ಕೊರೊನಾ ವೈರಾಣು ಆತಂಕದಿಂದಲೇ ಹಲವಾರು ಕಂಪೆನಿಗಳು ವರ್ಕ್ ಫ್ರಮ್ ಹೋಮ್ ಮಾಡುವಂತೆ ಉದ್ಯೋಗಿಗಳಿಗೆ ಸೂಚನೆ ನೀಡಿದೆ. ಆದರೆ ಇಂಥದ್ದೊಂದು ಅನಿವಾರ್ಯ ಸೃಷ್ಟಿ ಆಗಬಹುದು ಎಂಬ ಅಂದಾಜು ಇಲ್ಲದ ಕಾರಣಕ್ಕೆ ಕೆಲವು ಉದ್ಯೋಗಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಏನು ಆ ಸಮಸ್ಯೆಗಳು ಎಂಬುದರ ಸಣ್ಣ ಝಲಕ್ ಇಲ್ಲಿದೆ.
* ಕೆಲವು ಕಂಪೆನಿಗಳವರು ಉದ್ಯೋಗಿಗಳಿಗೆ ತಕ್ಷಣಕ್ಕೆ ಲ್ಯಾಪ್ ಟಾಪ್ ಒದಗಿಸಲು ಸಾಧ್ಯವಾಗದೆ ಡೆಸ್ಕ್ ಟಾಪ್ ನೀಡಿದ್ದು, ಪಿ.ಜಿ. (ಪೇಯಿಂಗ್ ಗೆಸ್ಟ್)ಗಳಲ್ಲಿ ವಾಸ್ತವ್ಯ ಹೂಡಿರುವವರಿಗೆ ಪೀಕಲಾಟಕ್ಕೆ ಸಿಲುಕಿಕೊಂಡಿದೆ. ಪಿ.ಜಿ.ಗಳಲ್ಲಿ ಮಲಗಲು ಮಂಚದ ವ್ಯವಸ್ಥೆ ಇರುತ್ತದೆಯೇ ವಿನಾ ಅಲ್ಲಿ ಟೇಬಲ್ ಹಾಕಿ ಡೆಸ್ಕ್ ಟಾಪ್ ಇಡುವುದು ಅಸಾಧ್ಯದ ಮಾತು. ಹಾಗಂತ ಒಂದೆರಡು ದಿನಕ್ಕೆ ಅಂತ ಕೆಲಸಕ್ಕೆ ರಜಾ ಹಾಕುವಂತೆಯೂ ಇಲ್ಲ. ಏಕೆಂದರೆ ಇದು ಎಷ್ಟು ಸಮಯ ಹೀಗೇ ಮುಂದುವರಿಯಬಹುದು ಎಂಬ ಅಂದಾಜು ಯಾರಿಗೂ ಇಲ್ಲ. ಲ್ಯಾಪ್ ಟಾಪ್ ನಾದರೂ ಒದಗಿಸಿದ್ದರೆ ಕೆಲಸ ಮಾಡಬಹುದಿತ್ತು ಎಂಬುದು ಅವರ ಅಳಲು.

* ಇನ್ನು ಬೆಂಗಳೂರಿನಂಥ ನಗರಗಳಲ್ಲಿ ಹಲವೆಡೆ ಹಾಟ್ ಸ್ಪಾಟ್ ಕೆಲಸ ಮಾಡುವುದೇ ಇಲ್ಲ. ಇಂಟರ್ ನೆಟ್ ಸಂಪರ್ಕ ಇಲ್ಲದೆ ಕೆಲಸ ಮಾಡುವುದಾದರೂ ಹೇಗೆ? ಬ್ರ್ಯಾಡ್ ಬ್ಯಾಂಡ್ ಕೆಲಸ ಮಾಡುತ್ತದೆ. ಆದರೆ ಎಷ್ಟು ದಿನಗಳ ಕಾಲ ವರ್ಕ್ ಫ್ರಮ್ ಅನ್ನೋದು ಗೊತ್ತಿಲ್ಲ. ತಾತ್ಕಾಲಿಕ ಅಗತ್ಯಕ್ಕೆ ಶಾಶ್ವತವಾದ ಖರ್ಚು ಅಂಟಿಹಾಕಿಕೊಂಡಂತೆ ಆಗುತ್ತದೆ ಎಂಬುದು ಮತ್ತೊಂದು ಸಮಸ್ಯೆ.
* ಮನೆಯಲ್ಲಿ ಮಕ್ಕಳಿಗೆ ಶಾಲೆಗೆ ರಜಾ ಇದೆ. ಅವರನ್ನು ಹೊರಗೆ ಆಟ ಆಡುವುದಕ್ಕೆ ಕಳುಹಿಸುವುದು ಕೂಡ ಸಮಸ್ಯೆ. ಟೀವಿ ಹಾಕಿಕೊಳ್ಳುತ್ತಾರೆ. ನನಗೆ ಆಗಾಗ ಆಫೀಸಿನಿಂದ ಕಾಲ್ ಬಂದು, ಏನಾದರೂ ವಿಚಾರಿಸುತ್ತಾ ಇರುತ್ತಾರೆ. ನಾನು ಮನೆಯಲ್ಲಿ ಇರುವುದು ಮಕ್ಕಳಿಗೆ ಖುಷಿಯ ವಿಚಾರವಾಗಿ, ಆಟ ಆಡೋಣ ಬಾ ಅಂತ ಬಹಳ ಹಿಂಸಿಸುತ್ತಾರೆ. ಏಕಾಗ್ರತೆಯೇ ಕಷ್ಟವಾಗಿದೆ ಎಂಬುದು ಇನ್ನೊಂದು ಬಗೆಯ ಅಹವಾಲು.
* ಮನೆಯಲ್ಲಿ ವಯಸ್ಸಾದವರು ಇದ್ದವರಿಗೆ, ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡವರಿಗೆ, ಪಿ.ಜಿ.ಗಳು- ಸ್ನೇಹಿತರ ಜತೆಗೆ ರೂಮ್ ಶೇರಿಂಗ್ ಮಾಡಿಕೊಂಡವರಿಗೆ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಸಂಕಟಗಳಿವೆ.
* ಇನ್ನೂ ಕೆಲವರಿಗೆ ಕಂಪೆನಿಗಳಲ್ಲಿ ವರ್ಕ್ ಫ್ರಮ್ ಹೋಮ್ ಎಂಬುದನ್ನು ಈಗ ಪೈಲಟ್ ಸ್ಕೀಮ್ ಥರ ಮಾಡಿ, ಆ ನಂತರ ಅದನ್ನೇ ಶಾಶ್ವತವಾಗಿ ಮಾಡಿಬಿಟ್ಟರೆ ಹೇಗೆ? ಇದರಿಂದ ಕಂಪೆನಿಗಳಿಗೆ ವೆಚ್ಚ ಉಳಿತಾಯವಾಗುತ್ತದೆ. ಆದರೆ ನಮಗೆ ಬಹಳ ಸಮಸ್ಯೆಗಳು ಕಾಡುತ್ತವೆ ಎಂಬ ಚಿಂತೆ.


Click it and Unblock the Notifications