2022 ರಲ್ಲಿ (ಜುಲೈ 1 ರಂತೆ) 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 149 ಮಿಲಿಯನ್ ಜನರಿದ್ದು, ಇದು ದೇಶದ ಜನಸಂಖ್ಯೆಯ ಸುಮಾರು ಶೇಕಡ 10.5 ರಷ್ಟಾಗಿದೆ. ಆದರೆ 2050ರ ಹೊತ್ತಿಗೆ ಇದು ದ್ವಿಗುಣವಾಗಲಿದೆ ಎಂದು ವರದಿ ಹೇಳಿದೆ. ಅದಕ್ಕೂ ಮುಖ್ಯವಾಗಿ ಪ್ರಸ್ತುತ ಶೇಕಡ 40ರಷ್ಟು ಹಿರಿಯ ನಾಗರಿಕರು ಕಡು ಬಡವರಾಗಿದ್ದರೆ, ಯಾವುದೇ ಆದಾಯವಿಲ್ಲ ಎಂದು ವರದಿ ಹೇಳುತ್ತದೆ.
ಭಾರತದಲ್ಲಿ ಹಿರಿಯ ನಾಗರಿಕರ ಜನಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ವರದಿಯೊಂದು ಎಚ್ಚರಿಕೆ ನೀಡಿದೆ. ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್ (ಐಐಪಿಎಸ್) ಸಹಯೋಗದೊಂದಿಗೆ ಯುನೈಟೆಡ್ ನೇಷನ್ಸ್ ಪಾಪ್ಯುಲೇಶನ್ ಫಂಡ್ (ಯುಎನ್‌ಎಫ್‌ಪಿಎ) 'ಇಂಡಿಯಾ ಏಜಿಂಗ್ ರಿಪೋರ್ಟ್ 2023' ಅನ್ನು ಪ್ರಕಟಿಸಿದೆ.

ಈ ವರದಿಯ ಪ್ರಕಾರ ಭಾರತದ ಐದನೇ ಒಂದು ಭಾಗದಷ್ಟು ಜನಸಂಖ್ಯೆಯು 2050 ರ ವೇಳೆಗೆ 60 ವರ್ಷಕ್ಕಿಂತ ಮೇಲ್ಪಟ್ಟ ಜನರನ್ನು ಒಳಗೊಂಡಿರುತ್ತದೆ. ಭಾರತದಲ್ಲಿ ಹಿರಿಯ ವಯಸ್ಕರ ಸಂಖ್ಯೆಯ ಒಂದು ದಶಕದ ಬೆಳವಣಿಗೆ ದರವು ಪ್ರಸ್ತುತ ಶೇಕಡ 41 ರಷ್ಟಿರಬಹುದು ಎಂದು ಅಂದಾಜು ಮಾಡಲಾಗಿದೆ. ವಯೋವೃದ್ಧರ ಜನಸಂಖ್ಯೆಯು 0-14 ವರ್ಷದ ಮಕ್ಕಳ ಸಂಖ್ಯೆಗಿಂತ ಅಧಿಕವಾಗುತ್ತದೆ ಎಂದು ವರದಿ ಹೇಳಿದೆ.
ವರದಿಯು 80 ವರ್ಷಕ್ಕಿಂತ ಮೇಲ್ಪಟ್ಟ ಜನರ ಸಂಖ್ಯೆಯು 2022 ಮತ್ತು 2050 ರ ನಡುವೆ ಸುಮಾರು ಶೇಕಡ 279ರಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಿದೆ. ಅದರಲ್ಲೂ ಮುಖ್ಯವಾಗಿ ವಿಧವೆಯರು ಮತ್ತು ಅತೀ ವಯಸ್ಸಾದ ಮಹಿಳೆಯರ ಸಂಖ್ಯೆಯು ಅಧಿಕವಾಗಿರಲಿದೆ ಎಂದು ಎಂದು ವರದಿ ತಿಳಿಸಿದೆ.
ಶೇ.40 ರಷ್ಟು ಹಿರಿಯ ನಾಗರಿಕರು ಕಡುಬಡವರು!
ಭಾರತದಲ್ಲಿ ಶೇಕಡ 40 ಕ್ಕಿಂತ ಅಧಿಕ ವೃದ್ಧರು ಕಡು ಬಡವರಾಗಿದ್ದಾರೆ. ಈ ಪೈಕಿ ಶೇಕಡ 18.7ರಷ್ಟು ವೃದ್ಧರಿಗೆ ಯಾವುದೇ ಆದಾಯವಿಲ್ಲದೆಯೇ ಜೀವನ ಸಾಗಿಸುತ್ತಿದ್ದಾರೆ. ಈ ಬಡತನ ಮಟ್ಟವು ವೃದ್ಧರ ಜೀವನದ ಗುಣಮಟ್ಟ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ವರದಿ ಹೇಳಿದೆ.
