ಕೇಂದ್ರ ಸರ್ಕಾರವು ಪ್ರಸಕ್ತ ಆರ್ಥಿಕ ವರ್ಷದ ವಿತ್ತೀಯ ಕೊರತೆಯನ್ನು ತುಂಬಿಕೊಳ್ಳುವ ಪ್ರಯತ್ನ ಆರಂಭಿಸಿದೆಯಾ? ತಜ್ಞರ ಪ್ರಕಾರ, ಈ ಪ್ರಶ್ನೆಗೆ ಉತ್ತರ "ಹೌದು". ಈ ಕೆಲಸ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಈಗಾಗಲೇ ಶುರುವಾಗಿದೆ ಅನ್ನೋರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಾಗಿದ್ದರೆ ವಿತ್ತೀಯ ಕೊರತೆಯನ್ನು ತುಂಬಿಕೊಳ್ಳುವುದು ಅಂದರೆ ಏನು ಮತ್ತು ಹೇಗೆ ಅನ್ನೋ ಪ್ರಶ್ನೆ ಬರುತ್ತದೆ.
ಜನ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಹೇಳಬೇಕು ಅಂದರೆ, ಸರ್ಕಾರದ ಖರ್ಚಿಗೆ ಎಷ್ಟು ಹಣದ ಅಗತ್ಯ ಇದೆಯೋ ಅಷ್ಟು ಮೊತ್ತವನ್ನು ಅಥವಾ ನೋಟನ್ನು ಮುದ್ರಿಸುವುದು. ಈ ಪ್ರಕ್ರಿಯೆ ಸಾಮಾನ್ಯ ಸನ್ನಿವೇಶಗಳಲ್ಲಿ ನಡೆಯುವುದಿಲ್ಲ. ಏಕೆಂದರೆ, ಹೀಗೆ ಮಾಡಿದರೆ ಹಣದುಬ್ಬರ ವಿಪರೀತ ಆಗುತ್ತದೆ.
ಆದರೆ, ಕೊರೊನಾದಂಥ ವಿರಳ ಸನ್ನಿವೇಶದ ಎದುರು ನಾವಿದ್ದೇವೆ. ಲಾಕ್ ಡೌನ್ ಕಾರಣಕ್ಕೆ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಇರುವ ಕೆಲವು ಪರ್ಯಾಯ ಮಾರ್ಗದಲ್ಲಿ ಇದೂ ಒಂದು. ಇದನ್ನು ಇನ್ನಷ್ಟು ವಿವರಿಸುವ ಮುಂಚೆ ವಿತ್ತೀಯ ಕೊರತೆ ಅಥವಾ Fiscal Deficit ಅಂದರೆ ಏನು ಅನ್ನೋದನ್ನು ತಿಳಿಸಬೇಕು.
ತೆರಿಗೆ ಆದಾಯ ಕಡಿಮೆ, ಖರ್ಚು ಹೆಚ್ಚು
ಸರ್ಕಾರಕ್ಕೆ ಬರುವ ಒಟ್ಟು ಆದಾಯದಲ್ಲಿ ಖರ್ಚನ್ನು ಕಳೆದರೆ ಏನು ಉತ್ತರ ಸಿಗುವುದೋ ಅದು ವಿತ್ತೀಯ ಕೊರತೆ. ಕೊರೊನಾ ಅಟಕಾಯಿಸಿಕೊಳ್ಳುವ ಮುನ್ನ ಕೇಂದ್ರ ಸರ್ಕಾರವು 2020- 21ರ ಸಾಲಿಗೆ 3.5 ಪರ್ಸೆಂಟ್ ವಿತ್ತೀಯ ಕೊರತೆ ಅಂದಾಜು ಮಾಡಿತ್ತು. ಒಟ್ಟಾರೆ ರಾಜ್ಯ ಸರ್ಕಾರದ ಕೊರತೆ ಸೇರಿ ಆರ್ಥಿಕ ವರ್ಷ 2020ಕ್ಕೆ 2.6% ಅಂದಾಜು ಮಾಡಿತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ. ಒಟ್ಟಾರೆಯಾಗಿ ಜಿಡಿಪಿಯ 5.6 ಪರ್ಸೆಂಟ್ ಆಗಬಹುದು ಎಂಬ ಅಂದಾಜಿತ್ತು. ಆದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಂದಾಜು ಮಾಡಿದ್ದಕ್ಕಿಂತ ಬಹಳ ಅಂದರೆ ಬಹಳ ಹೆಚ್ಚೇ ಕೊರತೆ ಆಗುವ ಸಾಧ್ಯತೆ ಗೋಚರಿಸುತ್ತಿದೆ. ಕೊರೊನಾದ ಕಾರಣಕ್ಕೆ ನಿರೀಕ್ಷೆಗಿಂತ ಕಡಿಮೆ ತೆರಿಗೆ ಆದಾಯ ಸಂಗ್ರಹ ಹಾಗೂ ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಖರ್ಚಾಗುವಂತಿದೆ.
