ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತ ವ್ಯಕ್ತಿ, ಅಮೆಜಾನ್ ಸಿಇಓ ಜೆಫ್ ಬೇಜೋಸ್ ದಾಖಲೆಯ ಮಟ್ಟದಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ. ಶಾಪಿಂಗ್ ಮೂಡ್‌ನಲ್ಲಿರುವ ಅಮೆಜಾನ್ ಸಂಸ್ಥಾಪಕ ಕ್ಯಾಲಿಫೋರ್ನಿಯಾದ ಲಾಸ್ ಏಂಜಲ್ಸ್‌ನಲ್ಲಿ 1200 ಕೋಟಿ ಬೆಲೆ ಬಾಳುವ ಮನೆಯನ್ನು ಖರೀದಿಸಿದ್ದಾರೆ.
ಡೇವಿಡ್ ಜೆಫೆನ್ ಎಂಬ ಶ್ರೀಮಂತ ವ್ಯಕ್ತಿಯಿಂದ ಅತ್ಯಂತ ದುಬಾರಿ ಮನೆಯನ್ನು ಖರೀದಿಸಿದ ಜೆಫ್ ಬೇಜೋಸ್ ತನ್ನ ಹೊಸ ಮನೆಗೆ 165 ಮಿಲಿಯನ್ ಅಮೆರಿಕನ್ ಡಾಲರ್(ಭಾರತದ ರುಪಾಯಿಗಳಲ್ಲಿ ಸುಮಾರು 1200 ಕೋಟಿ)ಗೆ ಮನೆಯನ್ನು ಖರೀದಿ ಮಾಡಿದ್ದಾರೆ. ಒಂಭತ್ತು ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಈ ಎಸ್ಟೇಟ್ ಅತ್ಯಂತ ಸುಂದರವಾಗಿದೆ.
1930 ರ ದಶಕದಲ್ಲಿ ನಿರ್ಮಾಣವಾದ ಎಸ್ಟೇಟ್
1930 ರ ದಶಕದಲ್ಲಿ ವಾರ್ನರ್ ಬ್ರದರ್ಸ್‌ನ ಮಾಜಿ ಅಧ್ಯಕ್ಷರಾಗಿದ್ದ ಜ್ಯಾಕ್ ವಾರ್ನರ್ ವಿನ್ಯಾಸಗೊಳಿಸಿದ್ದ ಮನೆ ಇದಾಗಿದೆ. ಆಗಿನ ಕಾಲದಲ್ಲಿ ಅತ್ಯಂತ ದುಬಾರಿ ಹಣದಲ್ಲಿ ಅತ್ಯಂತ ಸೊಗಸಾಗಿ ಎಸ್ಟೇಟ್ ನಿರ್ಮಿಸಲಾಗಿತ್ತು. ಇದನ್ನು ನಿರ್ಮಿಸಲು ಒಂದು ದಶಕವನ್ನೇ ತೆಗೆದುಕೊಳ್ಳಲಾಗಿದೆ.
ಜೆಫ್ ಬೇಜೋಸ್ ದುಬಾರಿ ಎಸ್ಟೇಟ್‌ನಲ್ಲಿ ಏನೇನಿದೆ?
ಜೆಫ್ ಬೇಜೋಸ್‌ರ ಈ ವಿಲಾಸಿ ಎಸ್ಟೇಟ್‌ನಲ್ಲಿ ಎಲ್ಲವೂ ಇದೆ . 9 ಎಕರೆ ವಿಸ್ತೀರ್ಣದ ಈ ಎಸ್ಟೇಟ್‌ನಲ್ಲಿ ಟೆನಿಸ್ ಕೋರ್ಟ್, ಅತಿಥಿ ಗೃಹಗಳು, ಗಾಲ್ಫ್ ಕೋರ್ಸ್, ದೊಡ್ಡ ಬಂಗಲೆ ಮತ್ತು ಟೆರೇಸ್ ಒಳಗೊಂಡಿದೆ. ಜೊತೆಗೆ ಅತ್ಯಂತ ದುಬಾರಿ ವಸ್ತುಗಳನ್ನು ಬಳಸಿ ಮನೆಯನ್ನು ಸಿಂಗಾರಗೊಳಿಸಲಾಗಿದೆ.
ಒಟ್ಟು ಆಸ್ತಿಯ 8 ಪರ್ಸೆಂಟ್‌ನಷ್ಟಿದೆ ಜೆಫ್ ಬೇಜೋಸ್ ಎಸ್ಟೇಟ್
ವಿಶ್ವದ ಶ್ರೀಮಂತ ವ್ಯಕ್ತಿಯಾಗಿರುವ ಜೆಫ್ ಬೇಜೋಸ್ 131.9 ಬಿಲಿಯನ್ ಡಾಲರ್‌ನಷ್ಟು ಸಂಪತ್ತನ್ನು ಹೊಂದಿದ್ದಾರೆ. ಅಂದರೆ ಭಾರತದ ರುಪಾಯಿಗಳಲ್ಲಿ ಸುಮಾರು 9 ಲಕ್ಷದ 35 ಸಾವಿರ ಕೋಟಿಗಳಷ್ಟು ಆಸ್ತಿ ಹೊಂದಿದ್ದಾರೆ. ಇವರ ಒಟ್ಟು ಆಸ್ತಿಯಲ್ಲಿ 8 ಪರ್ಸೆಂಟ್‌ನಷ್ಟು ಮೌಲ್ಯದ ಬಂಗಲೆ ಇದಾಗಿದ್ದು ಅತ್ಯಂತ ದುಬಾರಿ ಎಂದೇ ಕರೆಯಲಾಗುತ್ತಿದೆ.
2020ರ ಆರಂಭದಲ್ಲಿ ದುಬಾರಿ ಅಪಾರ್ಟ್‌ಮೆಂಟ್ ಖರೀದಿ
ಈ ವರ್ಷ ಜೆಫ್ ಬೇಜೋಸ್ ಪೂರ್ಣ ಶಾಪಿಂಗ್ ಮೂಡ್‌ನಲ್ಲಿರುವಂತೆ ಗೋಚರಿಸುತ್ತಿದೆ. ಈ ವರ್ಷದ ಆರಂಭದಲ್ಲೇ ಬೇಜೋಸ್ ನ್ಯೂಯಾರ್ಕ್‌ನಲ್ಲಿ 80 ಮಿಲಿಯನ್ ಡಾಲರ್ (ಭಾರತದ ರುಪಾಯಿಗಳಲ್ಲಿ 571 ಕೋಟಿ) ಮೌಲ್ಯದ ದುಬಾರಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದರು.


Click it and Unblock the Notifications