ಭಾರತದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ವಿಲೀನ ಪರ್ವ ಮುಗಿದಿದೆ. ಕೊರೊನಾ ವೈರಸ್ ತಾಂಡವವಾಡುತ್ತಿರುವ ಈ ಕಾಲಘಟ್ಟದಲ್ಲಿ ಇದೇನಾಯಿತು ಎಂಬುದು ಕೂಡ ಆಯಾ ಬ್ಯಾಂಕ್ ನ ಗ್ರಾಹಕರ ಅನುಭವಕ್ಕೆ ಪೂರ್ಣ ಪ್ರಮಾಣದಲ್ಲಿ ಬಾರದೇ ಆದ ಕೂಡಾವಳಿ ಇದು. ಇದರಲ್ಲಿ ಕರ್ನಾಟಕದ ಎರಡು ಬ್ಯಾಂಕ್ ಗಳು ಒಂದಾಗಿವೆ. ಅದು ಕೆನರಾ ಮತ್ತು ಸಿಂಡಿಕೇಟ್ ಬ್ಯಾಂಕ್. ಈ ಪೈಕಿ ಸಿಂಡಿಕೇಟ್ ಬ್ಯಾಂಕ್ ನ ಕಥೆ ನಿಮಗೆ ಹೇಳಬೇಕಿದೆ.
ಸಿಂಡಿಕೇಟ್ ಬ್ಯಾಂಕ್ ನ ಆರಂಭಿಸಿದ ಆ ವ್ಯಕ್ತಿಯ ಆಲೋಚನೆಯೇ ಅದ್ಭುತವಾಗಿತ್ತು. ಒಬ್ಬ ವ್ಯಕ್ತಿ ಶ್ರೀಮಂತನಾಗಬೇಕು ಅಂದುಕೊಂಡರೆ ಅದು ಸಾಕಾರ ಆಗುವುದು ಕಷ್ಟ. ಆದರೆ ಇಡೀ ಸಮಾಜದ ಎಲ್ಲರ ಬಳಿಯೂ ಹಣ ಓಡಾಡಬೇಕು ಅಂದುಕೊಂಡಲ್ಲಿ ಶ್ರೀಮಂತಿಕೆ ತನಗೂ ಬರುತ್ತದೆ ಎಂಬ ಸಾರ್ವಕಾಲಿಕ ಸತ್ಯ ಅವರಿಗೆ ಅರ್ಥವಾಗಿತ್ತು. ಆ ಕಾರಣಕ್ಕೆ 1930ರ ದಶಕದಲ್ಲಿ ಇನ್ನೂ ಹಳ್ಳಿಯೇ ಆಗಿದ್ದ ಮಣಿಪಾಲ್ ನಲ್ಲಿ ಸಿಂಡಿಕೇಟ್ ಬ್ಯಾಂಕ್ ನ ಮುಖ್ಯ ಶಾಖೆ ಆರಂಭಿಸಿದರು.
ಈ ಬ್ಯಾಂಕ್ ನೊಳಗೆ ಸಿ.ಕೆ. ಪ್ರಹ್ಲಾದ್ ಅವರು ಬರುವ ಮುನ್ನವೇ ಇದರ ಪ್ರವರ್ತಕರಿಗೆ ಗೊತ್ತಿತ್ತು, ಸಮಾಜದ ತಳಮಟ್ಟದಿಂದ ಉಳಿತಾಯ ಆರಂಭವಾಗಬೇಕು ಎಂಬ ಸತ್ಯ. ಆದ್ದರಿಂದಲೇ ಆ ಕಾಲಕ್ಕೆ ಎಲ್ಲ ಬ್ಯಾಂಕ್ ಗಳು ಖಾತೆ ತೆರೆಯಲು ಕನಿಷ್ಠ 5 ನಿಗದಿ ಮಾಡಿದ್ದಾಗ, 25 ಪೈಸೆಯೊಂದಿಗೆ ಸಿಂಡಿಕೇಟ್ ಬ್ಯಾಂಕ್ ಖಾತೆ ತೆರೆಯಬಹುದಿತ್ತು.