ಇನ್ನು ಭವಿಷ್ಯದಲ್ಲಿ ಹಿರಿಯ ನಾಗರಿಕರ ಆರ್ಥಿಕ ಸ್ಥಿತಿಯ ಮೇಲೆಯೂ ಈ ವರದಿ ಬೆಳಕು ಚೆಲ್ಲಿದೆ. ಅದರಲ್ಲೂ ಮಹಿಳೆಯರ ಪ್ರಮಾಣವನ್ನು ಎತ್ತಿತೋರಿಸಿದೆ. "ವೃದ್ಧಾಪ್ಯದಲ್ಲಿ ಬಡತನವು ಲಿಂಗದ ಆಧಾರವಾಗಿದೆ. ವಯಸ್ಸಾದ ವಿಧವೆ ಮಹಿಳೆಯರು, ಒಂಟಿಯಾಗಿ ವಾಸಿಸುವ, ಯಾವುದೇ ಆದಾಯವಿಲ್ಲದೆ ಇರುವ ವೃದ್ಧ ಮಹಿಳೆ ಸಂಪೂರ್ಣವಾಗಿ ಕುಟುಂಬದ ಮೇಲೆಯೇ ಅವಲಂಬಿತರಾಗಿರುತ್ತಾರೆ," ಎಂದು ವರದಿ ತಿಳಿಸಿದೆ.
"ಒಟ್ಟಾರೆಯಾಗಿ, ಭಾರತದಲ್ಲಿ ಐದನೇ ಎರಡು ಭಾಗದಷ್ಟು ವಯಸ್ಸಾದವರು ಸಂಪತ್ತಿನ ವಿಚಾರದಲ್ಲಿ ಬಡವರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡ 4.2ರಷ್ಟು, ಪಂಜಾಬ್‌ನಲ್ಲಿ ಶೇಕಡ 5 ರಷ್ಟು, ಲಕ್ಷದ್ವೀಪದಲ್ಲಿ ಶೇಕಡ 40.2 ರಷ್ಟು, ಛತ್ತೀಸ್‌ಗಢದಲ್ಲಿ ಶೇಕಡ 47ರಷ್ಟು ಹಿರಿಯ ನಾಗರಿಕರು ಬಡವರಾಗಿದ್ದಾರೆ," ಎಂದು ವರದಿ ಉಲ್ಲೇಖಿಸಿದೆ.
"ಕೆಲಸ, ಪಿಂಚಣಿ ಮತ್ತು ಆದಾಯವನ್ನು ವಿಶ್ಲೇಷಣೆ ಮಾಡಿದಾಗ ಶೇಕಡ 18.7 ರಷ್ಟು ವೃದ್ಧರಿಗೆ ಯಾವುದೇ ಆದಾಯವಿಲ್ಲ ಎಂದು ತಿಳಿದುಬಂದಿದೆ. ಈ ಪ್ರಮಾಣವು 17 ರಾಜ್ಯಗಳಲ್ಲಿ ರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಿದೆ. ಉತ್ತರಾಖಂಡದಲ್ಲಿ ಶೇಕಡ 19.3 ರಷ್ಟು, ಲಕ್ಷದ್ವೀಪದಲ್ಲಿ ಶೇಕಡ 42.4ರಷ್ಟು ಹಿರಿಯ ನಾಗರಿಕರಿಗೆ ಕೆಲಸ, ಪಿಂಚಣಿ ಮತ್ತು ಆದಾಯವಿಲ್ಲ ಎಂದು ವರದಿ ಬಹಿರಂಗಪಡಿಸಿದೆ.
ಪ್ರಸ್ತುತ, ಭಾರತದಲ್ಲಿ ಶೇಕಡ 65 ರಷ್ಟು ಭಾರತೀಯರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅಂದರೆ ದೇಶದಲ್ಲಿ ಹದಿಹರೆಯದವರು ಮತ್ತು ಯುವಜನರ ಸಂಖ್ಯೆ ಅಧಿಕವಾಗಿದೆ. ಆದರೆ ಹಿರಿಯ ನಾಗರಿಕರ ಸಂಖ್ಯೆಯು ಪ್ರಸ್ತುತ ಶೇಕಡ 10.5 ರಷ್ಟಿದೆ.
ವೃದ್ಧರ ಜನಸಂಖ್ಯೆಯು ದೇಶದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಹಿಮಾಚಲ ಪ್ರದೇಶ ಮತ್ತು ಪಂಜಾಬ್ 2021 ರಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ವೃದ್ಧರನ್ನು ಹೊಂದಿದೆ. 2036 ರ ವೇಳೆಗೆ ಈ ಸಂಖ್ಯೆಯು ಇನ್ನಷ್ಟು ಅಧಿಕವಾಗುವ ನಿರೀಕ್ಷೆಯಿದೆ. ಇನ್ನು ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿಯೂ ವೃದ್ಧರ ಪ್ರಮಾಣ ಅಧಿಕವಾಗುವ ನಿರೀಕ್ಷೆಯಿದೆ. ಆದರೆ ಭಾರತದ ಸರಾಸರಿ ಮಟ್ಟಕ್ಕಿಂತ ಕಡಿಮೆ ಇರಲಿದೆ.


Click it and Unblock the Notifications