ಅತಿ ಹೆಚ್ಚು ಆದಾಯ ಪಡೆದ ಮುಜರಾಯಿ ದೇವಸ್ಥಾನಗಳದೊಂದು ಪಟ್ಟಿಯನ್ನು ಪ್ರತಿ ವರ್ಷ ಕರ್ನಾಟಕದ ಮುಜರಾಯಿ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತದೆ. ಕಳೆದ ಕೆಲ ವರ್ಷದಿಂದ ಆ ಪಟ್ಟಿಯ ಮೊದಲ ಸ್ಥಾನವು ಯಾವ ದೇವಸ್ಥಾನಕ್ಕೆ ಬಂದಿದೆ ಎಂಬುದನ್ನು ಮತ್ತೊಮ್ಮೆ ಪರೀಕ್ಷೆ ಮಾಡುವ ಅಗತ್ಯವೂ ಇಲ್ಲದಂತೆ ಈ ಸ್ಥಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಳವು ನಿಂತಿದೆ.
ವರ್ಷಕ್ಕೆ 90 ಕೋಟಿ ರುಪಾಯಿ ಆದಾಯ ಬರುವುದು ಖಂಡಿತಾ ಸುಲಭದ ಮಾತಲ್ಲ. ಇದನ್ನು ಬರೀ ಆದಾಯದ ದೃಷ್ಟಿಯಿಂದ ಮಾತ್ರ ನೋಡಬೇಕಾ? ಆ ಆದಾಯದ ಮೂಲ ಇರುವುದು ಆ ಕ್ಷೇತ್ರದ ಮೇಲೆ ಇರುವ ನಂಬಿಕೆ ಮೇಲೆ. ಈ ಕ್ಷೇತ್ರಕ್ಕೆ ದಿನಕ್ಕೆ ಸರಾಸರಿ 20 ಸಾವಿರ ಮಂದಿ ಭೇಟಿ ನೀಡುತ್ತಾರೆ. ರಜಾ ದಿನಗಳ ಸಂದರ್ಭದಲ್ಲಿ ಆ ಸಂಖ್ಯೆ 50 ಸಾವಿರಕ್ಕೆ ಏರುತ್ತದೆ.
ಇನ್ನು ವಿಶೇಷ ಸಂದರ್ಭದಲ್ಲಿ ಅಂದರೆ ಹಬ್ಬ- ಹರಿದಿನಗಳ ವೇಳೆ 1 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ. ನಾಗರ ಪಂಚಮಿ, ಚಂಪಾ ಷಷ್ಠಿ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಪರೀತ ಆಂದರೆ ವಿಪರೀತ ಜನ.
ದೋಷ ನಿವಾರಣೆಗೆ ಇರುವ ಏಕೈಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ
ಇಡೀ ಭಾರತದಲ್ಲಿ ರಾಹು- ಕೇತು ಈ ಎರಡು ಛಾಯಾಗ್ರಹಗಳ ದೋಷ ನಿವಾರಣೆಗೆ ಇರುವ ಏಕೈಕ ಕ್ಷೇತ್ರ್ ಕುಕ್ಕೆ ಸುಬ್ರಹ್ಮಣ್ಯ ಎಂಬ ಧಾರ್ಮಿಕ ನಂಬಿಕೆ ಆಳವಾಗಿ ಬೇರೂರಿದೆ. ಕಾಳಹಸ್ತಿ, ಘಾಟಿ ಸುಬ್ರಹ್ಮಣ್ಯ ಮತ್ತಿತರ ಕಡೆಗಳಲ್ಲಿ ರಾಹು- ಕೇತು ದೋಷಕ್ಕೆ ಪರಿಹಾರ ಪೂಜೆಗಳನ್ನು ಮಾಡುತ್ತಾರೆ. ಆದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆ ದೋಷ ಪರಿಹಾರ ಪರಿಣಾಮಕಾರಿಯಾಗಿ ಆಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಅದಕ್ಕೆ ಸಾಕ್ಷಿ ಏನೆಂದರೆ ಇಲ್ಲಿಗೆ ಬಂದು ಅಶ್ಲೇಷ ಬಲಿ, ಸರ್ಪ ದೋಷ ಶಾಂತಿ, ಸರ್ಪ ಸಂಸ್ಕಾರ ಸೇರಿದಂತೆ ನಾನಾ ಬಗೆಯ ಪರಿಹಾರಗಳನ್ನು ಮಾಡಿಸಿಕೊಳ್ಳುವವರ ಸಂಖ್ಯೆ.
