ವೇತನದ ಸಂಹಿತೆ 2019ಕ್ಕೆ ಸಂಬಂಧಿಸಿದ ನಿಯಮವನ್ನು ಈ ವರ್ಷದ ಸೆಪ್ಟೆಂಬರ್ ನೊಳಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತರುವ ಸಾಧ್ಯತೆ ಇದೆ. ಕೇಂದ್ರ ಕಾರ್ಮಿಕ ಸಚಿವಾಲಯ ಈ ಸಂಬಂಧವಾಗಿ ಕರಡು ಸಿದ್ಧಪಡಿಸಿ, ಅಧಿಕೃತ ಗೆಜೆಟ್ ನಲ್ಲಿ ಜುಲೈ 7ನೇ ತಾರೀಕು ಹಾಕಿದೆ. ಇದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕಾಗಿ 45 ದಿನಗಳ ಕಾಲ ಇರಲಿದೆ.
ಏನೂ ಆಕ್ಷೇಪಣೆ ಬಾರದಿದ್ದಲ್ಲಿ ಜಾರಿ ಆಗಲಿದೆ ಎಂದು ಪಿಟಿಐ ಗುರುವಾರ ವರದಿ ಮಾಡಿದೆ. ಕಳೆದ ವರ್ಷದ ಆಗಸ್ಟ್ ನಲ್ಲೇ ಇದಕ್ಕೆ ಸಂಸತ್ ನಲ್ಲಿ ಅನುಮೋದನೆ ಸಿಕ್ಕಿದೆ. ಹೊಸ ವೇತನ ಸಂಹಿತೆಯಿಂದ ದೇಶದ 50 ಕೋಟಿಯಷ್ಟು ಕಾರ್ಮಿಕರಿಗೆ ನೆರವಾಗಲಿದೆ. ವೇತನ ಸಂಹಿತೆ ಮಸೂದೆ, 2019 ಮಸೂದೆಯು ವೇತನ, ಬೋನಸ್ ಮತ್ತು ಇದಕ್ಕೆ ಸಂಬಂಧಿಸಿದ ವಿಷಯಗಳ ಸಮಗ್ರ ಕಾನೂನು ತಂದು, ತಿದ್ದುಪಡಿ ಆಗಿದೆ.

ಈ ಸಂಹಿತೆ ಜಾರಿಯಾದ ಮೇಲೆ ಕನಿಷ್ಠ ವೇತನ ಕಾಯ್ದೆ, ವೇತನ ಪಾವತಿ ಕಾಯ್ದೆ, ಬೋನಸ್ ಪಾವತಿ ಕಾಯ್ದೆ ಹಾಗೂ ಸಮಾನ ವೇತನ ಕಾಯ್ದೆ ನಾಲ್ಕೂ ಸೇರಿ ಒಂದೇ ಆಗುತ್ತದೆ. ಈಗ ರೂಪಿಸಿರುವ ಕರಡಿನ ಪ್ರಕಾರ ಪ್ರಮುಖಾಂಶಗಳು ಹೀಗಿವೆ:
* ಕನಿಷ್ಠ ವೇತನ ಹಾಗೂ ವೇತನ ಪಾವತಿಯ ದಿನಾಂಕ ಎಲ್ಲ ಕಡೆ ಹಾಗೂ ಎಲ್ಲ ಸಿಬ್ಬಂದಿಗೂ ಒಂದೇ ಆಗುತ್ತದೆ. ಯಾವ ವಲಯ, ವೇತನ ಮಿತಿ ಇನ್ಯಾವುದೂ ಗಣನೆಗೆ ಬರಲ್ಲ. ವೇತನ ವಿಳಂಬ ಆಗುವ ಸಮಸ್ಯೆ ಪರಿಹರಿಸಲು ಇದನ್ನು ರೂಪಿಸಲಾಗಿದೆ. ಇದರಲ್ಲಿ ಪುರುಷ ಹಾಗೂ ಮಹಿಳೆ ಅಥವಾ ತೃತೀಯ ಲಿಂಗಿ ಎಂಬ ಭೇದ ಇಲ್ಲದೆ ಎಲ್ಲರಿಗೂ ಸಮಾನ ವೇತನ ನೀಡಬೇಕಾಗುತ್ತದೆ.
* ಇನ್ನು ಕೆಲಸ ಮಾಡುವ ಅವಧಿಯಲ್ಲಿ ಎಂಟು ಗಂಟೆಯ ಕಾರ್ಯ ನಿರ್ವಹಣೆ ಅವಧಿ ಎಂದು ಕಡ್ಡಾಯ ಮಾಡಲಾಗಿದೆ. ಕೈಗಾರಿಕೆ ಕಾಯ್ದೆ ಅಡಿಯಲ್ಲಿ ಯಾವ ಬದಲಾವಣೆ ಇರಲ್ಲ. ಈ ಹಿಂದೆ ಕೊರೊನಾದ ಕಾರಣಕ್ಕೆ ಸರ್ಕಾರ ಅವಧಿ ವಿಸ್ತರಿಸಬಹುದು ಎಂಬ ನಿರೀಕ್ಷೆ ಇತ್ತು.
* ಕನಿಷ್ಠ ಜೀವನ ಮಟ್ಟವನ್ನು ಗಣನೆಗೆ ತೆಗೆದುಕೊಂಡು ಕನಿಷ್ಠ ಕೂಲಿ (ಫ್ಲೋರ್ ವೇಜ್) ನಿಗದಿ ಮಾಡಬೇಕು. ಆಹಾರ, ಬಟ್ಟೆ, ಮನೆ ಮತ್ತು ಇತರ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು, ಆ ನಂತರ ಕನಿಷ್ಠ ಕೂಲಿ ಪ್ರಮಾಣವನ್ನು ನಿಗದಿ ಮಾಡುವುದಕ್ಕೆ ಕೇಂದ್ರ ಸಲಹಾ ಸಮಿತಿ ಮುಂದಾಗಲಿದೆ.


Click it and Unblock the Notifications