ಸಾರ್ವಜನಿಕ ವಲಯದ (ಪಿಎಸ್ ಯು) ಕೆಲವು ಫಾರ್ಮಾಸ್ಯುಟಿಕಲ್ ಕಂಪೆನಿಗಳ ಬಂಡವಾಳ ಹಿಂತೆಗೆತಕ್ಕೆ ಸರ್ಕಾರವು ನಿರ್ಧಾರ ಮಾಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಭಾನುವಾರ ತಿಳಿಸಿದ್ದಾರೆ. ಫಾರ್ಮಾಸ್ಯುಟಿಕಲ್ ಇಂಡಸ್ಟ್ರಿ ಕ್ಯಾಪ್ಟನ್ ಗಳು ಹಾಗೂ ಫಾರ್ಮಾ ಒಕ್ಕೂಟದ ಪದಾಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಅವರು ಮಾತನಾಡಿದರು.
ಕೆಲವು ಪಿಎಸ್ ಯು ಫಾರ್ಮಾಗಳ ಬಂಡವಾಳ ಹಿಂತೆಗೆತಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಭಾರತದ ಕಂಪೆನಿಗಳು ಪಿಎಸ್ ಯುಗಳನ್ನು ಬಳಸಿಕೊಂಡು ಉತ್ಪಾದನೆಯಲ್ಲಿ ಮಾದರಿ ರೂಪಿಸಬೇಕು ಎಂದು ಸಚಿವ ಗೋಯಲ್ ಹೇಳಿದ್ದಾರೆ.
ಇಂಡಿಯನ್ ಡ್ರಗ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್, ರಾಜಸ್ಥಾನ್ ಡ್ರಗ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಅನ್ನು ಮುಚ್ಚಲು 2016ರಲ್ಲಿ ಸರ್ಕಾರವು ನಿರ್ಧರಿಸಿತ್ತು. ಇದರ ಜತೆಗೆ ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್ ಹಾಗೂ ಬೆಂಗಾಲ್ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಪಾಲನ್ನು ಸ್ವಲ್ಪ ಭಾಗ ಮಾರಾಟ ಮಾಡಲು ಘೋಷಣೆ ಮಾಡಿತ್ತು.

2018-19ನೇ ಸಾಲಿನಲ್ಲಿ 19.14 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಭಾರತದ ಫಾರ್ಮಾ ವಲಯದ ರಫ್ತು ಇದೆ. 2019- 20ರಲ್ಲಿ ಈ ಪ್ರಮಾಣ 20.7 ಬಿಲಿಯನ್ ಅಮೆರಿಕನ್ ಡಾಲರ್ ಗೆ ಏರಿಕೆ ಆಗುವ ಮೂಲಕ 8.2 ಪರ್ಸೆಂಟ್ ಪ್ರಗತಿ ದಾಖಲಿಸಿತ್ತು.
ಸಚಿವರು ಮಾತನಾಡಿ, ಕೇಂದ್ರ ಸರ್ಕಾರವು ಫಾರ್ಮಾಸ್ಯುಟಿಕಲ್ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ವಿವರಣೆ ನೀಡಿದ್ದಾರೆ. ಇನ್ನು ಪೂರ್ವ ಯುರೋಪ್, ರಷ್ಯಾದಲ್ಲಿನ ಅವಕಾಶಗಳ ಬಗ್ಗೆ ಹೇಳಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಭಾರತವನ್ನು ವಿಶ್ವದ ಫಾರ್ಮಸಿ ಎಂದು ಗುರುತಿಸಲಾಗಿದೆ. ನೂರಾ ಇಪ್ಪತ್ತು ದೇಶಗಳು ಕಳೆದ ಎರಡು ತಿಂಗಳಲ್ಲಿ ಅಗತ್ಯ ಔಷಧಗಳನ್ನು ಪಡೆದಿವೆ. ಅವುಗಳ ಪೈಕಿ ನಲವತ್ತು ದೇಶಗಳಿಗೆ ಅನುದಾನದ ರೀತಿಯಲ್ಲಿ, ಉಚಿತವಾಗಿ ಔಷಧ ನೀಡಲಾಗಿದೆ ಎಂದು ಗೋಯಲ್ ಹೇಳಿದ್ದಾರೆ.


Click it and Unblock the Notifications