ಚರ್ಮ ವ್ಯಾಧಿ, ವಿವಾಹ ವಿಳಂಬ, ಸಂತಾನ ವಿಳಂಬಕ್ಕೂ ಹರಕೆ
ಕಷ್ಟ, ಸಮಸ್ಯೆ ಎಂದಾಕ್ಷಣ ದೇವರಿಗೆ ಹರಕೆ ಹೊರುವುದನ್ನು ಕೇಳಿರುತ್ತೀರಿ. ಆದರೆ ಕೆಲವು ನಿರ್ದಿಷ್ಟ ಸಮಸ್ಯೆಗಳಿಗೆ ಕುಕ್ಕೆ ಸುಬ್ರಹ್ಮಣ್ಯ ದೇವರಿಗೇ ಹರಕೆ ಹೊರುವ ವಿಚಾರ ಗೊತ್ತೆ? ಚರ್ಮ ವ್ಯಾಧಿ, ವಿವಾಹ ವಿಳಂಬ, ಸಂತಾನ ವಿಳಂಬ... ಇಂಥ ಸಮಸ್ಯೆಗೆ ಪರಿಹಾರ ಎಂದು ಜನ ಸಾಮಾನ್ಯರು ಭಾವಿಸುವುದು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವನ್ನೇ. ಆ ಕಾರಣಕ್ಕೆ ಸಮಸ್ಯೆ ಎಂದು ಭಾವಿಸಿದ ತಕ್ಷಣ ಸುಬ್ರಹ್ಮಣ್ಯ ಸ್ವಾಮಿಗೆ ಹರಕೆ ಹೊತ್ತುಕೊಳ್ಳುತ್ತಾರೆ. ಮತ್ತೂ ಕೆಲವರು ಹರಕೆ ಹೊತ್ತುಕೊಳ್ಳಲಿ, ಬಿಡಲಿ ವರ್ಷಾವರ್ಷ ಇಂತಿಷ್ಟು ಹಣ ಅಥವಾ ಹಣದ ಮೌಲ್ಯದಷ್ಟು ವಸ್ತು ಎಂದು ದೇವಸ್ಥಾನಕ್ಕೆ ಸಮರ್ಪಣೆ ಮಾಡುತ್ತಾರೆ.
ತುಲಾಭಾರ ನಡೆಸುವವರು ವರ್ಷಪೂರ್ತಿ ಇದ್ದೇ ಇರುತ್ತಾರೆ
ಈ ಮೇಲಿನದ್ದೆಲ್ಲ ಬೇರೆ ದೇವಸ್ಥಾನಗಳಲ್ಲೂ ಮಾಡುತ್ತಾರಲ್ಲವಾ ಎಂಬ ಪ್ರಶ್ನೆ ಬರಬಹುದಾ? ಆದರೆ ಗೂಗಲ್ ನಲ್ಲಿ ಸರ್ಚ್ ಮಾಡುವುದರಿಂದ ಆರಂಭಿಸಿ, ಯಾವುದೇ ಜ್ಯೋತಿಷಿಗಳನ್ನು ಮಾತನಾಡಿಸಿದರೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಮಾಹಿತಿ ದೊರೆಯುತ್ತದೆ. ಇಡೀ ಭಾರತದಲ್ಲಿ ಈ ರೀತಿಯ ದೇವಸ್ಥಾನ ಇರುವುದು ಒಂದೇ ಅಂತಾದರೆ ಖಚಿತವಾಗಿಯೂ ಅಲ್ಲಿಗೆ ನಡೆದುಕೊಳ್ಳುವವರು ಹೆಚ್ಚಿಗೆ ಇದ್ದೇ ಇರುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಬರುವ ಹುಂಡಿ ಹಣ ಅಷ್ಟು ದೊಡ್ಡ ಮೊತ್ತ ಆಗುವುದಕ್ಕೆ ಅದೂ ಕಾರಣ. ಇದರ ಜತೆಗೆ ತುಲಾಭಾರ ನಡೆಸುವವರು ವರ್ಷಪೂರ್ತಿ ಇದ್ದೇ ಇರುತ್ತಾರೆ.
