ಕೇನ್ಸ್ ಟೆಕ್ನಾಲಜಿಯ ಶೇಕಡ 100 ರಷ್ಟು ಸಂಪೂರ್ಣ ಪಾಲುದಾರಿಕೆಯ ಅಂಗಸಂಸ್ಥೆಯಾದ ಕೇನ್ಸ್ ಸೆಮಿಕಾನ್ ಬೇರೆ ಬೇರೆ ರಾಜ್ಯಗಳಲ್ಲಿ ಹೂಡಿಕೆ ಮಾಡುತ್ತಿದೆ. ಕರ್ನಾಟಕದಲ್ಲಿಯೂ ಹೂಡಿಕೆಗೆ ಮುಂದಾಗಿದ್ದು, ಮೈಸೂರಿನ ಚಿಪ್ ಯುನಿಟ್ ಮೇಲೆ ಹೂಡಿಕೆಗೆ ಕೇನ್ಸ್ ಸಜ್ಜಾಗಿದೆ.
ಕೇನ್ಸ್ ಸೆಮಿಕಾನ್ ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಆಂಡ್ ಟೆಸ್ಟಿಂಗ್ (ಒಎಸ್‌ಎಟಿ) ಗಾಗಿ ಹೈದರಾಬಾದ್‌ನಲ್ಲಿರುವ ಸೌಲಭ್ಯದಲ್ಲಿ ಸ್ವಯಂಚಾಲಿತ ಪರೀಕ್ಷಾ ಸಾಧನ (ಎಟಿಇ) ಮತ್ತು ವಿಶ್ವಾಸಾರ್ಹತೆ ಪರೀಕ್ಷಾ ಮಾರ್ಗದೊಂದಿಗೆ 2,850 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ರಘು ಪಣಿಕ್ಕರ್ ಹೇಳಿದ್ದಾರೆ.

ಒಎಸ್‌ಎಟಿಗೆ 13 ಲೈನ್ಸ್‌ಗಳು, ಎಟಿಇ ಮತ್ತು ರಿಲಿಯೇಬಿಲಿಟಿ ಟೆಸ್ಟಿಂಗ್‌ಗಾಗಿ ತಲಾ ಒಂದನ್ನು ಹೊಂದಿರುವ ಸೌಲಭ್ಯದ ಶಿಲಾನ್ಯಾಸ ಸಮಾರಂಭ ಇತ್ತೀಚೆಗೆ ನಡೆದಿದೆ. ಇನ್ನು ಕೇನ್ಸ್ ಸೆಮಿಕಾನ್ ಮೈಸೂರಿನಲ್ಲಿ ಕೋ ಪ್ಯಾಕ್ಡ್ ಆಪ್ಟಿಕ್ಸ್‌ನ ಸಿಲಿಕಾನ್ ಫೋಟೊನಿಕ್ಸ್‌ಗಳ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಕ್ಕಾಗಿ 83.28 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ.
ಕೇನ್ಸ್ ಸೆಮಿಕಾನ್‌ನ ಪೋಷಕ ಸಂಸ್ಥೆ ಕೇನ್ಸ್ ಟೆಕ್ನಾಲಜಿಯು ಮೈಸೂರಿನಲ್ಲಿ ಬೇರ್ ಬೋರ್ಡ್ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಪ್ಲಾಂಟ್‌ಗಾಗಿ 750 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಮೈಸೂರು ಮೂಲದ ಕೇನ್ಸ್ ಟೆಕ್ನಾಲಜಿ 3,500 ಜನರನ್ನು ಹೊಂದಿದ್ದು, ವಾರ್ಷಿಕ ಆದಾಯ 1,665.71 ಕೋಟಿ ರೂಪಾಯಿ ಆಗಿದೆ ಎಂದು ರಘು ಪಣಿಕ್ಕರ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಫಾಕ್ಸ್‌ಕಾನ್ ಹೂಡಿಕೆ
ಫಾಕ್ಸ್‌ಕಾನ್ ಎಂದೇ ಪ್ರಸಿದ್ಧವಾದ ತೈವಾನ್ ಮೂಲದ ಹೊನ್ ಹೈ ಟೆಕ್ನಾಲಜಿ ಗ್ರೂಪ್ ಎರಡು ಉತ್ಪಾದನಾ ಯೋಜನೆಗಳಿಗಾಗಿ ಕರ್ನಾಟಕದಲ್ಲಿ 600 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಈ ಪೈಕಿ ಒಂದು ಯೋಜನೆಯು ಯುಎಸ್ ಮೂಲದ ಉತ್ಪಾದನಾ ಕಂಪನಿಯಾದ ಅಪ್ಲೈಡ್ ಮೆಟೀರಿಯಲ್ಸ್ ಸಹಭಾಗಿತ್ವದಲ್ಲಿ ಮಾಡಲಾಗುತ್ತದೆ ಎಂದು ಇತ್ತೀಚೆಗೆ ಮಾಹಿತಿ ನೀಡಲಾಗಿದೆ.
ಇನ್ನು ಈ ಹಿಂದೆ ಕರ್ನಾಟಕ ಸರ್ಕಾರವು ಇನ್ನೊಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈಗಾಗಲೇ ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿ (ಐಬಿಸಿ)ಯೊಂದಿಗಿನ ಬ್ಯಾಟರಿ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸುವ ಒಪ್ಪಂದ ಇದಾಗಿದೆ.
8,000 ಕೋಟಿ ರೂಪಾಯಿ ಅಥವಾ 971.89 ಮಿಲಿಯನ್ ಡಾಲರ್ ಹೂಡಿಕೆಯ ಒಪ್ಪಂದಕ್ಕೆ ಸರ್ಕಾರ ಸಹಿ ಮಾಡಿದ್ದು, ಈ ಘಟಕವು 100 ಎಕರೆ ಪ್ರದೇಶದಲ್ಲಿ ಇರಲಿದೆ ಎಂದು ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆಗಳು, ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಖಚಿತಪಡಿಸಿದ್ದಾರೆ.


Click it and Unblock the Notifications