ನವದೆಹಲಿ, ಏಪ್ರಿಲ್ 8: ಖಚಿತ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಚೆನ್ನೈನ ತಾಂಬರಂನ ನೆಲ್ಲೈ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರಿಂದ 4 ಕೋಟಿ ರೂ. ಲೆಕ್ಕಕ್ಕೆ ಸಿಗದ ನಗದನ್ನು ವಶಪಡಿಸಿಕೊಂಡಿದ್ದಾರೆ. ಮೂವರಲ್ಲಿ ಒಬ್ಬರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯ ಎಂದು ತನಿಖೆಯಿಂದ ತಿಳಿದುಬಂದಿದೆ.
ನಗದು ತಿರುನಲ್ವೇಲಿ ಬಿಜೆಪಿ ಅಭ್ಯರ್ಥಿ ನೈನಾರ್ ನಾಗೇಂದ್ರನ್ ಅವರದ್ದು ಎಂದು ಮೂವರು ಒಪ್ಪಿಕೊಂಡಿದ್ದಾರೆ. ಅದರ ಆಧಾರದ ಮೇಲೆ ಪೊಲೀಸರು ನಾಗೇಂದ್ರನ್ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ ಎಂದು ವರದಿಯಾಗಿದೆ.

ಬಂಧಿತರನ್ನು ಸತೀಶ್ (34), ಸತೀಶ್ ಅವರ ಕಿರಿಯ ಸಹೋದರ ನವೀನ್ (31) ಮತ್ತು ಪೆರುಮಾಳ್ (24) ಎಂದು ಗುರುತಿಸಲಾಗಿದೆ. ತಿರುನಲ್ವೇಲಿ ಬಿಜೆಪಿ ಅಭ್ಯರ್ಥಿ ನೈನಾರ್ ನಾಗೇಂದ್ರನ್ ಒಡೆತನದ ಚೆನ್ನೈನ ಪುರಸೈವಾಕಂನಲ್ಲಿರುವ ಬ್ಲೂ ಡೈಮಂಡ್ ಹೋಟೆಲ್‌ನಲ್ಲಿ ಸತೀಶ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಪೆರುಮಾಳ್ ನೈನಾರ್ ನಾಗೇಂದ್ರನ್ ಅವರ ಸಂಬಂಧಿ ಎಂಬುದು ಬಹಿರಂಗವಾಗಿದೆ.
ಚುನಾವಣಾ ಆಯೋಗಕ್ಕೆ ಡಿಎಂಕೆ ದೂರು
ಬಿಜೆಪಿ ಅಭ್ಯರ್ಥಿಯ ಹಣ ವಶಪಡಿಸಿಕೊಂಡ ಬಗ್ಗೆ ಡಿಎಂಕೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರ್ತಿ ತಮಿಳುನಾಡಿನ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿ ನ್ಯಾ.ನಾಗೇಂದ್ರನ್ ಅವರ ಆಪ್ತರಿಂದ 4.5 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಆರ್.ಎಸ್.ಭಾರತಿ ತಿಳಿಸಿದ್ದಾರೆ.
ಅಲ್ಲದೆ ನೈನಾರ್ ನಾಗೇಂದ್ರನ್ ಅವರಿಗೆ ಸೇರಿದ ತಮಿಳುನಾಡಿನ ಎಲ್ಲಾ ಸ್ಥಳಗಳಲ್ಲಿ ಮತ್ತು ಬಿಜೆಪಿ ಅಭ್ಯರ್ಥಿಗಳ ಎಲ್ಲಾ ಸ್ಥಳಗಳಲ್ಲಿ ಶೋಧ ನಡೆಸಬೇಕು. ಅಲ್ಲದೇ ಮತದಾರರಿಗೆ ಕೊಡಲು ಕೋಟ್ಯಂತರ ರೂ.ಗಳನ್ನು ಗುಪ್ತ ಸ್ಥಳಗಳಲ್ಲಿ ಇಟ್ಟಿರುವ ಶಂಕೆ ಇದೆ ಎಂದು ಹೇಳಿದ್ದಾರೆ.


Click it and Unblock the Notifications