ಎರಡು ಹಂತದ ಪ್ರಕ್ರಿಯೆ ಅನುಸರಿಸಬಹುದು
ಸರ್ಕಾರಕ್ಕೆ ಜಿಡಿಪಿಯ 4ರಿಂದ 6 ಪರ್ಸೆಂಟ್ ಕೊರತೆ ಬರಬಹುದು ಎಂದು ಕಾಣುತ್ತಿದೆ. ಇದಕ್ಕಾಗಿ ಹಣ ಪಡೆಯಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಹಣ ಕೇಳುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದಲೇ. ಏಕೆಂದರೆ, ಇದೊಂದು ಸಿದ್ಧ ಮಾದರಿಯಾಗಿ ನಡೆದುಕೊಂಡು ಬಂದಿದೆ. ಜಗತ್ತಿನ ಬಹುತೇಕ ಪ್ರಮುಖ ಆರ್ಥಿಕತೆಯ ದೇಶಗಳಲ್ಲಿ ನಡೆಯುವುದು ಹೀಗೆ. ಸರ್ಕಾರದ ಈ ಹಣಕಾಸಿನ ಕೊರತೆ ನೀಗಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎರಡು ಹಂತದ ಪ್ರಕ್ರಿಯೆ ಅನುಸರಿಸಬಹುದು. ಮೊದಲನೆಯದಾಗಿ ಸರ್ಕಾರದ ಅತ್ಯಂತ ಅಲ್ಪಾವಧಿ ಸಾಲವನ್ನು (ಟ್ರೆಷರಿ ಬಿಲ್ಸ್) ಖರೀದಿಸಬಹುದು. ಎರಡನೆಯದಾಗಿ, ಸರ್ಕಾರದ ದೀರ್ಘಾವಧಿ ಬಾಂಡ್ ಗಳನ್ನು ಖರೀದಿಸಲು ಇವೇ ಪತ್ರಗಳನ್ನು ಮಾರಾಟ ಮಾಡಬಹುದು. ಈ ಎರಡೂ ಹೆಜ್ಜೆಗಳನ್ನು ಒಟ್ಟಾಗಿ "ಆಪರೇಷನ್ ಟ್ವಿಸ್ಟ್" ಎನ್ನಲಾಗುತ್ತದೆ. ಈ ಹಿಂದೆ ಇದನ್ನು ಮಾಡಲಾಗಿದೆ. ಆದರೂ ಮಾರುಕಟ್ಟೆ ತಜ್ಞರು ಸದ್ಯದ ಪರಿಸ್ಥಿತಿಗೆ ಹಣದ ಕೊರತೆ ನೀಗಿಸುವ ಬಗ್ಗೆ ಗಮನ ಸೆಳೆಯುತ್ತಾರೆ.
