ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ ಹೂಡಿಕೆ ಮಾಡಿದವರಿಗೆ ಶೀಘ್ರದಲ್ಲೆ ಬಡ್ಡಿದರ ವಿಚಾರದಲ್ಲಿ ಸಿಹಿಸುದ್ದಿ ಲಭ್ಯವಾಗುವ ಸಾಧ್ಯತೆಯಿದೆ. ಹೌದು, ಈಗ ನಾವು ವರ್ಷದ ಅಂತ್ಯದಲ್ಲಿದ್ದೇವೆ, ಈ ವರ್ಷ ಅಂತ್ಯಕ್ಕೂ ಮುನ್ನವೇ ಪಿಪಿಎಫ್ ಬಡ್ಡಿದರವನ್ನು ಏರಿಕೆ ಮಾಡುವ ಸಾಧ್ಯತೆ ಬಗ್ಗೆ ವರದಿಯಾಗಿದೆ.
ಡಿಸೆಂಬರ್ 31, 2022ಕ್ಕೂ ಮುನ್ನ ಕೇಂದ್ರ ಸರ್ಕಾರವು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಬಡ್ಡಿದರವನ್ನು ಹೆಚ್ಚಳ ಮಾಡುವ ನಿರೀಕ್ಷೆಯಿದೆ. ತ್ರೈಮಾಸಿಕ ಆಧಾರದಲ್ಲಿ ದರ ಏರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಂದು ವೇಳೆ ಸರ್ಕಾರವು ಪಿಪಿಎಫ್ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದಿದ್ದರೆ, ಪ್ರಸ್ತುತ ಇರುವ ಪಿಪಿಎಫ್ ಬಡ್ಡಿದರವೇ ಹೊಸ ವರ್ಷ 2023ರ ಮೊದಲ ತ್ರೈಮಾಸಿಕಕ್ಕೆ ಅನ್ವಯವಾಗಲಿದೆ. ಪ್ರಸ್ತುತ ಪಿಪಿಎಫ್ ಬಡ್ಡಿದರ ಶೇಕಡ 7.1 ಆಗಿದೆ.
ರೆಪೋ ದರ ಹೆಚ್ಚಾದಂತೆ ಪಿಪಿಎಫ್ ಬಡ್ಡಿದರ ಹೆಚ್ಚಾಗುತ್ತಾ?
ಸರ್ಕಾರವು ಪಿಪಿಎಫ್ ಬಡ್ಡಿದರವನ್ನು ಏರಿಕೆ ಮಾಡುವ ನಿರೀಕ್ಷೆಯಲ್ಲಿ ಪಿಪಿಎಫ್ ಚಂದಾದಾರರು ಇದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಹೆಚ್ಚಳ ಮಾಡಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರ ಹಾಗೂ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಹೀಗೆಯೇ ಪಿಪಿಎಫ್ ಬಡ್ಡಿದರವನ್ನು ಕೂಡಾ ಹೆಚ್ಚಳ ಮಾಡಬಹುದು ಎಂಬುವುದು ಕೆಲವರ ನಿರೀಕ್ಷೆಯಾಗಿದೆ. ಆದರೆ ಸಾಮಾನ್ಯವಾಗಿ ರೆಪೋ ದರವು ನೇರವಾಗಿ ಪಿಪಿಎಫ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರೆಪೋ ದರದ ಆಧಾರದಲ್ಲಿ ಪಿಪಿಎಫ್ ಬಡ್ಡಿದರ ಬದಲಾವಣೆಯಾಗದು.
ತ್ರೈಮಾಸಿಕ ಆಧಾರದಲ್ಲಿ ಬಡ್ಡಿದರ ಪರಿಷ್ಕರಣೆ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಬಡ್ಡಿದರವನ್ನು ಕೇಂದ್ರ ಸರ್ಕಾರವು ತ್ರೈಮಾಸಿಕ ಆಧಾರದಲ್ಲಿ ಪರಿಷ್ಕರಣೆ ಮಾಡುತ್ತದೆ. ಈ ಹಿಂದೆ ಮೂರು ತಿಂಗಳ ಹಿಂದೆ ಕೇಂದ್ರ ಸರ್ಕಾರ ಬಡ್ಡಿದರವನ್ನು ಪರಿಷ್ಕರಿಸಬೇಕಾಗಿತ್ತು. ಆದರೆ ಸರ್ಕಾರ ಯಾವುದೇ ಪರಿಷ್ಕರಣೆ ಮಾಡದೆ, ಯಥಾಸ್ಥಿತಿ ಕಾಯ್ದುಕೊಂಡಿದೆ. ಈಗ ಡಿಸೆಂಬರ್ 2022ಕ್ಕೂ ಮುನ್ನ ಪಿಪಿಎಫ್ ಬಡ್ಡದರವನ್ನು ಸರ್ಕಾರ ಪರಿಷ್ಕರಿಸಬೇಕಾಗಿದೆ. ಪ್ರಸ್ತುತ ಬಡ್ಡಿದರ ಏರಿಕೆ ಮಾಡಲಾಗುತ್ತದೆಯೇ, ಇಲ್ಲವೇ ಎಂದು ಸರ್ಕಾರ ಇನ್ನೂ ತಿಳಿಸಿಲ್ಲ. ಬಡ್ಡಿದರವನ್ನು ಪರಿಷ್ಕರಿಸಿದರೆ ಹೊಸ ವರ್ಷದ ಮೊದಲ ತ್ರೈಮಾಸಿಕ ಹೊಸ ಬಡ್ಡಿದರ ಅನ್ವಯವಾಗಲಿದೆ.
ಪಿಪಿಎಫ್ ಬಡ್ಡಿದರ ಏರಿಳಿತ
2018ರ ಸೆಪ್ಟೆಂಬರ್‌ನಲ್ಲಿ ಪಿಪಿಎಫ್ ಬಡ್ಡಿದರ ಶೇಕಡ 7.4 ಆಗಿತ್ತು. ಅದಾದ ಬಳಿಕ 2019ರ ಜೂನ್‌ನಲ್ಲಿ ಬಡ್ಡಿದರವನ್ನು ಕೇಂದ್ರ ಸರ್ಕಾರವು ಶೇಕಡ 8ಕ್ಕೆ ಏರಿಕೆ ಮಾಡಿದೆ. ಆದರೆ ಅದಾದ ಬಳಿಕ ನಿರಂತರವಾಗಿ ಪಿಪಿಎಫ್ ಬಡ್ಡಿದರವನ್ನು ಇಳಿಸಲಾಗುತ್ತಿದೆ. ಪ್ರಸ್ತುತ ಬಡ್ಡಿದರವು ಶೇಕಡ 7.1ಕ್ಕೆ ಇಳಿದಿದೆ. ಇನ್ನು ಸುಕನ್ಯ ಸಮೃದ್ಧಿ ಯೋಜನೆ ಹಾಗೂ ಎನ್‌ಎಸ್‌ಸಿ ಬಡ್ಡಿದರವನ್ನು ಕೂಡಾ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಸ್ಥಿರವಾಗಿರಿಸಿದೆ. ಸುಕನ್ಯ ಸಮೃದ್ಧಿ ಯೋಜನೆಯ ಬಡ್ಡಿದರ ಪ್ರಸ್ತುತ ಶೇಕಡ 7.60ರಷ್ಟಿದೆ. ಎನ್‌ಎಸ್‌ಸಿ ಬಡ್ಡಿದರ ಪ್ರಸ್ತುತ ಶೇಕಡ 6.8 ಆಗಿದೆ.


Click it and Unblock the Notifications