ಕರ್ನಾಟಕದಲ್ಲಿ ಮಂಗಳವಾರ (ಮೇ 5, 2020) ಒಂದೇ ದಿನ ಮದ್ಯ ಮಾರಾಟದಿಂದ 197 ಕೋಟಿ ರುಪಾಯಿ ಸಂಗ್ರಹವಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆ ತಿಳಿಸಿದೆ. ಮದ್ಯ ಮಾರಾಟಕ್ಕೆ ಸರ್ಕಾರದಿಂದ ಒಪ್ಪಿಗೆ ಸಿಕ್ಕ ಎರಡನೇ ದಿನ ಭರ್ಜರಿ ಸೇಲ್ ಆಗಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಗೂ ಆರ್ಥಿಕ ಚಟುವಟಿಕೆ ಇನ್ನೆಷ್ಟು ಮುಂದಕ್ಕೆ ಹೋಗಬಹುದೋ ಎಂಬ ಆತಂಕದಲ್ಲಿ ಇರುವಾಗಲೇ ಆದಾಯದಲ್ಲಿ ಏರಿಕೆ ಕಾಣುತ್ತಿದೆ.
ಭಾರತದಲ್ಲಿ ಮಾಡಲಾದ ಮದ್ಯ (IML) 36 ಲಕ್ಷ ಲೀಟರ್ ಗೂ ಹೆಚ್ಚು ಮಾರಾಟವಾಗಿದೆ. ಅದರ ಬೆಲೆ 182 ಕೋಟಿ ರುಪಾಯಿ. ಇನ್ನು 7 ಲಕ್ಷ ಲೀಟರ್ ಗೂ ಹೆಚ್ಚು, ಅಂದರೆ 15 ಕೊಟಿ ಮೌಲ್ಯದ ಬಿಯರ್ ಅನ್ನು ಮಂಗಳವಾರ ಮಾರಾಟ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ಖಾತ್ರಿ ಪಡಿಸಿದೆ.
ಎರಡು ದಿನದಲ್ಲಿ 242 ಕೋಟಿ ರುಪಾಯಿ ಹಣ ಸಂಗ್ರಹ
ಲಾಕ್ ಡೌನ್ ನಿಂದ ಮದ್ಯ ಮಾರಾಟಕ್ಕೆ ಸಡಿಲಿಕೆ ಸಿಕ್ಕ ನಂತರದ ಎರಡು ದಿನದಲ್ಲಿ ಒಟ್ಟು 242 ಕೋಟಿ ರುಪಾಯಿ ಹಣ ಸಂಗ್ರಹ ಆಗಿದೆ. ಬೆಂಗಳೂರು ಸೇರಿದಂತೆ ಹಲವೆಡೆಗಳಲ್ಲಿ ದೊಡ್ಡ ದೊಡ್ಡ ಸರತಿ ಸಾಲುಗಳು ಕಂಡುಬಂದಿವೆ. ಒಟ್ಟಾರೆ ಕರ್ನಾಟಕದಲ್ಲಿ 4200 ಸ್ಟೋರ್ ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಅಂದ ಹಾಗೆ, ಅಬಕಾರಿ ಇಲಾಖೆಯು ರಾಜ್ಯದ ವ್ಯಾಪ್ತಿಗೆ ಬರುತ್ತದೆ. ವೈಪರೀತ್ಯ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕೇಂದ್ರ ಸರ್ಕಾರವು ಮದ್ಯ ಮಾರಾಟವನ್ನು ನಿಷೇಧಿಸಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
70 ಪರ್ಸೆಂಟ್ ವಿಶೇಷ ಕೊರೊನಾ ಶುಲ್ಕ
ಆದರೆ, ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚುವುದರಿಂದ ರಾಜ್ಯಕ್ಕೆ ದೊಡ್ಡ ಮೊತ್ತದ ಆದಾಯ ತಪ್ಪುತ್ತದೆ. ಈ ಮಧ್ಯೆ ದೆಹಲಿ ಸರ್ಕಾರವು ಮದ್ಯ ಮಾರಾಟದ ಮೇಲೆ 70 ಪರ್ಸೆಂಟ್ ವಿಶೇಷ ಕೊರೊನಾ ಶುಲ್ಕ ವಿಧಿಸಿದ್ದು, ಆ ಮೂಲಕ ಆದಾಯ ಸಂಗ್ರಹ ಮುಂದಾಗಿದೆ. ಇನ್ನು ದೆಹಲಿಯಲ್ಲಿ ಮದ್ಯ ಮಾರಾಟ ಮಳಿಗೆಗಳ ಮುಂದೆ ಜನಜಂಗುಳಿಯನ್ನು ತಡೆಯಲು ಸಾಧ್ಯವಿಲ್ಲ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗಲ್ಲ ಎಂದಾದ ಕೂಡಲೇ ಹಲವೆಡೆ ಮಳಿಗೆಗಳನ್ನು ಮುಚ್ಚಲಾಗಿದೆ.
22,700 ಕೋಟಿ ಆದಾಯದ ಗುರಿ
ಕಳೆದ ಆರ್ಥಿಕ ವರ್ಷದಲ್ಲಿ (ಮಾರ್ಚ್ 24, 2020) ಕರ್ನಾಟಕವು ಮದ್ಯ ಮಾರಾಟದಿಂದ 21,450 ಕೋಟಿ ರುಪಾಯಿ ಸಂಗ್ರಹ ಮಾಡಿದೆ. ಆದರೆ ಹಾಕಿಕೊಂಡಿದ್ದ ಗುರಿ 20,950 ಕೋಟಿ ರುಪಾಯಿ. ಇನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಬಕಾರಿ ಇಲಾಖೆಗೆ ಏಪ್ರಿಲ್ ತಿಂಗಳು ಪೂರ್ತಿಯಾಗಿ ಯಾವುದೇ ಆದಾಯ ಬಂದಿಲ್ಲ. ಅದರಲ್ಲಿ ಸಾಮಾನ್ಯವಾಗಿ ಬಿಯರ್ ಮಾರಾಟ ಹೆಚ್ಚಾಗಿ ಆಗುತ್ತಿತ್ತು. ಕರ್ನಾಟಕ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ 22,700 ಕೋಟಿ ಆದಾಯ ಸಂಗ್ರಹ ಗುರಿ ಹಾಕಿಕೊಂಡಿದೆ.


Click it and Unblock the Notifications