ದೇಶದ ಅತಿ ದೊಡ್ಡ ವಿಮಾ ಸಂಸ್ಥೆ ಮತ್ತು ಅತಿ ದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇ.2.86ರಷ್ಟು ಕುಸಿದು ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಷೇರುಗಳು ರೂಪಾಯಿ 777.40ರ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿವೆ.
ಬಿಎಸ್‌ಇ ಸೂಚ್ಯಂಕದಲ್ಲಿ ಷೇರುಗಳು ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಬಿಎಸ್‌ಇ ಸೂಚ್ಯಂಕದಲ್ಲಿ ಷೇರುಗಳು ಕನಿಷ್ಠ ರೂಪಾಯಿ 775.40ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇಯಲ್ಲಿ ಎಲ್‌ಐಸಿ ಶೇ.2.97 ರಷ್ಟು ಕುಸಿತ ಕಂಡು 776.50ಕ್ಕೆ ತಲುಪಿದೆ.
ಎಲ್‌ಐಸಿಯು ಆರಂಭದಲ್ಲಿ ರೂಪಾಯಿ 949 ವಿತರಣೆ ಬೆಲೆಯನ್ನು ಗೊತ್ತು ಮಾಡಿತ್ತು. ಆದರೆ ಈ ಬೆಲೆಯಿಂದ ಎಲ್‌ಐಸಿ ಷೇರುಗಳು ಪ್ರಸ್ತುತ ಶೇಕಡ 18.08 ರಷ್ಟು ಕುಸಿತ ಕಂಡಿದೆ. ಅರ್ಧ ತಿಂಗಳಲ್ಲಿ ಹೂಡಿಕೆದಾರರಿಗೆ ಬರೋಬ್ಬರಿ 1.08 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ.

ಮಾರುಕಟ್ಟೆ ಬಂಡವಾಳ ಭಾರೀ ಕುಸಿತ
ಇಂದು ಷೇರು ಮಾರುಕಟ್ಟೆಯಲ್ಲಿ ಆದ ಕುಸಿತವು ಎಲ್‌ಐಸಿಯ ಮಾರುಕಟ್ಟೆ ಬಂಡವಾಳವನ್ನು ಮೊದಲ ಬಾರಿಗೆ ರೂಪಾಯಿ 5 ಲಕ್ಷ ಕೋಟಿಗಿಂತ ಕೆಳಕ್ಕೆ ಇಳಿಯುವಂತೆ ಮಾಡಿದೆ. ಎಲ್‌ಐಸಿಯ ಮಾರುಕಟ್ಟೆ ಬಂಡವಾಳ ಸೋಮವಾರ ರೂಪಾಯಿ 4.91 ಲಕ್ಷ ಕೋಟಿಗೆ ಕುಸಿದಿದೆ. ರೂಪಾಯಿ 949 ರ ವಿತರಣೆ ಬೆಲೆಯಲ್ಲಿ, ಎಲ್‌ಐಸಿಯ ಮಾರುಕಟ್ಟೆ ಮೌಲ್ಯವು ರೂಪಾಯಿ 6 ಲಕ್ಷ ಕೋಟಿಗಿಂತ ಸ್ವಲ್ಪ ಹೆಚ್ಚಾಗಿದೆ. ಆದರೆ ಈಗ ಮಾರುಕಟ್ಟೆ ಮೌಲ್ಯ ತೀರಾ ಕುಸಿದಿದೆ.
ಎಲ್ಐಸಿ ಷೇರುಗಳು ಮೇ 17 ರಂದು ಷೇರು ಮಾರುಕಟ್ಟೆಯಲ್ಲಿ ಲೀಸ್ಟಿಂಗ್ ಆಗಿದೆ. ಆದರೆ ಈವರೆಗೆ ಬರೀ ನಾಲ್ಕು ಸೆಷನ್‌ಗಳಲ್ಲಿ ಮಾತ್ರ ಎಲ್‌ಐಸಿ ಷೇರುಗಳು ಲಾಭದೊಂದಿಗೆ ವಹಿವಾಟು ಅಂತ್ಯ ಮಾಡಿದೆ. ಇನ್ನು ಕೊನೆಯ ತಿಂಗಳಷ್ಟೇ ಎಲ್‌ಐಸಿಯಲ್ಲಿ ವಾರ್ಷಿಕವಾಗಿ ಶೇಕಡ 17ರಷ್ಟು ಕುಸಿತ ಕಂಡು ಬಂದಿದೆ ಎಂದು ಸಂಸ್ಥೆಯು ಅಧಿಕೃತ ಮಾಹಿತಿ ನೀಡಿದೆ.
ಆದರೆ ಎಲ್‌ಐಸಿಯ ನಿವ್ವಳ ಪ್ರೀಮಿಯಂ ಆದಾಯವು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 1.2 ಲಕ್ಷ ಕೋಟಿ ರೂಪಾಯಿಯಿಂದ 1.4 ಲಕ್ಷ ಕೋಟಿ ರೂಪಾಯಿಗೆ ಏರಿದೆ. ಅಂದರೆ ಶೇಕಡ 17.9 ರಷ್ಟು ಹೆಚ್ಚಾಗಿದೆ. ಇನ್ನು ಲೀಸ್ಟಿಂಗ್ ವೇಳೆಯೇ ಎಲ್‌ಐಸಿಯು ಮೂಲ ಬೆಲೆಗಿಂತ ರಿಯಾಯತಿಯಲ್ಲೇ ಷೇರು ಪೇಟೆಗೆ ಪಾರ್ದಾಪಣೆ ಮಾಡಿದೆ.


Click it and Unblock the Notifications