ಜೂನ್ 1ರ ಸೋಮವಾರದಿಂದ ಅನ್ವಯ ಆಗುವಂತೆ ಅಂತರರಾಜ್ಯ ಪ್ರಯಾಣಕ್ಕೆ ಸಂಬಂಧಿಸಿದ ಹಾಗೆ ಕರ್ನಾಟಕ ಸರ್ಕಾರವು ಭಾನುವಾರ 'ಪ್ರೊಟೋಕಾಲ್' ಪರಿಷ್ಕೃತಗೊಳಿಸಿದೆ. ಜೂನ್ 1ನೇ ತಾರೀಕಿನಿಂದ 'Unlock 1' ಆರಂಭವಾಗಲಿದೆ. ಅಂದರೆ, ಕೊರೊನಾದ ಕಾರಣಕ್ಕೆ ಇಷ್ಟು ಸಮಯ ಯಾವ್ಯಾವುದಕ್ಕೆ ನಿರ್ಬಂಧ ಹೇರಲಾಗಿತ್ತೋ ಅವೆಲ್ಲವನ್ನೂ ಹಂತಹಂತವಾಗಿ ಹಿಂತೆಗೆದುಕೊಳ್ಳಲು ಆರಂಭಿಸಲಾಗುತ್ತದೆ.
ಅಂತರರಾಜ್ಯ ಪ್ರಯಾಣಿಕರು ಸೋಮವಾರದಿಂದ ಸೇವಾ ಸಿಂಧು ಅಪ್ಲಿಕೇಷನ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಲೇಬೇಕು. ಆದರೆ ಅನುಮತಿಯ (ಅಥವಾ ಇ ಪಾಸ್) ಅಗತ್ಯ ಇಲ್ಲ. ಆದರೆ ಪ್ರಯಾಣಿಕರಲ್ಲಿ ಕೊರೊನಾ ಸೋಂಕಿನ ರೋಗಿಗಳಿಗೆ ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಪ್ರತ್ಯೇಕ ವಾಸ ಹಾಗೂ ತಕ್ಷಣ ಕೋವಿಡ್- 19 ಪರೀಕ್ಷೆ ಮಾಡಿಸಬೇಕು.
ಇನ್ನು ಮಹಾರಾಷ್ಟ್ರದಿಂದ ಬರುವಂಥ, ಕೊರೊನಾ ಸೋಂಕಿನ ಯಾವುದೇ ಲಕ್ಷಣ ಇಲ್ಲದವರಿಗೆ ಏಳು ದಿನಗಳ ಸಾಂಸ್ಥಿಕ (ಇನ್ ಸ್ಟಿಟ್ಯೂಷನಲ್) ಕ್ವಾರಂಟೈನ್ ನಿಂದ ವಿನಾಯಿತಿ ಇದೆ. ಆದರೆ ಅಂತಹವರು ಹದಿನಾಲ್ಕು ದಿನ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕು.

ಕುಟುಂಬದಲ್ಲಿ ಸಾವು ಸಂಭವಿಸಿದವರು, ಗರ್ಭಿಣಿಯರು, ಹತ್ತು ವರ್ಷದ ಒಳಗಿನ ಮಕ್ಕಳು, ಅರವತ್ತು ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಗಂಭೀರವಾದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಹೋಮ್ ಕ್ವಾರಂಟೇನ್ ಅನ್ವಯ ಆಗುತ್ತದೆ.
ಮಹಾರಾಷ್ಟ್ರದಿಂದ ಬರುವಂಥ ಉದ್ಯಮಿಗಳು, ವ್ಯಾಪಾರಿಗಳು- ವರ್ತಕರಿಗೆ ಕೈ ಮೇಲೆ ಸ್ಟ್ಯಾಂಪ್ ಹಾಕುವುದಿಲ್ಲ. ಆದರೆ ಅವರು ಕೋವಿಡ್ ಪರೀಕ್ಷೆ ಮಾಡಿಸಿ, ನೆಗೆಟಿವ್ ಎಂಬ ವರದಿಯ ಸರ್ಟಿಫಿಕೇಟ್ ಇಟ್ಟುಕೊಂಡಿರಬೇಕು ಹಾಗೂ ಏಳು ದಿನಗಳ ಒಳಗಾಗಿ ಹಿಂತಿರುಗುವ ಟಿಕೆಟ್ ಮಾಡಿಸಿರಬೇಕು.
ಇತರ ಎಲ್ಲ ರಾಜ್ಯಗಳಿಂದ ಬರುವಂಥ ಪ್ರಯಾಣಿಕರಿಗೆ ಹದಿನಾಲ್ಕು ದಿನಗಳ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ಹೇಳಿದೆ.


Click it and Unblock the Notifications