ಪೂರ್ತಿ ಹವಾನಿಯಂತ್ರಿತ ಪ್ರಯಾಣಿಕರ ರೈಲುಗಳ ಸಂಚಾರವನ್ನು ಮೇ 12, 2020ರ ಮಂಗಳವಾರದಿಂದ ಭಾರತೀಯ ರೈಲ್ವೆ ಮತ್ತೆ ಆರಂಭಿಸಲಿದೆ. 167 ವರ್ಷಗಳ ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೂವರೆ ತಿಂಗಳಷ್ಟು ಸಮಯ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆರಂಭದಲ್ಲಿ ಹದಿನೈದು ಜೋಡಿ ರೈಲುಗಳು ಕಾರ್ಯಾರಂಭ ಮಾಡಲಿವೆ.
ಈ ರೈಲುಗಳಿಗೆ ಆನ್ ಲೈನ್ ಬುಕ್ಕಿಂಗ್ ಅನ್ನು ಸೋಮವಾರ (ಮೇ 11, 2020), ಸಂಜೆ 4 ಗಂಟೆಗೆ ಆರಂಭ ಮಾಡಲಾಗುವುದು. ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (IRCTC) ವೆಬ್ ಸೈಟ್ ನಲ್ಲಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಮಾಡಬಹುದು ಎಂದು ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಟಿಕೆಟ್ ಖಾತ್ರಿ ಆದವರಿಗೆ ಮಾತ್ರ ನಿಲ್ದಾಣ ಪ್ರವೇಶ
ಈ ವಿಶೇಷ ರೈಲುಗಳು ನವದೆಹಲಿಯ ಮೂಲಕ ಚಲಿಸುತ್ತದೆ. ದಿಬ್ರುಘರ್, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ ಪುರ್, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ರಾಂಚಿ, ತಿರುವನಂತಪುರಂ, ಮಡ್ ಗಾಂವ್, ಮುಂಬೈ ಸೆಂಟ್ರಲ್, ಅಹ್ಮದಾಬಾದ್, ಜಮ್ಮುವಿನ ತಾವಿಗೆ ತೆರಳಿ, ವಾಪಸಾಗುತ್ತದೆ. ಪ್ರಯಾಣದರವು ರಾಜಧಾನಿ ರೈಲುಗಳಿಗೆ ಸಮನಾಗಿರುತ್ತದೆ. ಆದರೆ ನೆನಪಿರಲಿ, ರೈಲು ನಿಲ್ದಾಣಗಳಲ್ಲಿ ಟಿಕೆಟ್ ಕೌಂಟರ್ ಗಳು (ಪ್ಲಾಟ್ ಫಾರ್ಮ್ ಟಿಕೆಟ್ ಒಳಗೊಂಡಂತೆ) ಮುಚ್ಚಿರುತ್ತವೆ. ಯಾರಿಗೆ ಟಿಕೆಟ್ ಖಾತ್ರಿ ಆಗಿರುತ್ತದೋ ಅಂಥವರನ್ನು ಮಾತ್ರ ನಿಲ್ದಾಣದ ಒಳಗೆ ಪ್ರವೇಶಿಸಲು ಬಿಡಲಾಗುತ್ತದೆ. ಮುಖವನ್ನು ಮರೆ ಮಾಡಿಕೊಂಡಿರುವುದು ಹಾಗೂ ನಿಲ್ದಾಣದಿಂದ ತೆರಳುವ ಮುನ್ನ ಸ್ಕ್ರೀನಿಂಗ್ ಕಡ್ಡಾಯ ಎಂದು ತಿಳಿಸಲಾಗಿದ್ದು, ಯಾರಿಗೂ ಕೊರೊನಾ ಸೋಂಕಿನ ಯಾವ ಲಕ್ಷಣವೂ ಇರುವುದಿಲ್ಲವೋ ಅಂಥವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.
ಮೇ 11ರಿಂದ ಐಆರ್ ಸಿಟಿಸಿಯಿಂದ ಟಿಕೆಟ್ ಬುಕ್ಕಿಂಗ್
ಮಾರ್ಚ್ 22, 2020ರಿಂದ ಪ್ರಯಾಣಿಕರ ರೈಲು ಸೇವೆ ನಿಲ್ಲಿಸಲಾಗಿತ್ತು. ಮೇ 1ನೇ ತಾರೀಕಿನಂದು ವಲಸೆ ಕಾರ್ಮಿಕರ ಪ್ರಯಾಣಕ್ಕಾಗಿ ಶ್ರಮಿಕ್ ಸ್ಪೆಷನ್ ರೈಲು ಸಂಚಾರ ಆರಂಭಿಸಲಾಗಿತ್ತು. ಮೇ 11ರಿಂದ ಪ್ರಯಾಣಿಕರ ರೈಲಿಗಾಗಿ ಐಆರ್ ಸಿಟಿಸಿಯಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ. ಶುರುವಿನಲ್ಲಿ ಹದಿನೈದು ಜೋಡಿ ಏಸಿ ರೈಲುಗಳು ಕಾರ್ಯ ನಿರ್ವಹಣೆ ಆರಂಭಿಸಲಿವೆ. ಈ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಆರೋಗ್ಯ ಸೇತು ಅಪ್ಲಿಕೇಷನ್ ಅನ್ನು ಕಡ್ಡಾಯ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ತತ್ಕಾಲ್/ ಪ್ರೀಮಿಯಂ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಇರುವುದಿಲ್ಲ. ಪ್ರಯಾಣಿಕರ ರೈಲು ಸೇವೆಗಳ ಸಂಚಾರ ನಿಲ್ಲಿಸಿದ್ದರಿಂದ ನಿತ್ಯವೂ 9000 ಪ್ರಯಾಣಿಕರ ರೈಲು ಹಾಗೂ 3500 ಮೇಲ್/ಎಕ್ಸ್ ಪ್ರೆಸ್ ರೈಲುಗಳ ಸಂಚಾರ ನಿತ್ಯವೂ ಆಗುತ್ತಿದ್ದದ್ದು ನಿಂತಿತ್ತು. ಆದರೆ ಸರಕು ಸಾಗಾಟ ಸೇವೆಯನ್ನು ರೈಲ್ವೆ ಮುಂದುವರಿಸಿತ್ತು.