ಕಣ್ಣೀರು ಹಾಕಿದ್ದರು ಟಿಎಂಎ ಪೈ
ಈ ಯಶಸ್ಸಿನ ಪಾಠವನ್ನು ಎಷ್ಟೋ ಮ್ಯಾನೇಜ್ ಮೆಂಟ್ ಸ್ಕೂಲ್ ಗಳು ಕೂಡ ಹೇಳಿಕೊಡುವುದಿಲ್ಲ. ಸಿಂಡಿಕೇಟ್ ಬ್ಯಾಂಕ್ ಎಂಬುದು ತೊನ್ಸೆ ಮಾಧವ್ ಅನಂತ್ ಪೈ ಅಲಿಯಾಸ್ ಟಿಎಂಎ ಪೈ ಅವರ ಕನಸಿನ ಕೂಸು. ಬೆಂಗಳೂರಲ್ಲಿ ವೈದ್ಯಕೀಯ ಶಿಕ್ಷಣ ಪಡೆದು, ವಾಪಸ್ ಮಲ್ಪೆ ಬಳಿಯ ತಮ್ಮ ಹಳ್ಳಿಗೆ ಬಂದರು ಪೈ. ಹೆಚ್ಚಿನ ಓದಿಗೆ ಜಪಾನ್ ಗೆ ಹೋಗಬೇಕು ಅನ್ನೋದು ಅವರ ಇಚ್ಛೆಯಾಗಿತ್ತು. ಆದರೆ ಪೈಗಳ ತಾಯಿ ಕಡ್ಡಿ ತುಂಡು ಮಾಡುವಂತೆ ಹೇಳಿಬಿಟ್ಟರು: ಇದೇ ಹಳ್ಳಿಯಲ್ಲಿ ಇರಬೇಕು, ಇಲ್ಲಿನ ಜನರದೇ ಸೇವೆ ಮಾಡಬೇಕು. ಈ ಮಾತಿನಿಂದ ಟಿಎಂಎ ಪೈ ಹೃದಯ ಮುರಿದುಹೋಯಿತು. ಏಕೆಂದರೆ, ಆ ಹಳ್ಳಿಯಲ್ಲಿ ಬೌದ್ಧಿಕ ಬೆಳವಣಿಗೆಗೋ ಆರ್ಥಿಕ ಬೆಳವಣಿಗೆಗೋ ಅವಕಾಶ ಇರಲಿಲ್ಲ. ಆ ಹಳ್ಳಿಯಲ್ಲೂ ಸಾಮಾನ್ಯ ಕಾಯಿಲೆಗಳು, ಸಾಮಾನ್ಯ ದುಡಿಮೆಯಲ್ಲಿ ಬದುಕುವ ಜನ... ಜೀವನ ಹೀಗೇ ಮುಂದುವರಿಯಿತು. ಆರು ತಿಂಗಳು ಬಿಟ್ಟು, ಮತ್ತೊಮ್ಮೆ ತಮ್ಮ ಉದ್ದೇಶವನ್ನು ಹೇಳಿದರು ಪೈ. ಆದರೆ ಉತ್ತರದಲ್ಲಿ ಯಾವ ಬದಲಾವಣೆ ಇರಲಿಲ್ಲ. ಆ ದಿನ ಅಕ್ಷರಶಃ ಕಣ್ಣೀರು ಹಾಕಿದ್ದರು ಪೈ.
