದ ಪಾತ್ರಗಳಲ್ಲಿ ನಾಯಕಿಯನ್ನು ಬಿಂಬಿಸಿ, ಅತಿ ಹೆಚ್ಚು ಕಷ್ಟ ನೀಡಿದಷ್ಟೂ ಆ ವರ್ಗದವರು ಧಾರಾವಾಹಿಯನ್ನು ಹೆಚ್ಚು ವೀಕ್ಷಿಸುತ್ತಾರೆ.
ಶ್ರೀಮಂತರ ಕಷ್ಟಗಳನ್ನು, ಬಡವರ ಏಳ್ಗೆಯನ್ನು ಎಂಜಾಯ್ ಮಾಡುತ್ತಾರೆ
ಆ ಪಾತ್ರಗಳನ್ನು ದ್ವೇಷಿಸುವುದೇ ಆದರೂ ಧರಿಸುವ ದಿರಿಸು, ಒಡವೆ, ಮನೆ, ಇಂಟಿರೀಯರ್ ಡೆಕೊರೇಷನ್ ಇತ್ಯಾದಿ ಕಾರಣಗಳಿಗಾಗಿ ಖಂಡಿತಾ ನೋಡುತ್ತಾರೆ. ಆಗ ಸೂಪರ್ ಹಿಟ್ ಆಗುವ ಸಾಧ್ಯತೆ ಇರುತ್ತದೆ. ಆ ಕಾರಣಕ್ಕಾಗಿಯೇ ಈ ಧಾರಾವಾಹಿಯ ಪಾತ್ರಗಳು ಗಂಡಿರಲಿ, ಹೆಣ್ಣಿರಲಿ ಬೆಳ್ಳಂಬೆಳಗ್ಗೆ ಹಾಸಿಗೆ ಬಿಟ್ಟು ಏಳುವಾಗಲೂ ಎಂಥ ಡಿಸೈನರ್ ಬಟ್ಟೆ ಧರಿಸಿರುತ್ತವೆ ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ಅಂಶ. ಲಿಪ್ ಸ್ಟಿಕ್, ಒಡವೆ, ಹೊಸ ಡಿಸೈನ್ ನ ಬಟ್ಟೆಗಳು ಇವಿಲ್ಲದೆ ಅಡುಗೆ ಮನೆಯಲ್ಲಿ ಕೆಲಸ ಮಾಡುವ ದೃಶ್ಯಗಳು ಸಹ ಇರುವುದಿಲ್ಲ. ಯಾವುದೇ ಧಾರಾವಾಹಿಯ ಮುಖ್ಯ ಪಾತ್ರ ಅಂದರೆ ನಾಯಕ- ನಾಯಕಿ ಇತ್ಯಾದಿ ಪಾತ್ರಗಳನ್ನು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಾಗಿಯೇ ತೋರಿಸಿ, ಆ ನಂತರ ಶ್ರೀಮಂತಿಕೆ ಬರುವಂತೆ ಮಾಡಬೇಕು. ಜತೆಗೆ ಶ್ರೀಮಂತಿಕೆ ಇರುವಂಥ ಪಾತ್ರಗಳು ಯಾವುದಾದರೂ ಕಾಯಿಲೆಯಿಂದ ನರಳಬೇಕು ಅಥವಾ ತಪ್ಪಿನ ಸುಳಿಗೆ ಸಿಲುಕಿ ಪಶ್ಚಾತಾಪ ಪಡುತ್ತಲೇ ಇರಬೇಕು. ಅಂಥ ಪಾತ್ರಗಳನ್ನು ಸೃಷ್ಟಿಸಿದರೆ ಶ್ರೀಮಂತರ ಕಷ್ಟಗಳನ್ನು ಹಾಗೂ ಬಡ ವರ್ಗದವರ ಏಳ್ಗೆಯನ್ನು ಎಂಜಾಯ್ ಮಾಡುತ್ತಾರೆ ನೋಡುಗರು ಎಂಬುದು ಮತ್ತೊಂದು ಯಶಸ್ವಿ ಸೂತ್ರ.
