ಆಫೀಸಿನಲ್ಲಿ ಕೆಲಸ ಮಾಡುವ ಅವರು ಒಂದು ಕಡೆಯಿಂದ ಎಲ್ಲರಿಗೂ ಕಡ್ಲೇಮಿಠಾಯಿ ಹಂಚುತ್ತಾ ಬಂದರು. "ಅದೇನು ಬೆಂಗಳೂರಿನಲ್ಲಿ ಸಿಗದ ಚಿಕ್ಕಿಯಾ ಇದು?" ಎಂಬಂತೆ ನೋಡಿದ್ದಾಯಿತು. ಆದರೆ ಅವರು ಹಂಚಿದ್ದು ಕೋವಿಲ್ ಪಟ್ಟಿ ಕಡಲೈ ಮಿಠಾಯಿ. ಅದನ್ನು ತಂದಿದ್ದು ಸುಬ್ಬರಾಯ ಚೆಟ್ಟಿ ದೇವರ್ ಕಡೈಯಿಂದ. ಅದರ ಜತೆಗೆ ಖಾರ ಕೂಡ ತಂದಿದ್ದರು.
ತಮಿಳುನಾಡಿನ ಮದುರೈಗೆ ಸ್ವಲ್ಪ ದೂರದಲ್ಲಿ ಇರುವ ಈ ಸ್ಥಳದಲ್ಲಿನ ಕಡ್ಲೇಮಿಠಾಯಿ ಬಲು ರುಚಿ. ಕೋವಿಲ್ ಪಟ್ಟಿ 'ಕಡಲೈ ಮಿಠಾಯ್' ಅಂತಲೇ ಬಲು ಪ್ರಸಿದ್ಧ. ಕಡ್ಲೇಬೀಜ, ಬೆಲ್ಲ, ಏಲಕ್ಕಿ ಹಾಕಿ ಮಾಡುವ ಬರ್ಫಿ ಕೋವಿಲ್ ಪಟ್ಟಿಯ ಹಲವು ಅಂಗಡಿಗಳಲ್ಲಿ ಮಾರಾಟಕ್ಕೆ ದೊರೆಯುತ್ತದೆ. ಗುಣಮಟ್ಟ, ರುಚಿ ಮತ್ತು ಸ್ವಾದದಲ್ಲಿ ಇಲ್ಲಿನ ಕಡ್ಲೇಮಿಠಾಯಿಗೆ ಬೇರೆ ಯಾವುದೇ ಸಾಟಿಯಿಲ್ಲ್. ಇಡೀ ಊರೇ ಮಿಠಾಯಿಯ ಹೆಸರಿನ ಜತೆಗೆ ತಳುಕು ಹಾಕಿಕೊಂಡಿದೆ.
ಇನ್ನೂರು- ಇನ್ನೂರೈವತ್ತು ಗ್ರಾಮ್ ತೂಕದ ಪ್ಯಾಕೆಟ್
ಕೋವಿಲ್ ಪಟ್ಟಿ ಕಡ್ಲೇಮಿಠಾಯಿ ಪರಿಚಯ ಆಗಿದ್ದು ಅರವತ್ತೈದು ವರ್ಷಗಳ ಹಿಂದೆ. ಮೊದಲಿಗೆ ಕೆಲವೇ ಕಂಪೆನಿಗಳು ಇಲ್ಲಿ ಕಡ್ಲೇಮಿಠಾಯಿ ತಯಾರು ಮಾಡುತ್ತಿದ್ದವು. ಕ್ರಮೇಣ ನೂರಾರು ಕಂಪೆನಿಗಳು ಅಲ್ಲಿ ತಲೆ ಎತ್ತಿವೆ. ಇವುಗಳನ್ನು ಸಣ್ಣ ತುಂಡುಗಳಾಗಿ ಮಾಡಿ, ಇನ್ನೂರು- ಇನ್ನೂರೈವತ್ತು ಗ್ರಾಮ್ ತೂಕದ ಪ್ಯಾಕೆಟ್ ಗಳನ್ನಾಗಿ ಮಾಡುವುದನ್ನು ಗ್ರಾಹಕರೂ ಇಷ್ಟಪಡುತ್ತಾರೆ.
