ಕನಿಷ್ಠ 9 ಜಿಲ್ಲೆಗಳನ್ನು ಮಾರ್ಚ್ 31ನೇ ತಾರೀಕಿನ ತನಕ ಬಂದ್ ಮಾಡಲು ಕರ್ನಾಟಕ ಸರ್ಕಾರವು ಭಾನುವಾರ ನಿರ್ಧರಿಸಿದೆ. ಕನಿಷ್ಠ ಒಂದು ಕೊರೊನಾ ಸೋಂಕಿತ ಪ್ರಕರಣ ದಾಖಲಾಗಿರುವ ಜಿಲ್ಲೆ ಎಂಬುದನ್ನು ಆಧಾರವಾಗಿಟ್ಟುಕೊಂಡು, ಬಂದ್ ಮಾಡಲು ತೀರ್ಮಾನಿಸಲಾಗಿದೆ. ದೇಶದ 75 ಜಿಲ್ಲೆಗಳಲ್ಲಿ ಈ ರೀತಿ ಬಂದ್ ಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದು, ಈ ರೀತಿ ಬಂದ್ ವೇಳೆ ಅಗತ್ಯ ಸೇವೆ ಮಾತ್ರ ದೊರೆಯಲಿದೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಕಲಬುರಗಿ, ಕೊಡಗು, ಚಿಕ್ಕಬಳ್ಳಾಪುರ, ಮೈಸೂರು, ಬೆಳಗಾವಿ ಮತ್ತು ಧಾರವಾಡದಲ್ಲಿ ಮಾರ್ಚ್ 31ನೇ ತಾರೀಕಿನ ತನಕ ತುರ್ತು ಸೇವೆಗಳು ಮಾತ್ರ ದೊರೆಯಲಿದ್ದು, ಯಾವುದೇ ವಾಣಿಜ್ಯ ಚಟುವಟಿಕೆಗಳು ನಡೆಸುವಂತಿಲ್ಲ ಎಂದಿದ್ದಾರೆ.
ಮೆಡಿಕಲ್ ಸ್ಟೋರ್, ದಿನಸಿ ಮತ್ತು ಕೃಷಿ ಸೇವೆಗಳು
ಕಾರ್ಮಿಕರ ಅಗತ್ಯ ಕಡ್ಡಾಯ ಇರುವ ಕಡೆಗಳಲ್ಲಿ ಪೂರ್ಣ ಸಾಮರ್ಥ್ಯಕ್ಕಿಂತ 50 ಪರ್ಸೆಂಟ್ ಗೂ ಕಡಿಮೆ ಇದ್ದರೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಮೆಡಿಕಲ್ ಸ್ಟೋರ್, ದಿನಸಿ ಮತ್ತು ಕೃಷಿ ಸೇವೆಗಳು ಹೊರತುಪಡಿಸಿ ಉಳಿದೆಲ್ಲವೂ ಮುಚ್ಚಲಾಗುತ್ತದೆ. ಅಂದ ಹಾಗೆ ಈ ವರೆಗೆ ಕರ್ನಾಟಕದಲ್ಲಿ 15 ಪ್ರಕರಣಗಳು ವರದಿಯಾಗಿವೆ.
ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಇರುವುದಿಲ್ಲ
ಸೋಮವಾರದಂದು ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಇರುವುದಿಲ್ಲ. ಏರ್ ಕಂಡೀಷನ್ ಬಸ್ ಗಳು ಈ ತಿಂಗಳ ಕೊನೆ ತನಕ ಕಾರ್ಯ ನಿರ್ವಹಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಒಂಬತ್ತರಿಂದ ಹನ್ನೆರಡು ಗಂಟೆ ತನಕ ಸೆಕ್ಷನ್ 144 ಹಾಕಲಾಗಿದೆ.
ಒಂಬತ್ತು ಜಿಲ್ಲೆಗಳಿಗೆ ಬಸ್ ಸೇವೆ ಇರುವುದಿಲ್ಲ
ಇನ್ನು ಮೇಲೆ ತಿಳಿಸಲಾದ ಒಂಬತ್ತು ಜಿಲ್ಲೆಗಳಿಗೆ ಬಸ್ ಸೇವೆ ಇರುವುದಿಲ್ಲ. ಇನ್ನು ಅಂತರರಾಜ್ಯ ಗಡಿ ಭಾಗವನ್ನು ಮುಚ್ಚುವುದಕ್ಕೆ ಸಹ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಇನ್ನು ಎರಡು ತಿಂಗಳಿಗಾಗುವಷ್ಟು ದಿನಸಿಯನ್ನು ನ್ಯಾಯಬೆಲೆ ಅಂಗಡಿ ಮೂಲಕ ಮುಂಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.
ಹತ್ತನೇ ತರಗತಿ ಪರೀಕ್ಷೆ ಮುಂದೂಡಿಕೆ
ಮಾರ್ಚ್ 27ನೇ ತಾರೀಕಿನಿಂದ ಆರಂಭವಾಗಬೇಕಿದ್ದ ಹತ್ತನೇ ತರಗತಿ ಪರೀಕ್ಷೆಯನ್ನು ಮುಂದಿನ ಆದೇಶ ನೀಡುವ ತನಕ ಮುಂದೂಡಲಾಗಿದೆ. ಇನ್ನು ಕೊರೊನಾ ಪರೀಕ್ಷೆಗಾಗಿ ಹೆಚ್ಚು ಲ್ಯಾಬ್ ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಶನಿವಾರದ ತನಕ ಲೆಕ್ಕ ಹೇಳುವುದಾದರೆ ಕರ್ನಾಟಕದಲ್ಲಿ 1377 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.


Click it and Unblock the Notifications