ಜಾಗತಿಕ ದರ್ಜೆಯ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರವಾದ ಕೆಎಚ್ಐಆರ್ ಸಿಟಿ ಅನ್ನು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗಾಗಿ ಸುಮಾರು 40 ಸಾವಿರ ಕೋಟಿ ರೂಪಾಯಿ ಹೂಡಿಕೆಯನ್ನು ಮಾಡಲಾಗುತ್ತದೆ. ಹಾಗೆಯೇ ಉದ್ಯೋಗ ಸೃಷ್ಟಿಯನ್ನು ಕೂಡಾ ಮಾಡಲಾಗುತ್ತದೆ.
ಈ ಬಗ್ಗೆ ಟ್ವಿಟ್ಟರ್ ಮೂಲಕ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ. "ಜಾಗತಿಕ ದರ್ಜೆಯ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರ (#ಕೆಎಚ್ಐಆರ್ ಸಿಟಿ)ವನ್ನು ಅಭಿವೃದ್ಧಿ ಪಡಿಸಲಾಗುವುದು. 40 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗಿ 80 ಸಾವಿರದಿಂದ 1 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ," ಎಂದು ತಿಳಿಸಿದರು.

"2 ಸಾವಿರ ಎಕರೆ ವಿಸ್ತೀರ್ಣ, ಮೊದಲ ಹಂತದಲ್ಲಿ ಸಾವಿರ ಎಕರೆಯಲ್ಲಿ ಸಾಕಾರವಾಗಲಿದೆ. ಹಿಂದಿನಿಂದಲೂ ರಾಜ್ಯವು ಕೈಗಾರಿಕಾವಲಯದಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುತ್ತಲೇ ಬಂದಿದೆ. ಇದಕ್ಕೆ ನಾವು ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ, ಐಟಿಪಿಎಲ್‌ಗಳನ್ನು ಉಲ್ಲೇಖಿಸಬಹುದು. ಈಗ ಉದ್ದೇಶಿತ ಕೆಎಚ್‌ಐಆರ್ ಸಿಟಿ ರಾಜಧಾನಿಯಿಂದ 60-80 ಕಿ.ಮೀ. ದೂರದಲ್ಲಿಯೇ ನಿರ್ಮಾಣವಾಗಲಿದೆ," ಎಂದು ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದರು.
ಕೆಎಚ್‌ಐಆರ್ ಸಿಟಿ ಹೇಗಿರಲಿದೆ?
ಸಿಂಗಾಪುರದ ಬಯೋಪೊಲಿಸ್ ಕ್ಲಸ್ಟರ್ ಮತ್ತು ಜಪಾನ್‌ನ ಕೋಬ್ ಬಯೋಮೆಡಿಕಲ್ ಇನ್ನೋವೇಶನ್ ಕ್ಲಸ್ಟರ್ ಮಾದರಿಯಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಈ ಕೆಎಚ್ಐಆರ್ ಸಿಟಿಯನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಈ ವಿಚಾರವನ್ನು ನಡೆದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ ಎಂಬಿ ಪಾಟೀಲ್ ಮಾಹಿತಿ ನೀಡಿದರು.
"ಭೂ ಗುತ್ತಿಗೆ ಮಾದರಿಗಳು, ವಿಶೇಷ ಯೋಜನೆಗಳು ಮತ್ತು ಸಂಪೂರ್ಣ ಖಾಸಗಿ ಮಾದರಿಗಳ ಮೂಲಕ ಕರ್ನಾಟಕವು ಖಾಸಗಿ ಕಂಪನಿಗಳ ಭಾಗವಹಿಸುವಿಕೆ ವಿಚಾರದಲ್ಲಿ ಫ್ಲೆಕ್ಸಿಬಲ್ ಆಗಿದೆ. ಉದ್ಯೋಗ ಸೃಷ್ಟಿಯನ್ನು ಖಾತ್ರಿಪಡಿಸುವುವ ಗುರಿಯನ್ನು ಈ ಯೋಜನೆ ಹೊಂದಿದೆ," ಎಂದು ಹೇಳಿದರು.