ದಿನಕ್ಕೆ 300 ಶ್ರಮಿಕ್ ಸ್ಪೆಷಲ್ ರೈಲುಗಳ ಕಾರ್ಯಾಚರಣೆ
ನಿಧಾನವಾಗಿ ರೈಲ್ವೆಯಿಂದ ಮಾರ್ಗಗಳು ಸೇರ್ಪಡೆ ಆಗಲಿವೆ. ಸದ್ಯಕ್ಕೆ ಇಪ್ಪತ್ತು ಸಾವಿರ ಬೋಗಿಗಳನ್ನು ಕೊರೊನಾ ಕೇರ್ ಸೆಂಟರ್ ಗಳಾಗಿ ಬದಲಾಯಿಸಲಾಗಿದೆ. ಇನ್ನು ಸ್ಪೆಷಲ್ ರೈಲುಗಳಲ್ಲಿ ಏಸಿ ಮತ್ತು ಏಸಿ ಇಲ್ಲದ ಬೋಗಿಗಳು ಸಹ ಇರುತ್ತವೆ. ಜತೆಗೆ ದಿನಕ್ಕೆ 300 ಶ್ರಮಿಕ್ ಸ್ಪೆಷಲ್ ರೈಲುಗಳ ಕಾರ್ಯಾಚರಣೆಗೆ ಕೂಡ ಅಗತ್ಯ ಪ್ರಮಾಣದ ಬೋಗಿಗಳನ್ನು ಕಾಯ್ದಿರಿಸಲಾಗಿದೆ. ವಲಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಯಾರು ಲಾಕ್ ಡೌನ್ ನಿಂದ ಸಿಲುಕಿಕೊಂಡಿದ್ದಾರೋ ಅವರ ಸಂಚಾರಕ್ಕೆ ಅನುಕೂಲ ಆಗಲಿ ಎಂದು ಈ ರೈಲುಗಳು ಮೇ 1ರಿಂದ ಸೇವೆ ಆರಂಭಿಸಿವೆ.
ಶೇ 85ರಷ್ಟು ದರ ಭರಿಸುವ ರೈಲ್ವೆ ಇಲಾಖೆ
ಮೇ 10ನೇ ತಾರೀಕಿನ ತನಕ 366 ಶ್ರಮಿಕ್ ಸ್ಪೆಷಲ್ ರೈಲಿನಲ್ಲಿ 4 ಲಕ್ಷ ಪ್ರಯಾಣಿಕರನ್ನು ಕರೆದೊಯ್ಯಲಾಗಿದೆ. ಸಾಮಾಜಿಕ ಅಂತರದ ನಿಯಮ ಕಾಯ್ದುಕೊಂಡು, ಗರಿಷ್ಠ 1200 ಪ್ರಯಾಣಿಕರಂತೆ ಪ್ರಯಾಣ ಮಾಡಿದ್ದಾರೆ. ಯಾರು ಈ ಪ್ರಯಾಣದ ದರವನ್ನು ಭರಿಸಬೇಕು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಆರಂಭದಲ್ಲಿ ಕಾರ್ಮಿಕರಿಗೆ ಸೂಪರ್- ಫಾಸ್ಟ್ ರೈಲಿನ ಸ್ಲೀಪರ್ ಕ್ಲಾಸ್ ಟಿಕೆಟ್ ದರ ಮತ್ತು ಹೆಚ್ಚುವರಿ 50 ರುಪಾಯಿ ಎಂದು ನಿಗದಿ ಮಾಡಲಾಯಿತು. ಯಾವಾಗ ಕಾಂಗ್ರೆಸ್ ನಿಂದ ಈ ಕಾರ್ಮಿಕರ ಟಿಕೆಟ್ ಹಣ ಪೂರ್ತಿಯಾಗಿ ಪಾವತಿಸುವ ಘೋಷಣೆ ಹೊರಬಿತ್ತೋ, ಆಗ ಕೇಂದ್ರ ಸರ್ಕಾರ ಹೇಳಿಕೆ ನೀಡಿ, ರೈಲ್ವೆ ಇಲಾಖೆಯು 85ರಷ್ಟು ದರ ಭರಿಸುವುದಾಗಿ ತಿಳಿಸಲಾಯಿತು. ಬಾಕಿ ಮೊತ್ತ ಕಾರ್ಮಿಕರು ನೀಡಬೇಕು ಎಂದಾಯಿತು.


Click it and Unblock the Notifications