ಮುಂಬೈ ಹಾಗೂ ಪುಣೆಯಲ್ಲಿ ಗುರುವಾರ ಈರುಳ್ಳಿ ಬೆಲೆ ಕೇಜಿಗೆ 100 ರುಪಾಯಿಗೆ ಏರಿಕೆ ಕಂಡಿತು. ಮಳೆಯ ಕಾರಣಕ್ಕೆ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಏರಿಕೆ ಆಗಿದೆ. ಮುಂಬೈನಲ್ಲಿ ಅಕ್ಟೋಬರ್ 21ನೇ ತಾರೀಕಿನಂದು ಈರುಳ್ಳಿ ಚಿಲ್ಲರೆ ಮಾರಾಟ ದರ ಕೇಜಿಗೆ 80ರಿಂದ 100 ರುಪಾಯಿ ಇತ್ತು. ಇನ್ನು ಪುಣೆಯಲ್ಲಿ 100ರಿಂದ 120 ರುಪಾಯಿ ಇತ್ತು,
ವರ್ತಕರೊಬ್ಬರು ಎಎನ್ ಐ ಸುದ್ದಿ ಸಂಸ್ಥೆಯ ಜತೆ ಮಾತನಾಡಿ, ಮಳೆಯ ಕಾರಣಕ್ಕೆ ಕೃಷಿಕರಿಂದ ಆಗುವ ಪೂರೈಕೆ ಮೇಲೆ ಪರಿಣಾಮ ಆಗಿದೆ. ಕಳೆದ ವಾರ ಕೇಜಿಗೆ 70 ರುಪಾಯಿ ಇದ್ದ ಈರುಳ್ಳಿ, ಈ ವಾರ 120 ರುಪಾಯಿಗೆ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ವರ್ತಕರು ಮಾತನಾಡಿ, ಬೆಲೆ ಏರಿಕೆ ಆಗಿರುವುದರಿಂದ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಖರೀದಿಸುವಂತಾಗಿದೆ ಎಂದಿದ್ದಾರೆ.
ಭಾರತದಲ್ಲೇ ಈರುಳ್ಳಿಯ ಅತಿ ದೊಡ್ಡ ಹೋಲ್ ಸೇಲ್ ಮಾರುಕಟ್ಟೆಯಾದ ಲಾಸಲ್ ಗಾಂವ್ ಎಪಿಎಂಸಿ ಅಧಿಕಾರಿಗಳು ಮಾತನಾಡಿ, ಎರಡು ತಿಂಗಳಲ್ಲಿ ಪೂರೈಕೆ 70 ಪರ್ಸೆಂಟ್ ಇಳಿಕೆ ಆಗಿದೆ. ಆಗಸ್ಟ್ ನಲ್ಲಿ ದಿನಕ್ಕೆ 22 ಸಾವಿರ ಕ್ವಿಂಟಲ್ ಇತ್ತು. ಅಕ್ಟೋಬರ್ ನಲ್ಲಿ ಕಳೆದ ವಾರ ದಿನಕ್ಕೆ 7000 ಕ್ವಿಂಟಲ್ ಗೆ ಇಳಿದಿದೆ. ಮುಂದಿನ ಮೂರು ವಾರ ಹೀಗೇ ಮುಂದುವರಿಯಲಿದೆ. ಕೆಲ ದಿನಗಳ ಕಾಲ ವಾರಕ್ಕೆ ಕ್ವಿಂಟಲ್ ಗೆ 5500- 7000 ರುಪಾಯಿಯಂತೆ ವಹಿವಾಟು ನಡೆಯಲಿದೆ ಎಂದಿದ್ದಾರೆ.

ಮಹಾರಾಷ್ಟ್ರ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ಅಂದಾಜಿನ ಪ್ರಕಾರ, ಖಾರೀಫ್ ಹಾಗೂ ಖಾರೀಫ್ ನಂತರದ ಈರುಳ್ಳಿ ಬೆಳೆಯು ಭಾರೀ ಮಳೆಯಿಂದಾಗಿ ಶೇಕಡಾ 50ರಷ್ಟು ನಷ್ಟವಾಗಿದೆ. ಈ ಮಧ್ಯೆ ಬುಧವಾರದಂದು ಸರ್ಕಾರದಿಂದ ಡಿಸೆಂಬರ್ 15ರ ತನಕ ಆಮದು ನಿಯಮ ಸಡಿಲ ಮಾಡಲಾಗಿದೆ. ದೇಶೀಯವಾಗಿ ಪೂರೈಕೆ ಹೆಚ್ಚಿಸುವ ನಿಟ್ಟಿನಲ್ಲಿ ಹೀಗೆ ಮಾಡಲಾಗಿದೆ.


Click it and Unblock the Notifications