"ಪ್ರಮುಖ ಜಾಗತಿಕ ಮತ್ತು ಭಾರತೀಯ ಆಸ್ಪತ್ರೆಗಳು, ಸಂಶೋಧನಾ ಕೇಂದ್ರಗಳು, ವಿಶ್ವವಿದ್ಯಾನಿಲಯಗಳು ಮತ್ತು ಖಾಸಗಿ ಕಂಪನಿಗಳಿಂದ ಹೂಡಿಕೆಗಳನ್ನು ಪಡೆಯುವುದು, ಆರ್ಥಿಕ ಚಟುವಟಿಕೆ ಹೆಚ್ಚಿಸಿ ರಾಜ್ಯದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಕೊಡುಗೆ ಹೆಚ್ಚಿಸುವ ಸಾಮರ್ಥ್ಯವನ್ನು ಈ ಯೋಜನೆ ಹೊಂದಿದೆ. ಹೂಡಿಕೆಗಳನ್ನು ಆಕರ್ಷಿಸುವುದರ ಜೊತೆಗೆ, ರಾಜ್ಯ ಜಿಡಿಪಿಗೆ ಕನಿಷ್ಠ 1 ಲಕ್ಷ ಕೋಟಿ ರೂಪಾಯಿ ಕೊಡುಗೆ ನೀಡುವ ಗುರಿ ಹೊಂದಿದೆ," ಎಂದು ಪಾಟೀಲ್ ತಿಳಿಸಿದರು.
"ಬೆಂಗಳೂರು ಭಾರತದಲ್ಲಿಯೇ ಅತಿ ಹೆಚ್ಚು ನುರಿತರನ್ನು, ಪ್ರತಿಭಾನ್ವಿತರನ್ನು ಹೊಂದಿದೆ. ಕೆಎಚ್‌ಐಆರ್ ಸಿಟಿಯ ಅಭಿವೃದ್ಧಿಗೆ ಸೂಕ್ತವಾಗಿದೆ. ಕರ್ನಾಟಕವು ಇಲ್ಲಿ ಸ್ಥಾಪಿಸಲಾದ ಅನೇಕ ಜಾಗತಿಕ ಕಂಪನಿಗಳ ಆರ್ & ಡಿ ಘಟಕಗಳೊಂದಿಗೆ ಉತ್ತಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಭಾರತದ ಸುಮಾರು ಶೇಕಡ 60 ರಷ್ಟು ಜೈವಿಕ ತಂತ್ರಜ್ಞಾನ ಕಂಪನಿಗಳು ಕರ್ನಾಟಕದಲ್ಲಿವೆ," ಎಂದು ಹೇಳಿದರು.
"ಕೆಎಚ್‌ಐಆರ್ ಸಿಟಿ ಅತ್ಯಾಧುನಿಕ ಜ್ಞಾನ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು, ಇನೋವಿಟಿವ್ ಹಬ್, ಸಂಶೋಧನಾ ಕೇಂದ್ರಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ನಗರದ ಜಾಗತಿಕ ಸ್ಥಾನವನ್ನು ಹೆಚ್ಚಿಸಲು ಸಿದ್ಧವಾಗಿದೆ. ಕರ್ನಾಟಕವು ಈಗಾಗಲೇ ಆರ್ಥಿಕ ಮೌಲ್ಯದ ದೃಷ್ಟಿಯಿಂದ ಭಾರತದ ಅಗ್ರ ಐದು ರಾಜ್ಯಗಳಲ್ಲಿ ಒಂದಾಗಿದೆ. ಈ ಯೋಜನೆ ದೇಶದಲ್ಲೇ ರಾಜ್ಯದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತವೆ," ಎಂದರು.


Click it and Unblock the Notifications