ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನವೇ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಯನ್ನು ನೀಡಿತ್ತು. ಈಗ ಚುನಾವಣೆಯಲ್ಲಿ ಗೆದ್ದು ಗದ್ದುಗೆಯನ್ನು ಪಡೆದ ಬಳಿಕ ಈ ಐದು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಯುವ ನಿಧಿ ಎಂಬ ಐದು ಯೋಜನೆಗಳ ಪೈಕಿ ಈಗಾಗಲೇ ನಾಲ್ಕು ಯೋಜನೆಗಳು ಜಾರಿಗೆ ಬಂದಿದೆ.
ಆದರೆ ಈ ಪೈಕಿ ಯುವ ನಿಧಿ ಗ್ಯಾರಂಟಿ ಯೋಜನೆಯು ಇನ್ನೂ ಕೂಡಾ ಜಾರಿಗೆ ಬಂದಿಲ್ಲ. ಆದರೆ ಯುವಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಶೀಘ್ರವೇ ಯುವ ನಿಧಿ ಯೋಜನೆಯು ಜಾರಿಗೆ ಬರಲಿದೆ. ಯುವನಿಧಿ ಯೋಜನೆಯ ಜಾರಿಗಾಗಿ ಸರ್ಕಾರವು ಈಗಾಗಲ್ಲೇ ಎಲ್ಲ ತಯಾರಿ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಬಜೆಟ್‌ನಲ್ಲಿ ನಾಲ್ಕು ಯೋಜನೆಗಳಿಗೆ ಅನುದಾನವನ್ನು ಸರ್ಕಾರ ಘೋಷಣೆ ಮಾಡಿದ್ದರೂ ಯುವನಿಧಿಗೆ ಅನುದಾನವನ್ನು ಸರ್ಕಾರವು ಘೋಷಣೆ ಮಾಡಿಲ್ಲ. ಇತರೆ ಯೋಜನೆಗಳಿಗೆ ಹಂಚಲಾದ ಬಜೆಟ್‌ನಲ್ಲಿಯೇ ಈ ಯೋಜನೆಯನ್ನು ಜಾರಿ ಮಾಡಲಾಗುತ್ತದೆಯೇ ಎಂಬ ಸುದ್ದಿಗಳಿದೆ. ಈ ಯೋಜನೆಯ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಯುವನಿಧಿ ಯೋಜನೆ ಮಾಹಿತಿ
ಕರ್ನಾಟಕ ಯುವ ನಿಧಿ ಯೋಜನೆಯು ಕಾಂಗ್ರೆಸ್ ಪಕ್ಷದ ಚುನಾವಣಾ ಪೂರ್ವ ಭರವಸೆಯಾಗಿದ್ದು, ಕರ್ನಾಟಕದಲ್ಲಿ ಸರ್ಕಾರ ರಚಿಸಿದರೆ ಅದನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕರ ಕಲ್ಯಾಣಕ್ಕಾಗಿ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಯೋಜನೆ ಇದಾಗಿದೆ. ಯೋಜನೆಯಲ್ಲಿ ನಿರುದ್ಯೋಗಿ ಯುವಕರಿಗೆ ಮಾಸಿಕ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ.
ಈ ಮಾಸಿಕ ಹಣಕಾಸಿನ ನೆರವನ್ನು ಯುವಕರು ಉದ್ಯೋಗ ಹುಡುಕುವ ಸಮಯದಲ್ಲಿ ಖರ್ಚಿನ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಕರ್ನಾಟಕದ ಖಾಯಂ ನಿವಾಸಿಗಳು ಮತ್ತು ವಿದ್ಯಾವಂತರಾಗಿದ್ದರೂ ನಿರುದ್ಯೋಗಿಗಳಾಗಿದ್ದರೆ, ಕರ್ನಾಟಕ ಯುವ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಹರಾಗಿದ್ದಾರೆ.
ಯೋಜನೆಯ ಪ್ರಯೋಜನಗಳು
ಕರ್ನಾಟಕ ಯುವ ನಿಧಿ ಯೋಜನೆಯಡಿ ಕರ್ನಾಟಕದ ಅರ್ಹ ನಿರುದ್ಯೋಗಿ ಯುವಕರಿಗೆ ಕೆಳಗೆ ತಿಳಿಸಿದ ಪ್ರಯೋಜನಗಳನ್ನು ಒದಗಿಸಲಾಗುವುದು:-
ನಿರುದ್ಯೋಗಿ ಪದವೀಧರ ಯುವಕರಿಗೆ ಪ್ರತಿ ತಿಂಗಳು 3,000 ರೂಪಾಯಿ ಮಾಸಿಕ ನಿರುದ್ಯೋಗ ಭತ್ಯೆ, ನಿರುದ್ಯೋಗಿ ಡಿಪ್ಲೊಮಾ ಹೊಂದಿರುವ ಯುವಕರಿಗೆ ಪ್ರತಿ ತಿಂಗಳು 1,500 ರೂಪಾಯಿ ಮಾಸಿಕ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
ಈ ಯೋಜನೆಯ ಅರ್ಹತೆ
* ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
* ಅರ್ಜಿದಾರರು ಪದವೀಧರರಾಗಿರಬೇಕು ಅಥವಾ ಡಿಪ್ಲೊಮಾ ಹೊಂದಿರುವವರಾಗಿರಬೇಕು.
* ಅರ್ಜಿದಾರರು 2022-2023 ರಲ್ಲಿ ಅವನ / ಅವಳ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು.
* ಅರ್ಜಿದಾರರು ಪದವಿ ಅಥವಾ ಡಿಪ್ಲೊಮಾ ತೇರ್ಗಡೆಯಾದ ದಿನಾಂಕದ ನಂತರ ಕನಿಷ್ಠ 180 ದಿನಗಳವರೆಗೆ ನಿರುದ್ಯೋಗಿಯಾಗಿರಬೇಕು.
ಯಾರು ಈ ಯೋಜನೆಗೆ ಅನರ್ಹರು?
* ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣವನ್ನು ಮುಂದುವರಿಸುವ ಯುವಕರು.
* ಅಪ್ರೆಂಟಿಸ್ ವೇತನದ ಫಲಾನುಭವಿ.
* ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಯುವಕರು.
* ಸ್ವಯಂ ಉದ್ಯೋಗಿಗಳಾಗಿರುವ ಯುವಕರು.
* ಸರ್ಕಾರದ ಇತರೆ ಆರ್ಥಿಕ ನೆರವು ಯೋಜನೆಯ ಫಲಾನುಭವಿ.


Click it and Unblock the Notifications