ದೇಶದ ಅತಿ ದೊಡ್ಡ ವಿಮಾ ಸಂಸ್ಥೆ ಮತ್ತು ಅತಿ ದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಮತ್ತೆ ದಾಖಲೆಯ ಮಟ್ಟಕ್ಕೆ ಕುಸಿತ ಕಂಡಿದೆ. ನಿನ್ನೆಯಷ್ಟೇ ವಹಿವಾಟಿನ ಅಂತ್ಯದ ವೇಳೆಗೆ ಷೇರು ದಾಖಲೆ ಮಟ್ಟಕ್ಕೆ ಕುಸಿದಿತ್ತು. ಇಂದು ಮತ್ತೆ ಆ ದಾಖಲೆಯನ್ನು ಮುರಿದು ಸಾರ್ವಕಾಲಿಕ ಕುಸಿತ ಕಂಡಿದೆ.
ನಿನ್ನೆ ವಹಿವಾಟಿನ ಅಂತ್ಯದಲ್ಲಿ 777.40ರ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಎಲ್‌ಐಸಿ ಷೇರು, ಮಂಗಳವಾರ ವಹಿವಾಟು ಅಂತ್ಯದಲ್ಲಿ 755.60 ರೂಪಾಯಿಗೆ ತಲುಪಿದೆ. ಮಂಗಳವಾರ ವಹಿವಾಟಿನ ಅಂತ್ಯದ ವೇಳೆಗೆ ಬಿಎಸ್‌ಇ ಸೂಚ್ಯಂಕದಲ್ಲಿ ಶೇಕಡ 2.80ರಷ್ಟು ಕುಸಿತ ಕಂಡಿದೆ.
ಇನ್ನು ಎನ್‌ಎಸ್‌ಇಯಲ್ಲಿ ಎಲ್‌ಐಸಿ ಷೇರುಗಳು ಶೇಕಡ 2.66ರಷ್ಟು ಕುಸಿತ ಕಂಡು ರೂಪಾಯಿ 756.70ಕ್ಕೆ ಇಳಿದಿದೆ. ಷೇರು ಮಾರುಕಟ್ಟೆಯಲ್ಲಿ ಮೊದಲ ಲೀಸ್ಟಿಂಗ್ ವೇಳೆಯೇ ಎಲ್‌ಐಸಿ ಭಾರೀ ನಷ್ಟವನ್ನು ಕಂಡಿದೆ. ಆರಂಭದಲ್ಲೇ ರಿಯಾಯಿತಿ ದರದಲ್ಲಿ ಲೀಸ್ಟಿಂಗ್ ಆಗಿದೆ.

ಹೂಡಿಕೆದಾರರಿಗೆ ರೂ. 1.2 ಲಕ್ಷ ಕೋಟಿ ನಷ್ಟ
ಎಲ್‌ಐಸಿ ಹೂಡಿಕೆದಾರರಿಗೆ ಈವರೆಗೆ ರೂಪಾಯಿ 1.2 ಲಕ್ಷ ಕೋಟಿ ನಷ್ಟ ಉಂಟಾಗಿದೆ. ಎಲ್‌ಐಸಿ ಐಪಿಒ ವೇಳೆ ಷೇರಿನ ವಿತರಣೆ ಬೆಲೆ 949 ರೂಪಾಯಿ ಆಗಿತ್ತು. ಹಾಗೆಯೇ ಎಲ್‌ಐಸಿ ಮಾರುಕಟ್ಟೆ ಮೌಲ್ಯವು ಆರು ಲಕ್ಷ ಕೋಟಿ ರೂಪಾಯಿ ಆಗಿತ್ತು. ಆದರೆ ಈಗ ಎಲ್‌ಐಸಿ ಮಾರುಕಟ್ಟೆ ಮೌಲ್ಯವು 4.79 ಲಕ್ಷ ಕೋಟು ರೂಪಾಯಿಗೆ ಇಳಿಕೆ ಕಂಡಿದೆ.
ಜೂನ್ 8ರಂದು ಸಭೆಯ ಬಳಿಕ ಆರ್‌ಬಿಐ ರೆಪೋ ದರವನ್ನು ಮತ್ತೆ ಏರಿಕೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಿಂದಾಗಿ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಕೊಂಚ ದೂರ ಉಳಿದಿದ್ದಾರೆ. ಕೆಲವು ದಿನಗಳಿಂದ ಷೇರು ಮಾರುಕಟ್ಟೆಯು ನಷ್ಟವನ್ನು ಅನುಭವಿಸಿದೆ. ಈ ಮಧ್ಯೆ ಎಲ್‌ಐಸಿ ಷೇರು ಭಾರೀ ನಷ್ಟ ಕಂಡಿದೆ.
ಸೋಮವಾರ ಎಲ್‌ಐಸಿ ಷೇರುಗಳು ಶೇ.2.86ರಷ್ಟು ಕುಸಿದು ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಷೇರುಗಳು ರೂಪಾಯಿ 777.40ರ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಬಿಎಸ್‌ಇ ಸೂಚ್ಯಂಕದಲ್ಲಿ ಷೇರುಗಳು ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಬಿಎಸ್‌ಇ ಸೂಚ್ಯಂಕದಲ್ಲಿ ಷೇರುಗಳು ಕನಿಷ್ಠ ರೂಪಾಯಿ 775.40ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇಯಲ್ಲಿ ಎಲ್‌ಐಸಿ ಶೇ.2.97 ರಷ್ಟು ಕುಸಿತ ಕಂಡು 776.50ಕ್ಕೆ ತಲುಪಿದೆ.


Click it and Unblock the Notifications