ಭಾರತದಾದ್ಯಂತ ಜನರು ಬರುತ್ತಾರೆ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಮಾಡಿಸಲು ಕರ್ನಾಟಕವಷ್ಟೇ ಅಲ್ಲ, ಭಾರತದಾದ್ಯಂತ ಜನರು ಬರುತ್ತಾರೆ. ಒಂದೇ ಸಲಕ್ಕೆ ನೂರು- ನೂರೈವತ್ತು ಜನಕ್ಕೆ ಆ ಪೂಜೆ ಮಾಡಿಸಲಾಗುತ್ತದೆ. ಆ ರೀತಿ ಪೂಜೆಯನ್ನು ಮಂಗಳವಾರ- ಷಷ್ಠಿ ಬಂದ ದಿನ ಮಾಡಿಸಿದರೆ ಎರಡ್ಮೂರು ಬ್ಯಾಚ್ ಗಳಲ್ಲಿ ಮಾಡಿಸುತ್ತಾರೆ. ಹಾಗೆ ನೋಡಿದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಖಾಸಗಿಯಾಗಿ ಸರ್ಪಸಂಸ್ಕಾರ, ಸರ್ಪದೋಷ ಶಾಂತಿ ಹಾಗೂ ಆಶ್ಲೇಷ ಬಲಿ ಮಾಡುವುದುಂಟು. ಅವರೆಲ್ಲ ವಿಪರೀತ ಚಾರ್ಜ್ ಮಾಡುತ್ತಾರೆ. ಆದರೆ ದೇವಸ್ಥಾನದ ಕಡೆಯಿಂದಲೇ ಮಾಡಿಸಿದರೆ ಅಷ್ಟು ದೊಡ್ಡ ಮೊತ್ತದ ಖರ್ಚಾಗಲ್ಲ. ನಿಮಗೆ ಗೊತ್ತಿರಲಿ, ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್, ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣೆ, ವರುಣ್ ಗಾಂಧಿ, ದೀಪಿಕಾ ಪಡುಕೋಣೆ, ವಿಜಯ್ ಮಲ್ಯ, ಶಿಲ್ಪಾ ಶೆಟ್ಟಿ, ಐಶ್ವರ್ಯಾ ರೈ ಸೇರಿದಂತೆ ಅನೇಕರು ಈ ದೇವಸ್ಥಾನಕ್ಕೆ ಬಂದಿದ್ದಾರೆ. ದೋಷ ಪರಿಹಾರ ಮಾಡಿಸಿಕೊಂಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯ ಎಷ್ಟು?
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯದ ವಿಚಾರಕ್ಕೆ ಬಂದರೆ, 2007-08ನೇ ಸಾಲಿನಲ್ಲಿ 24.3 ಕೋಟಿ ರುಪಾಯಿ, 2008- 09ರಲ್ಲಿ 35.75 ಕೋಟಿ ರುಪಾಯಿ, 2009-10ರಲ್ಲಿ 44.82 ಕೋಟಿ, 2011-12ನೇ ಸಾಲಿನಲ್ಲಿ 56.24 ಕೋಟಿ, 2012-13ನೇ ಸಾಲಿನಲ್ಲಿ 66.76 ಕೋಟಿ, 2015-16ರಲ್ಲಿ 88.83 ಕೋಟಿ, 2017-18ರಲ್ಲಿ 95.92 ಕೋಟಿ ಸಂಗ್ರಹವಾಗಿದೆ. ಆದರೆ 2018-19ನೇ ಸಾಲಿನಲ್ಲಿ ಸ್ವಲ್ಪ ಮಟ್ಟಿಗೆ ಆದಾಯದಲ್ಲಿ ಕುಸಿತವಾಗಿದ್ದು, 92.09 ಕೋಟಿ ರುಪಾಯಿ ಸಂಗ್ರಹವಾಗಿದೆ. ಈ ಸಂಖ್ಯೆಗಳೇ ಸರ್ಕಾರದ ಪಾಲಿಗೆ ಈ ದೇವಸ್ಥಾನವು ಹೇಗೆ ನಿತ್ಯ ಖಜಾನೆಯಂತಾಗಿದೆ ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ.


Click it and Unblock the Notifications