ಮಹಿಳೆಯರ ಮನಸ್ಸು ಪರಿವರ್ತನೆ
ಒಂದು ದಿನ ತಮ್ಮ ಸ್ಥಿತಿ ಬಗ್ಗೆ ಆಲೋಚನೆ ಮಾಡುತ್ತಾ ಇರುವಾಗ ಪೈ ಅವರಿಗೆ ತಮ್ಮ ಸಮಸ್ಯೆಯ ಮೂಲ ಇರುವುದು ಎಲ್ಲಿ ಎಂಬ ಅಂಶ ಹೊಳೆಯಿತು. ತಮಗೆ ಸಂಪಾದನೆ ಏಕೆ ಆಗುತ್ತಿಲ್ಲ ಅಂದರೆ, ತಮ್ಮ ಸುತ್ತಲಿನವರಿಗೆ ಅಂಥ ಸಂಪಾದನೇ ಆಗುತ್ತಿಲ್ಲ. ಆ ಕೂಡಲೇ ಅವರಲ್ಲೊಂದು ಆಲೋಚನೆ ಬಂತು. ಅದೇ ಇಡೀ ಭಾರತ ಹಿಂದೆ ಕಂಡಿರದ ಹಾಗೂ ಊಹಿಸದ ಕ್ರಾಂತಿಗೆ ನಾಂದಿ ಹಾಡಿತು. ಒಬ್ಬ ವೈದ್ಯರಾಗಿ ಪೈಗಳಿಗೆ ಗೊತ್ತಿತ್ತು. ಮಕ್ಕಳಿಗೆ ಅನಾರೋಗ್ಯವಾದರೆ ಕರೆತರುವವರು ತಾಯಂದಿರು. ಹಣ ಕೊಟ್ಟು ಕಳಿಸುವುದು ತಂದೆ. ಆ ಕಾರಣಕ್ಕೆ ತಮ್ಮ ಬಳಿಗೆ ಚಿಕಿತ್ಸೆಗೆ ಮಕ್ಕಳನ್ನು ಕರೆತರುತ್ತಿದ್ದ ತಾಯಂದಿರ ಮನಸ್ಸು ಪರಿವರ್ತಿಸಲು ಶುರು ಮಾಡಿದರು. ಮಕ್ಕಳನ್ನೂ ತಂದೆ ಥರ ಮೀನುಗಾರಿಕೆಗೆ ಸೀಮಿತ ಮಾಡಬೇಡಿ. ಮನೆಗೆ ವಾಪಸಾಗುವಾಗ ಕುಡಿಯುವ ಗಂಡನ ಥರವೇ ನಿಮ್ಮ ಮಕ್ಕಳು ಆಗದಂತೆ ನೋಡಿಕೊಳ್ಳಿ ಎಂದು ಬುದ್ಧಿ ಹೇಳುತ್ತಿದ್ದರು.
25 ಪೈಸೆಯಿಂದ ಉಳಿತಾಯ ಶುರು
ಏನೇ ಗಂಡಸರು ಮೀನು ಹಿಡಿಯುತ್ತಿದ್ದರೂ ಅದನ್ನು ಸ್ವಚ್ಛ ಮಾಡಿ, ಮಾರುತ್ತಿದ್ದದ್ದು, ಮನೆಗೆ ಬೇಕಾದ ದಿನಸಿ ತರುತ್ತಿದ್ದದ್ದು, ಆದಾಯ- ಖರ್ಚನ್ನು ಸರಿದೂಗಿಸುತ್ತಿದ್ದದ್ದು ಮಹಿಳೆಯರೇ. ಒಂದು ವೇಳೆ ಹೆಚ್ಚು ಹಣ ಉಳಿದರೆ ಮನೆಯ ಗಂಡಸರು ಅದನ್ನು ಕಿತ್ತುಕೊಂಡು ಕುಡಿದು ಬರುತ್ತಿದ್ದರು. ಇಂಥ ಸನ್ನಿವೇಶದಲ್ಲೇ ಪೈ ಅವರು ಉಳಿತಾಯದ ಪಾಠ ಆರಂಭಿಸಿದರು. ಆದರೆ ನಮ್ಮ ಬಳಿ ಅಷ್ಟು ಹಣ ಇಲ್ಲ ಎಂಬುದು ಮಹಿಳೆಯರ ಅಳಲಾಗಿತ್ತು. ಸರಿ, ನಿಮ್ಮ ಬಳಿ ಎಷ್ಟು ಹಣ ಇದೆ ಎಂದು ಕೇಳುತ್ತಿದ್ದರು ಪೈ. ಮಹಿಲೆಯರು ತಮ್ಮ ಬಳಿ ಇರುತ್ತಿದ್ದ ಸಣ್ಣ ಮೊತ್ತದ ನಾಣ್ಯಗಳನ್ನು ತೋರಿಸುತ್ತಿದ್ದರು. ಅದರಲ್ಲಿ 25 ಪೈಸೆ ತೆಗೆದುಕೊಂಡು, ಇದು ನಿಮ್ಮ ಉಳಿತಾಯ ಎಂದು, ಒಂದು ನೋಟ್ ಪುಸ್ತಕ ತಮ್ಮ ಬಳಿ ಇಟ್ಟುಕೊಂಡು ಅದರ ಲೆಕ್ಕ ಬರೆಯುತ್ತಿದ್ದರು. ಮತ್ತೊಂದರಲ್ಲಿ ಬರೆದು ಮಹಿಳೆಯರಿಗೆ ನೀಡುತ್ತಿದ್ದರು.
