ಕಳೆದ 2 ತಿಂಗಳಿನಲ್ಲಿ ದೇಶದ ಜಿಎಸ್‌ಟಿ ಸಂಗ್ರಹವು 1 ಲಕ್ಷ ಕೋಟಿ ದಾಟಿದ್ರೂ, ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುವ 2ನೇ ರಾಜ್ಯ ಕರ್ನಾಟಕಕ್ಕೆ ಮತ್ತೊಮ್ಮೆ ಜಿಎಸ್‌ಟಿ ಪರಿಹಾರ ವಿಳಂಭವಾಗಿದ್ದು, ಅಧಿಕಾರಿಗಳು ಆತಂಕದಲ್ಲಿದ್ದಾರೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವು ಸತತ 2ನೇ ತಿಂಗಳು 1 ಲಕ್ಷ ಕೋಟಿ ರುಪಾಯಿ ದಾಟಿದ್ದು, ಕಳೆದ ಡಿಸೆಂಬರ್‌ನಲ್ಲಿ 1.03 ಲಕ್ಷ ಕೋಟಿ ರುಪಾಯಿ ತೆರಿಗೆ ಸಂಗ್ರಹವಾಗಿದೆ. ಈ ಒಟ್ಟು ಸಂಗ್ರಹದಲ್ಲಿ ಮಹಾರಾಷ್ಟ್ರದ ಪಾಲು ಮೊದಲಾಗಿದ್ದು, ಕರ್ನಾಟಕ 2ನೇ ಸ್ಥಾನ ಪಡೆದಿದೆ. ಇಷ್ಟಾದ್ರೂ ರಾಜ್ಯಕ್ಕೆ ನೀಡುವ ಜಿಎಸ್‌ಟಿ ಪರಿಹಾರ ಇನ್ನೂ ಪಾವತಿಯಾಗಿಲ್ಲ. ಅಕ್ಟೋಬರ್-ನವೆಂಬರ್ ತಿಂಗಳ ಸುಮಾರು 3,300 ಕೋಟಿ ರುಪಾಯಿ ಇನ್ನೂ ತಲುಪಿಲ್ಲ.

ಅಕ್ಟೋಬರ್-ನವೆಂಬರ್ ತಿಂಗಳ ಜಿಎಸ್‌ಟಿ ಪರಿಹಾರವನ್ನು ಡಿಸೆಂಬರ್ 31ರ ಒಳಗೆ ಪಾವತಿಸಲು ನಿರ್ಧರಿಸಲಾಗಿತ್ತು. ಆದರೆ ಇನ್ನೂ ಪಾವತಿಯಾಗಿಲ್ಲ, ಇನ್ನು ಡಿಸೆಂಬರ್-ಜನವರಿಯ ಪರಿಹಾರ ಮೊತ್ತ ಅಂದಾಜು 3,200 ಕೋಟಿ ರುಪಾಯಿ ಈ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಜಿಎಸ್‌ಟಿ ಪರಿಹಾರ ಮೊತ್ತದ ಸತತ ವಿಳಂಬದಿಂದಾಗಿ ಅಧಿಕಾರಿಗಳು ಆತಂಕಗೊಂಡಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಪತ್ರಗಳನ್ನು ರವಾನಿಸಿದ್ದು, ಪರಿಹಾರ ವಿಳಂಬಕ್ಕೆ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ ಎಂದು ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.


Click it and Unblock the Notifications