ಅಸೋಸಿಯೇಷನ್ ಆಫ್ ಕರ್ನಾಟಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವರದಿಯ ಪ್ರಕಾರ, ಸಣ್ಣ ಸಾಲಗಳನ್ನು ವಿಸ್ತರಿಸುವ ವಿಚಾರದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (ಎಂಎಫ್‌ಐಗಳು) ಪ್ರಬಲವಾಗಿದೆ. ಮಾರ್ಚ್ 2023 ರ ವೇಳೆಗೆ ಕರ್ನಾಟಕದಲ್ಲಿ 1 ಕೋಟಿ ಸಾಲ ಖಾತೆಗಳಿಗೆ 46,000 ಕೋಟಿ ರೂಪಾಯಿಗಳನ್ನು ಮೈಕ್ರೋಫೈನಾನ್ಸ್ ಸಾಲವಾಗಿ ಜಮೆ ಮಾಡಲಾಗಿದೆ ಎಂದು ವರದಿ ಹೇಳುತ್ತದೆ.
ಭಾರತದಾದ್ಯಂತ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲ 3.48 ಲಕ್ಷ ಕೋಟಿ ರೂಪಾಯಿಯಾಗಿದ್ದು, 7 ಕೋಟಿ ಸಾಲಗಾರರಿದ್ದಾರೆ ಎಂದು ವರದಿ ತಿಳಿಸಿದೆ. ಮೈಕ್ರೋ ಫೈನಾನ್ಸ್ ಸಾಲಗಳು ಕಡಿಮೆ ಆದಾಯದ ವ್ಯಕ್ತಿಗಳು, ಗುಂಪುಗಳು ಮತ್ತು ಸಣ್ಣ ವ್ಯಾಪಾರಗಳಿಗೆ ಒದಗಿಸಲಾಗುವ ಸಾಲವಾಗಿದೆ.

ಕರ್ನಾಟಕದ ಏಳು ಜಿಲ್ಲೆಗಳಾದ್ಯಂತ 16,000 ಗ್ರಾಹಕರ ಪೈಕಿ ಈ ವರದಿಯ ಪ್ರಕಾರ ಶೇಕಡ 89 ರಷ್ಟು ಜನರು ಇತರ ಸಾಲಗಳಿಗಿಂತ ಅಧಿಕವಾಗಿ ಎಂಎಫ್‌ಐಗೆ ಅಧಿಕ ಆದ್ಯತೆಯನ್ನು ನೀಡುತ್ತಾರೆ. ಇನ್ನು ಶೇಕಡ 90 ರಷ್ಟು ಜನರು ಆದಾಯ ಉತ್ಪಾದನೆಗೆ ಕೊಡುಗೆ ನೀಡುವ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಹಣಕಾಸು ವರ್ಷ 2022 ರಲ್ಲಿ ರಾಜ್ಯದ ಮೈಕ್ರೋಫೈನಾನ್ಸ್ ಸಾಲದ ಪೋರ್ಟ್ಫೋಲಿಯೊವು 23,182 ಕೋಟಿ ರೂಪಾಯಿಗೆ (ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ) ಅಂದರೆ ಶೇಕಡ 13ರಷ್ಟು ಬೆಳವಣಿಗೆಯನ್ನು ಕಂಡಿದೆ. ಸಾಲದ ಖಾತೆಗಳ ಪಾಲಿನ ಮೂಲಕ, ನಾವು ನೋಡಿದಾಗ ಮೈಸೂರು ಮೊದಲ ಸ್ಥಾನದಲ್ಲಿದೆ.
ಮೈಕ್ರೋ ಫೈನಾನ್ಸ್ ಸಾಲದ ಖಾತೆಗಳ ಪಾಲಿನ ಮೂಲಕ ನೋಡಿದಾಗ ಮೈಸೂರು ರಾಜ್ಯದಲ್ಲಿ 8,07,496 ಖಾತೆಗಳನ್ನು ಹೊಂದಿದ್ದು, ಕರ್ನಾಟಕದ ಒಟ್ಟು ಮೈಕ್ರೋಫೈನಾನ್ಸ್ ಪೋರ್ಟ್‌ಫೋಲಿಯೊದಲ್ಲಿ ಶೇಕಡ 8.8ರಷ್ಟನ್ನು ಹೊಂದಿದೆ. ಇದರ ನಂತರ ಸ್ಥಾನದಲ್ಲಿ ಕ್ರಮವಾಗಿ ಬೆಳಗಾವಿ, ತುಮಕೂರು, ಮಂಡ್ಯ ಮತ್ತು ಹಾಸನ ಇದೆ.
ಎಂಎಫ್‌ಐಗಳು ನೀಡುವ ಸಾಲಗಳು ಕರ್ನಾಟಕದಲ್ಲಿ ಮಹಿಳೆಯರಿಗೆ ಆದಾಯ ಉತ್ಪಾದನಾ ಚಟುವಟಿಕೆಗಳನ್ನು ನಡೆಸಲು ಅಧಿಕ ಆದ್ಯತೆಯನ್ನು ನೀಡಿದೆ. ಹಾಗೆಯೇ ಕುಟುಂಬ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
"ಕಡಿಮೆ ಆದಾಯದ ಕುಟುಂಬಗಳಿಗೆ ಸೇರಿದ 56 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸ್ವಯಂ ಉದ್ಯೋಗ ಅವಕಾಶಗಳನ್ನು ಒದಗಿಸುವ ಅತಿ ಹೆಚ್ಚು ಮೈಕ್ರೋ ಫೈನಾನ್ಸ್ ಸಾಲದ ಪೋರ್ಟ್‌ಫೋಲಿಯೊ ಹೊಂದಿರುವ ದೇಶದ ಅಗ್ರ ಐದು ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ," ಕರ್ನಾಟಕ ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.


Click it and Unblock the Notifications