1000 ರುಪಾಯಿಗೂ ಹೆಚ್ಚು ಮೊತ್ತವಿತ್ತು
ಆ ಮಹಿಳೆಯರ ಮನೆಗಳ ಬಳಿ ಪೈಗಳು ತಮ್ಮ ಕಾಂಪೌಂಡರ್ ನನ್ನೇ ಕಳಿಸುತ್ತಿದ್ದರು. 25 ಪೈಸೆ ಪಡೆದು, ಆತ ಎರಡು ನೋಟ್ ಪುಸ್ತಕಗಳಲ್ಲಿ ದಾಖಲಿಸಿಕೊಂಡು ಬರುತ್ತಿದ್ದರು. ನಿಧಾನವಾಗಿ ಮಹಿಳೆಯರು ಉಳಿತಾಯ ಆರಂಭಿಸಿದರು. ಕೆಲ ತಿಂಗಳ ನಂತರ ಗೊತ್ತಾಯಿತು, ಪೈ ಅವರ ಬಳಿ 1000 ರುಪಾಯಿಗೂ ಹೆಚ್ಚು ಮೊತ್ತವಿದೆ ಎಂಬ ಸಂಗತಿ. ಆ ಮೊತ್ತವನ್ನೇ ಇವತ್ತಿಗೆ ಹೇಳಬೇಕು ಅಂದರೆ, ಕೆಲವು ಲಕ್ಷಗಳಾಗುತ್ತವೆ. ಆ 25 ಪೈಸೆ ಡಿಪಾಸಿಟ್ ಸ್ಕೀಮ್ ಆ ನಂತರ 'ಪಿಗ್ಮಿ ಡೆಪಾಸಿಟ್ ಸ್ಕೀಂ' ಅಂತಲೇ ಹೆಸರಾಯಿತು. ಅಲ್ಲಿಂದ ಎರಡನೇ ಹಂತದ ಪ್ರಯಾಣ ಆರಂಭವಾಯಿತು. ಆ ಮೀನುಗಾರರ ಮನೆಯಲ್ಲಿ ಅನ್ನ, ಮೀನು ಬಿಟ್ಟರೆ ಬೇರೇನೂ ತಿನ್ನುತ್ತಿರಲಿಲ್ಲವಾದ್ದರಿಂದ ಅವರ ಮಕ್ಕಳು ಪದೇಪದೇ ಕಾಯಿಲೆ ಬೀಳುತ್ತಿದ್ದರು. ಆದ್ದರಿಂದ ಆ ಮಕ್ಕಳಿಗೆ ಒಂದು ಲೋಟ ಹಾಲು ಕೊಡುವಂತೆ ಸಲಹೆ ನೀಡುತ್ತಿದ್ದರು ಡಾ. ಪೈ. ಆದರೆ ಹಸುವಿನ ಹಾಲು ಖರೀದಿ ಮಾಡುವಷ್ಟು ಅನುಕೂಲ ಅಲ್ಲಿನ ಜನರಿಗೆ ಇರಲಿಲ್ಲ.
