ಅರಬ್ ಗಣರಾಜ್ಯ ದುಬೈನಲ್ಲಿ ಕೂತು ಬೆಟ್ಟಿಂಗ್ ಅಪ್ಲಿಕೇಶನ್ ನಡೆಸುತ್ತಿರುವ ಮಹದೇವ್ ಆಪ್ ಕುರಿತಾದ ಆಘಾತಕಾರಿ ಮಾಹಿತಿಗಳು ಹೊರಬೀಳುತ್ತಲೇ ಇದೆ. ಈಗ, ಇದರ ಜೊತೆಗೆ ಸುಮಾರು ಹದಿನೇಳಕ್ಕೂ ಹೆಚ್ಚು ಬಾಲಿವುಡ್ ಕಲಾವಿದರ ನಂಟಿದೆ ಎನ್ನುವ ಶಾಕಿಂಗ್ ಸುದ್ದಿ ಬರುತ್ತಿದೆ.
ಮಹದೇವ್ ಆಪ್ ನ ಇಬ್ಬರು ಮಾಲೀಕರಾದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್, ದುಬೈನಲ್ಲಿ ಕೂತು ಬೆಟ್ಟಿಂಗ್ ಆಪ್ ಬ್ಯೂಸಿನೆಸ್ ನಡೆಸುತ್ತಿದ್ದಾರೆ. ಈ ಬೆಟ್ಟಿಂಗ್ ಆಪ್ ನ ಜಾಹೀರಾತಿನಲ್ಲಿ ಬಾಲಿವುಡ್ ನಟರಾದ ರಣಬೀರ್ ಕಪೂರ್ ಮತ್ತು ಶ್ರದ್ದಾ ಕಪೂರ್ ಕಾಣಿಸಿಕೊಂಡಿದ್ದರು. ಹಾಗಾಗಿ, ಇಬ್ಬರಿಗೂ ಇಡಿ (Enforcement Directorate) ನೊಟೀಸ್ ಜಾರಿ ಮಾಡಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಅರಬ್ ಗಣರಾಜ್ಯದಲ್ಲಿ ನಡೆದ ಒಂದು ಮದುವೆ ಕಾರ್ಯಕ್ರಮಕ್ಕೆ ಸುಮಾರು ಇನ್ನೂರು ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಈ ಮದುವೆಯ ಮದುವೆಯ ಸಂಬಂಧಿಸಿದ ಎಲ್ಲಾ ಮೊತ್ತವನ್ನು ಮಹದೇವ್ ಆಪ್ ಮೂಲಕ ನೀಡಲಾಗಿತ್ತು. ಹೀಗಾಗಿ, ಇದು ಇಡಿ ಕಣ್ಣಿಗೆ ಬಿದ್ದಿತ್ತು, ಅಲ್ಲಿಂದ ಇಡಿ ಪರಿಶೀಲನೆ ಆರಂಭಿಸಿತ್ತು.
ದಿನಕ್ಕೆ ಸುಮಾರು ಇನ್ನೂರು ಕೋಟಿ ರೂಪಾಯಿಯ ವಹಿವಾಟು ಈ ಆಪ್ ಮೂಲಕ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಬಳಕೆದಾರರಿಗೆ ಲಾಭ ಬರುವಂತೆ ಆಪ್ ನಲ್ಲಿ ಕೋಡಿಂಗ್ ಮಾಡಲಾಗಿದೆ. ಇದರಿಂದ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿತ್ತು.
ಆರಂಭದಲ್ಲಿ ಲಾಭ ಬರುತ್ತಿದ್ದರಿಂದ ಬಳಕೆದಾರರು ಹೆಚ್ಚಿನ ಹಣವನ್ನು ಬ್ಯಾಂಕ್ ಖಾತೆಗೆ ಜಮಾವಣೆ ಮಾಡುತ್ತಿದ್ದರು. ಬೆಟ್ಟಿಂಗ್ ನಡೆಸಲು ಮಹದೇವ್ ಆಪ್ ಎರಡು ಕೋಡ್ ಅನ್ನು ನೀಡುತ್ತಿದೆ. ಒಂದು ಅವರ ಖಾತೆಗೆ ಹಣ ಕಳುಹಿಸಲು ಇನ್ನೊಂದು ಬೆಟ್ಟಿಂಗ್ ಮಾಡಲು.
ಫೆಬ್ರವರಿಯಲ್ಲಿ ನಡೆದ ಅದ್ದೂರಿ ಮದುವೆಗೆ ಬಾಲಿವುಡ್ ಜಗತ್ತಿನ ಹಲವರು ಕಾರ್ಯಕ್ರಮವನ್ನು ನೀಡಿದ್ದರು. ಇವರಿಗೆ ವಿಮಾನ ಬುಕ್ಕಿಂಗ್ ಸೇರಿದಂತೆ ಎಲ್ಲಾ ಖರ್ಚೆವೆಚ್ಚಗಳನ್ನು ಮಹದೇವ್ ಆಪ್ ಹವಾಲ ಮೂಲಕ ಭರಿಸಿತ್ತು.
ರಣಬೀರ್ ಕಪೂರ್, ಶ್ರದ್ದಾ ಕಪೂರ್, ಕಪಿಲ್ ಶರ್ಮಾ, ಹಿನಾ ಖಾನ್ ಸೇರಿದಂತೆ ಹದಿನೇಳು ಬಾಲಿವುಡ್ ಸೆಲೆಬ್ರಿಟಿಗಳ ಜೊತೆಗೆ ಮಹದೇವ್ ಆಪ್ ಮುಖ್ಯಸ್ಥರಿಗೆ ನಂಟಿದೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ. ರಣಬೀರ್ ಮತ್ತು ಶ್ರದ್ದಾ, ಇಡಿ ವಿಚಾರಣೆಗೆ ಸಮಯಾವಕಾಶವನ್ನು ಕೇಳಿದ್ದಾರೆ.


Click it and Unblock the Notifications