ಮದುವೆ ಊಟದಲ್ಲೂ ಈ ತಿನಿಸಿಗೆ ಸ್ಥಾನ ಉಂಟು
ಕೋವಿಲ್ ಪಟ್ಟಿಗೆ ಭೇಟಿ ನೀಡುವ ಯಾರಾದರೂ ಸರಿ, ಇಲ್ಲಿಂದ ಕಡ್ಲೇಮಿಠಾಯಿ ತೆಗೆದುಕೊಂಡು ಹೋಗುವುದನ್ನು ಮರೆಯುವುದಿಲ್ಲ. ಅಷ್ಟೇ ಅಲ್ಲ, ಮದುವೆ ಊಟದಲ್ಲೂ ಈ ತಿನಿಸಿಗೆ ಸ್ಥಾನ ಉಂಟು. ತಮಿಳುನಾಡು ಸೇರಿದಂತೆ ಭಾರತದ ಇತರ ರಾಜ್ಯಗಳಲ್ಲಷ್ಟೇ ಅಲ್ಲ, ದುಬೈ, ಯು.ಎಸ್.ಎ., ಯುರೋಪಿಯನ್ ರಾಷ್ಟ್ರಗಳಿಗೂ ಇಲ್ಲಿಂದ ಕಡ್ಲೇಮಿಠಾಯಿ ರಫ್ತಾಗುತ್ತದೆ.
ಐದು ಸಾವಿರ ಕುಟುಂಬಗಳಿಗೆ ನೇರವಾದ ಪ್ರಯೋಜನ
ಇನ್ನು ಈ ಮಿಠಾಯಿಗೆ ಬಳಸುವ ಕಡ್ಲೇಬೀಜ ಬೆಳೆಯುವುದು ಅರುಪ್ಪುಕೋಟ್ಟೈ, ಕಳುಗುಮಲೈ ಮತ್ತು ಸಥನ್ ಕುಲಂನಲ್ಲಿ. ನೀರು ಮತ್ತು ಬೆಲ್ಲ ಸೇಲಂನದು. ಐದು ಸಾವಿರದಷ್ಟು ಕುಟುಂಬಗಳು ನೇರವಾಗಿ ಈ ವ್ಯಾಪಾರದಿಂದ ಅನುಕೂಲ ಪಡೆಯುತ್ತಿದ್ದರೆ, ಹತ್ತು ಸಾವಿರದಷ್ಟು ಕುಟುಂಬ ಪರೋಕ್ಷವಾಗಿ ಅನುಕೂಲ ಪಡೆಯುತ್ತಿವೆ.
ವಿಟಮಿನ್, ಖನಿಜಾಂಶಗಳು ಒಳಗೊಂಡಿರುವ ಕಡ್ಲೇಮಿಠಾಯಿ
ಸಿಹಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆ ಸಾಮಾನ್ಯವಾಗಿದೆ. ಆದರೆ ವಿಟಮಿನ್ ಮತ್ತು ಖನಿಜಾಂಶಗಳು ಒಳಗೊಂಡಿರುವ ಈ ಕಡ್ಲೇಮಿಠಾಯಿ ಆರೋಗ್ಯಕ್ಕೂ ಉತ್ತಮ ಎನ್ನುತ್ತಾರೆ. ದೇಹಕ್ಕೆ ಅಗತ್ಯ ಇರುವ ಉತ್ತಮ ಕೊಬ್ಬಿನಂಶವನ್ನು ಕಡ್ಲೇಮಿಠಾಯಿ ಪೂರೈಸುತ್ತದೆ ಎನ್ನುತ್ತಾರೆ ಸಂಶೋಧಕರು.


Click it and Unblock the Notifications