ಕರ್ನಾಟಕ ಸರ್ಕಾರವು ಬುಧವಾರ ಮಧ್ಯರಾತ್ರಿಯಿಂದ ಲಾಕ್ ಡೌನ್ ನಿಂದ ಕೆಲವು ವಿನಾಯಿತಿಗಳನ್ನು ಘೋಷಿಸಿದೆ. ರಸ್ತೆ ನಿರ್ಮಾಣ, ನೀರಾವರಿ ಕಾಮಗಾರಿ ಹಾಗೂ ಮೆಟ್ರೋ ರೈಲು ನಿರ್ಮಾಣ ಕಾಮಗಾರಿ ಹಾಗೂ ಐ.ಟಿ. ಕಂಪೆನಿಗಳು ಸೇರಿದಂತೆ ಇತರ ವಲಯಗಳಿಗೆ ನಿಯಮಿತ ಸಂಖ್ಯೆಯ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ಸರ್ಕಾರದ ಆದೇಶವು ಏಪ್ರಿಲ್ 23ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.
ಮೊದಲಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರವು ಭಾಗಶಃ ಲಾಕ್ ಡೌನ್ ತೆರವಿಗೆ ನಿರ್ಧರಿಸಿತ್ತು. ಆ ನಂತರ ಯಾವಾಗ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದವೋ ಆಗ ಮೇ 3ನೇ ತಾರೀಕಿನ ತನಕ ಲಾಕ್ ಡೌನ್ ವಿಸ್ತರಿಸುವ ಘೋಷಣೆ ಮಾಡಿತ್ತು. ಇದೀಗ ರಾಜ್ಯ ಸರ್ಕಾರದ ಆದಾಯಕ್ಕೆ ದೊಡ್ಡ ಮಟ್ಟದಲ್ಲಿ ಖೋತಾ ಬಿದ್ದಿರುವುದರಿಂದ ಈ ತೀರ್ಮಾನ ಮಾಡಲಾಗಿದೆ.
ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ನರೇಗಾ ಕಾಮಗಾರಿ ನಡೆಸಬಹುದು, ಪಾಲಿಕೆ ವ್ಯಾಪ್ತಿಯ ಹೊರಗೆ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಬಹುದು. ಆದರೆ ಅಲ್ಲೇ ಇರುವ ಕಾರ್ಮಿಕರನ್ನು ಬಳಸಿ ಕಾಮಗಾರಿ ಕೈಗೊಳ್ಳಬಹುದೇ ಹೊರತು ಹೊರಗಿನಿಂದ ಕರೆತರಬಾರದು.

ಐಟಿ ಮತ್ತು ಐಟಿ ಎನೇಬಲ್ಶ್ ಸೇವೆಗಳನ್ನು ಅಗತ್ಯ ಸಂಖ್ಯೆಯ ಕನಿಷ್ಠ ಸಿಬ್ಬಂದಿಯೊಂದಿಗೆ ಒದಗಿಸಬಹುದು. ಉಳಿದವರು ವರ್ಕ್ ಫ್ರಮ್ ಹೋಮ್ ಮಾಡಬೇಕು ಎನ್ನಲಾಗಿದೆ. ಪ್ಲಂಬರ್ ಗಳು, ಎಲೆಕ್ಟ್ರಿಷಿಯನ್ ಗಳು, ಐಟಿ ರಿಪೇರಿ, ಮೋಟಾರ್ ಮೆಕಾನಿಕ್ ಗಳು, ಕಾರ್ಪೆಂಟರ್ ಗಳು ಸ್ಥಳೀಯವಾಗಿ ಕೆಲಸ ನಿರ್ವಹಿಸಬಹುದು. ಎಲ್ಲೆಲ್ಲಿ ಕೊರೊನಾ ನಿಯಂತ್ರಣದಲ್ಲಿ ಇದೆಯೋ ಅಂಥಲ್ಲಿ ಈ ಆದೇಶ ಅನ್ವಯ ಆಗುತ್ತದೆ.
ಇನ್ನಿತರ ಕಾರ್ಯ ಚಟುವಟಿಕೆಗಳನ್ನು ಆಯಾ ಜಿಲ್ಲಾಡಳಿತದ ಕಠಿಣ ಕಣ್ಗಾವಲಿನಲ್ಲಿ, ಸದ್ಯಕ್ಕೆ ಇರುವ ಲಾಕ್ ಡೌನ್ ನಿಯಮಾವಳಿ ಅಡಿಯಲ್ಲಿ ನಡೆಸಬೇಕು ಎನ್ನಲಾಗಿದೆ.


Click it and Unblock the Notifications