ಹಾಲು ಇಲ್ಲದವರ ಮನೆಗೆ ಹಸು ಖರೀದಿಸುವ ಐಡಿಯಾ
ನಿಮ್ಮ ಮನೆಗಳಿಗೆ ಹಸು ಖರೀದಿಸಿ ಎನ್ನಲು ಆರಂಭಿಸಿದರು ಪೈ. ಅಲ್ಲಿನ ಜನರು ನಕ್ಕರು: ಒಂದು ಲೋಟ ಹಾಲಿಗೇ ಗತಿಯಿಲ್ಲ, ಇನ್ನು ಹಸು ಎಲ್ಲಿ ಖರೀದಿಸೋಣ ಎಂದರು. "ನಾನು ನಿಮಗೆ ಸಾಲ ನೀಡ್ತೀನಿ. ಅದರ ಮರುಪಾವತಿ ಕೂಡ ಸುಲಭವಾಗಿರುತ್ತದೆ ಅಂದರು ಪೈ. "ನಿಮ್ಮ ಮಕ್ಕಳಿಗೆ ಒಂದು ಲೋಟ ಹಾಲು ಕೊಡಿ. ಉಳಿದಿದ್ದು ನಾನು ಖರೀದಿ ಮಾಡ್ತೇನೆ. ಅದರಲ್ಲೇ ಸಾಲದ ಹೊಂದಾಣಿಕೆ ಮಾಡಿಕೊಳ್ತೇನೆ, ನೀವು ಬೇರೇನೂ ಮಾಡಬೇಕಿಲ್ಲ" ಅಂದರು. ಅಂದ ಹಾಗೆ ಪೈಗಳೇನೋ ಆಲೋಚನೆ ಹೇಳಿದ್ದರು. ಆದರೆ ಮೊದಲ ಮಹಿಳೆ ಈ ಸಲಹೆಗೆ ಒಪ್ಪಿದಾಗ ಪೈಗಳಿಗೂ ಅದು ಪ್ರಯೋಗವೇ ಆಗಿತ್ತು. ಹಳ್ಳಿಯಲ್ಲಿ ಬೇಕಾದಷ್ಟು ಹಸುಗಳಾದವು. ಎಲ್ಲ ಹಾಲನ್ನು ಪೈ ಅವರಿಗೆ ಖರೀದಿ ಮಾಡಲು ಅಸಾಧ್ಯವಾಯಿತು. ಆಗ ಹಾಲು ಸಹಕಾರ ಆರಂಭಿಸಿದರು ಪೈ.
ಕೆನರಾ ಇಂಡಸ್ಟ್ರಿಯಲ್ ಅಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್ ಆರಂಭ
ತಮ್ಮ ಬಳಿ ಬರುತ್ತಿದ್ದ ಹಣ ನಿರ್ವಹಣೆಗೆ ಒಂದು ಬ್ಯಾಂಕ್ ಆರಂಭಿಸಿದರು ಟಿ.ಎಂ.ಎ. ಪೈ. ಅದರ ಹೆಸರು ಕೆನರಾ ಇಂಡಸ್ಟ್ರಿಯಲ್ ಅಂಡ ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್. ಅದರ ಮುಖ್ಯ ಕಚೇರಿ ಮಣಿಪಾಲದಲ್ಲಿ ಆರಂಭವಾಯಿತು. ಮೊದಲ ಶಾಖೆ ಕಾರ್ಯ ಚಟುವಟಿಕೆ ಆರಂಭಿಸಿದ್ದು 1925ರಲ್ಲಿ, ಉಡುಪಿಯಲ್ಲಿ. 1937ರ ಹೊತ್ತಿಗೆ ಮುಂಬೈನಲ್ಲಿ ಈ ಬ್ಯಾಂಕ್ ಕ್ಲಿಯರಿಂಗ್ ಹೌಸ್ ಎಂದು ಸದಸ್ಯತ್ವ ಪಡೆದಿತ್ತು. ಆ ನಂತರ ನೇಕಾರರ ಕೋಆಪರೇಟಿವ್ ಶುರು ಮಾಡಿದರು. ಅವರಿಗೂ ಬ್ಯಾಂಕ್ ನಿಂದ ಸಾಲ ನೀಡಲಾಯಿತು. ಜನರ ಅನುಕೂಲಕ್ಕಾಗಿ ಪೈಗಳು ಶಾಲೆ, ಕಾಲೇಜು, ಮೆಡಿಕಲ್- ಎಂಜಿನಿಯರಿಂಗ್ ಕಾಲೇಜು ಶುರು ಮಾಡಿದರು. ಅದಾದ ಮೇಲೆ ಆ ಎಲ್ಲ ಸಮುಚ್ಚಯ ಸೇರಿ ಮಣಿಪಾಲ್ ಎಜುಕೇಷನ್ ಕಾಂಪ್ಲೆಕ್ಸ್ ಆಯಿತು.