ಹಣದುಬ್ಬರದ ಸವಾಲು
ಈ ಪ್ರಕ್ರಿಯೆಯ ಪರಿಣಾಮ ನೇರವಾಗಿ ಹೇಗಾಗಬಹುದು ಅಂದರೆ, ದೀರ್ಘಾವಧಿ ಬಾಂಡ್ ಗಳ ಮೇಲಿನ ಪ್ರತಿಫಲ ಕಡಿಮೆಯಾಗುತ್ತದೆ. ದೀರ್ಘಾವಧಿಯ ಡೆಟ್ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಅನುಕೂಲ ಆಗುತ್ತದೆ. ಆದರೆ ತಜ್ಞರು ಹೂಡಿಕೆದಾರರಿಗೆ ಸಲಹೆ ನೀಡುವುದೇನೆಂದರೆ, ಇಂಥ ತಂತ್ರದ ವ್ಯವಹಾರದೊಳಗೆ ಸಿಲುಕಿಕೊಳ್ಳಬೇಡಿ ಎನ್ನುತ್ತಾರೆ. ಇನ್ನು ಎರಡನೇ ಸವಾಲೆಂದರೆ ಹಣದುಬ್ಬರ. ಈ ಸಾಧ್ಯತೆಯನ್ನು ತಜ್ಞರು ಅನುಮೋದಿಸುತ್ತಾರೆ. ಆದರೆ ಇದು ಯಾವಾಗ ಆಗುತ್ತದೆ ಅಂದರೆ, ಆರ್ಥಿಕತೆಯಲ್ಲಿ ಮತ್ತೆ ಬೇಡಿಕೆ ಕಾಣಿಸಿಕೊಂಡ ಮೇಲೆ. ಆದರೆ ಈಗಿನ ಸ್ಥಿತಿಯಲ್ಲಿ ಹಣದುಬ್ಬರಕ್ಕಿಂತ ಅಪಮೌಲ್ಯದ ಅಪಾಯವೇ ಜಾಗತಿಕ ಮಟ್ಟದಲ್ಲಿ ಕಾಣುತ್ತಿದೆ. ಲಾಕ್ ಡೌನ್ ಮುಗಿದು, ಮತ್ತೆ ಬೇಡಿಕೆ ಕಾಣಿಸಿಕೊಂಡ ಮೇಲೆ ಇದು ಬದಲಾಗಬಹುದು. ಆದರೆ ತುಂಬ ದೊಡ್ಡ ಮಟ್ಟದಲ್ಲಿ ಬೇಡಿಕೆ ಬಂದುಬಿಟ್ಟರೆ ಆಗ ಜಾಗತಿಕವಾಗಿ, ದೇಶೀಯವಾಗಿ ಕೂಡ ಹಣದುಬ್ಬರ ಸಿಕ್ಕಾಪಟ್ಟೆ ಹೆಚ್ಚಾಗುತ್ತದೆ. ಸಾಧಾರಣ ಮಟ್ಟದಲ್ಲಿ ಹಣದುಬ್ಬರ ಇರುವುದು ಯಾವುದೇ ಆರ್ಥಿಕತೆಗಾದರೂ ಉತ್ತಮ.
ಈಕ್ವಿಟಿ, ಚಿನ್ನದ ಮೇಲೆ ಹೂಡಿಕೆ ಒಳ್ಳೆ ಆಯ್ಕೆ
ಈಗಿನ ಸನ್ನಿವೇಶದಲ್ಲಿ ಷೇರುಗಳ ಮೇಲಾಗಲೀ ಚಿನ್ನದ ಮೇಲಾಗಲೀ ದೊಡ್ಡ ಮಟ್ಟದಲ್ಲಿ ಹಣ ಹೂಡುವುದು ಅಪಾಯಕಾರಿ. ಮೊದಲೇ ಹೇಳಿದ ಹಾಗೆ ವಿತ್ತೀಯ ಕೊರತೆಯನ್ನು ತುಂಬಿಕೊಳ್ಳುವ ಪ್ರಕ್ರಿಯೆಯಿಂದ ಮಧ್ಯಮ ಅವಧಿಗೆ ಹಾಗೂ ದೀರ್ಘಾವಧಿಗೆ ಹಣದುಬ್ಬರದ ಸಮಸ್ಯೆಯನ್ನು ತಂದೊಡ್ಡುತ್ತದೆ. ಹಣದುಬ್ಬರವನ್ನು ತಡೆಯಲು ಡೆಟ್ ಗಿಂತಲೂ ಸಾಂಪ್ರದಾಯಿಕವಾದಂಥ ಈಕ್ವಿಟಿ ಷೇರುಗಳು ಮತ್ತು ಚಿನ್ನ ಉತ್ತಮ ಆಯ್ಕೆಗಳು. ಆದರೆ ಈಕ್ವಿಟಿ ಷೇರುಗಳಲ್ಲೂ ಅದರದೇ ಸಮಸ್ಯೆಗಳಿವೆ. ಅವುಗಳನ್ನು ಬೆಲೆ ಇಳಿಕೆಯಿಂದ ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರವು ಯಾವ ಬಗೆಯಲ್ಲಿ ತನ್ನ ವಿತ್ತೀಯ ಕೊರತೆಯನ್ನು ತುಂಬಿಕೊಳ್ಳುತ್ತದೆ ಎಂಬ ಕಡೆ ಹೂಡಿಕೆದಾರರು ಕಣ್ಣಿಟ್ಟಿರಬೇಕು. ಆಗ ನಿಧಾನವಾಗಿ ಯಾವುದರ ಮೇಲೆ ಹೂಡಿಕೆ ಲಾಭದಾಯಕ ಎಂದು ನಿರ್ಧರಿಸುವುದು ಸುಲಭವಾಗುತ್ತದೆ.


Click it and Unblock the Notifications