ರಿಯಾಲಿಟಿ ಶೋಗಳಲ್ಲಿ ಕೆಳ ಮಧ್ಯಮ ವರ್ಗದವರೇ ಟಾರ್ಗೆಟ್
ಇನ್ನು ರಿಯಾಲಿಟಿ ಶೋಗಳಲ್ಲಿ ಕೆಳ ಮಧ್ಯಮ ವರ್ಗದವರೇ ಟಾರ್ಗೆಟ್. ಅತಿ ಬಡತನ, ಕಷ್ಟ ಇವುಗಳನ್ನು ಹೈಲೈಟ್ ಮಾಡಿದಷ್ಟೂ ಆ ವರ್ಗವನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ತಮ್ಮನ್ನು ತಾವೇ ಅಂದುಕೊಂಡು, ಕೆಲವು ನಿರ್ದಿಷ್ಟ ಸ್ಪರ್ಧಿಗಳ ಜತೆಗೆ ನೋಡುಗರು ಕನೆಕ್ಟ್ ಆಗುತ್ತಾರೆ. ಕೌಟುಂಬಿಕ ಹಿನ್ನೆಲೆ, ಎಷ್ಟೆಲ್ಲ ಕಷ್ಟಗಳು, ಶ್ರಮ ಇತ್ಯಾದಿ ಇತ್ಯಾದಿ ಅಂಶಗಳಿಗೆ ರಿಯಾಲಿಟಿ ಶೋಗಳಲ್ಲಿ ಆ ಪರಿಯ ಪ್ರಾಮುಖ್ಯ ನೀಡಲಾಗುತ್ತದೆ. ಈಚೆಗೆ ಹಾಡೊಂದರ ರಿಯಾಲಿಟಿ ಶೋನಲ್ಲಿ ಎರಡನೇ ಬಹುಮಾನ ಪಡೆದ ವ್ಯಕ್ತಿಯೊಬ್ಬರ ಬಗ್ಗೆ ಟೀವಿಗಳಲ್ಲಿ ನಿರಂತರವಾಗಿ ಏನಾದರೊಂದು ವಿಷಯಕ್ಕೆ ಕಾರ್ಯಕ್ರಮ ಬರುತ್ತಲೇ ಇದೆ. ಗೆದ್ದವರಿಗಿಂತ ಆತನದೇ ಸುದ್ದಿ. ಆತ ಕೂತರೂ ಸುದ್ದಿ, ನಿಂತರೂ ಸುದ್ದಿ. ಏಕೆಂದರೆ ಆತನ ಬಡತನ ಟೀವಿ ಚಾನೆಲ್ ಗಳ ಪಾಲಿಗೆ ಟಿಆರ್ ಪಿ. ಮಕ್ಕಳ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲೂ ಅಂಥದ್ದೇ ಸೈಕಾಲಜಿ ಇದೆ. ಅದೇನೆಂದರೆ, ಸ್ಪರ್ಧೆಗಳಲ್ಲಿ ಭಾಗಿಯಾಗುವ ಮಕ್ಕಳಲ್ಲಿ ತಮ್ಮ ಮಕ್ಕಳ ಪ್ರತಿಭೆಯನ್ನು ಹುಡುಕುವ ಪೋಷಕರು ಹೆಚ್ಚು. ಜತೆಗೆ ಅದೇ ರೀತಿಯ ಅಭಿನಯ, ಹಾಡು, ಬಟ್ಟೆ ಹಾಕಿಕೊಂಡು ಮಕ್ಕಳು ಕಾಣಿಸಿಕೊಂಡು ಬಿಟ್ಟರೆ ಅದೇ ಖುಷಿ. ಈ ಹಿಂದಿನ ಬಿಗ್ ಬಾಸ್ ಕನ್ನಡ ಸೀಸನ್ ನಲ್ಲಿ ಸ್ಪರ್ಧಿಯೊಬ್ಬರ ರೀತಿಯೇ ದಿರಿಸು ಧರಿಸಿ, ಹೇರ್ ಸ್ಟ್ರೈಲ್ ಮಾಡಿ, ಹೆಣ್ಣುಮಗುವೊಂದು ಸುದ್ದಿ ಆಗಿದ್ದು ನಿಮಗೆ ನೆನಪಿರಬಹುದು.
ನೋಡುಗರ ಆಲೋಚನೆಯನ್ನು ನಿಯಂತ್ರಿಸುತ್ತವೆ
ಒಂದು ವಿಷಯ ಗೊತ್ತಿರಲಿ: ಮನರಂಜನೆ ಅಂದುಕೊಂಡು ಯಾವುದೆಲ್ಲ ನೀವು ಅಂದುಕೊಂಡಿರುತ್ತೀರೋ ಅವೆಲ್ಲವೂ ಜಾಹೀರಾತಿಗಾಗಿ ರೂಪುಗೊಂಡಿರುತ್ತವೆ. ಆ ಧಾರಾವಾಹಿ, ರಿಯಾಲಿಟಿ ಶೋಗಳನ್ನು ನೋಡುವ ಅಷ್ಟೂ ಸಮಯ ನೋಡುಗರ ನಿರ್ಧಾರ, ಆಲೋಚನೆ ಹಾಗೂ ಬುದ್ಧಿಮತ್ತೆಯನ್ನು ಆ ಚಾನೆಲ್ ನಿರ್ಧರಿಸುತ್ತಾ ಇರುತ್ತದೆ. ಯಾವ ಟೀವಿ, ವಾಟರ್ ಪ್ಯೂರಿಫೈಯರ್, ಕುಕ್ಕರ್, ಸೀರೆ, ಚಪ್ಪಲಿ, ಒಡವೆ ಅಂಗಡಿ, ಕಾರು, ಫೋನ್, ವಾಚ್, ಕೂಲ್ ಡ್ರಿಂಕ್ಸ್... ಹೀಗೆ ನೋಡುಗರಿಗೆ ಖರೀದಿಯನ್ನು ಪ್ರಚೋದಿಸುವಂಥ ಕೆಲಸ ಮಾಡುತ್ತವೆ. ಮನರಂಜನೆಗೆ ಮಾತ್ರ ನಾನು ನೋಡುತ್ತಿದ್ದೇನೆ ಎಂಬ ಭಾವನೆ ವೀಕ್ಷಕರಲ್ಲಿ ಇರುತ್ತದೆ. ಆದರೆ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡೇ ವೀಕ್ಷಕರನ್ನು ಖರೀದಿದಾರರನ್ನಾಗಿ ಮಾಡುವ ಈ ಲೆಕ್ಕಾಚಾರ ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ, ಕನಿಷ್ಠ ಪಕ್ಷ ಮಾರುಕಟ್ಟೆಯ ಲೆಕ್ಕಾಚಾರಗಳಾದರೂ ಗೊತ್ತಿರುತ್ತದೆ.


Click it and Unblock the Notifications