ರಿಲಯನ್ಸ್ ಇಂಡಸ್ಟ್ರೀಸ್ ಬೋರ್ಡ್ ನಲ್ಲಿ ಪೈ ಕುಟುಂಬದ ಸದಸ್ಯ
ವ್ಯಾಪಾರಿಗಳಿಗೆ ಅವರ ಮರುಪಾವತಿ ಸಾಮರ್ಥ್ಯ ಗಮನಿಸಿ, ಬ್ಯಾಂಕ್ ನಿಂದ ಸಾಲ ನೀಡಿ, ವ್ಯಾಪಾರ ವಿಸ್ತರಣೆಗೆ ಪ್ರೋತ್ಸಾಹ ನೀಡುತ್ತಿದ್ದರು ಪೈ. ಒಮ್ಮೆ ಪ್ರಯಾಣದ ವೇಳೆ ಪೈ ಅವರಿಗೆ ಉದ್ಯಮಿಯೊಬ್ಬರ ಪರಿಚಯ ಆಯಿತು. ಅವರಿಗೆ ಸರ್ಕಾರದಿಂದ ನೂಲಿನ ಲೈಸೆನ್ಸ್ ಕೊಡಿಸಿದರು ಪೈ. ಆ ಉದ್ಯಮಿಯೇ ಧೀರೂಭಾಯಿ ಅಂಬಾನಿ. ಮುಂದೆ ಎಲ್ಲಿಯ ತನಕ ಧಿರೂಭಾಯಿ ಅಂಬಾನಿ ಜೀವಂತ ಇದ್ದರೋ ಅಲ್ಲಿಯ ತನಕ ಪೈ ಕುಟುಂಬದವರೊಬ್ಬರು ರಿಲಯನ್ಸ್ ಆಡಳಿತ ಮಂಡಳಿಯಲ್ಲಿ ಸದಸ್ಯರಾಗಿದ್ದರು. ಅಂದಹಾಗೆ ಸಿಂಡಿಕೇಟ್ ಬ್ಯಾಂಕ್ ಭಾರತದ ಹನ್ನೆರಡು ದೊಡ್ಡ ಬ್ಯಾಂಕ್ ಗಳಲ್ಲಿ ಒಂದು ಎಂಬಂತಾಯಿತು. ಆ ಕಾರಣಕ್ಕೆ ಮೊದಲನೇ ಸುತ್ತಿನಲ್ಲಿ ರಾಷ್ಟ್ರೀಕೃತಗೊಂಡಿತು. ಬ್ಯಾಂಕ್ ಗಳು ಗ್ರಾಮ ಮಟ್ಟದಲ್ಲಿ ಜನರಿಗೆ ಸೇವೆ ಒದಗಿಸಬೇಕು. ಅದಕ್ಕಾಗಿಯೇ ಬ್ಯಾಂಕ್ ರಾಷ್ಟ್ರೀಕರಣ ಮಾಡಲಾಗುತ್ತಿದೆ ಎಂದಿದ್ದರು ಇಂದಿರಾಗಾಂಧಿ. ಆದರೆ ಸಿಂಡಿಕೇಟ್ ಬ್ಯಾಂಕ್ ನ ಬೇರುಗಳು ಇದ್ದದ್ದೇ ಹಳ್ಳಿಗಳಲ್ಲಿ. ಆದ್ದರಿಂದ ಅವರ ಮಾತನ್ನು ಕೇಳಿ ನಕ್ಕವರುಂಟು. ಇನ್ನು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸಾಲ ಪಡೆಯುವುದಕ್ಕೆ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.


Click it and Unblock the Notifications